ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಸ್ಮರಣೀಯವಾಗಿದ್ದು, ಉತ್ತಮ ಜೀವನ ರೂಪಿಸಿಕೊಳ್ಳಲು ಹಾಕಿಕೊಟ್ಟ ಆದರ್ಶಪ್ರಾಯ ಅಡಿಪಾಯ ಮಹತ್ವದ್ದಾಗಿದೆ ಹಾಗೂ ಇಂದಿನ ಕಾರ್ಯಕ್ರಮ ಔಚಿತ್ಯಪೂರ್ಣವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಅಭಿಪ್ರಾಯಪಟ್ಟರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ಶ್ರೀಯುತರ ಕೊಡುಗೆ ಅಮೂಲ್ಯವಾಗಿದೆ. ಜತೆಗೆ ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ, ಒಳ್ಳೆಯ ರೀತಿಯಲ್ಲಿ ಜೀವನ ನಡೆಸೋಣವೆಂದು ಕರೆಕೊಟ್ಟರು.ಸಿವಿಲ್ ನ್ಯಾಯಾಧೀಶರಾದ ಚೇತನಾ ಅವರು ಮಾತನಾಡಿ, ಹುಟ್ಟುವುದು ಮುಖ್ಯವಲ್ಲ, ಆದರೆ ಯಾವ ರೀತಿಯ ಹೆಸರು ಸಮಾಜದಲ್ಲಿ ಪಡೆದಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಚರಣೆಯನ್ನು ರಾಷ್ಟ್ರದಲ್ಲಿ ಎಲ್ಲಡೆ ಆಚರಣೆ ಮಾಡುತ್ತಿರುವುದು ಶ್ರೀಯುತರ ಸಾಧನೆಗೆ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು. ಅಪಾರ ಪಾಂಡಿತ್ಯದ ಜತೆಗೆ ಹಲವಾರು ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಿ, ಅಗಾಧವಾದ ಜ್ಞಾನವನ್ನು ಹೊಂದಿದ ಡಾ. ಬಿ.ಆರ್.ಅಂಬೇಡ್ಕರ್ ಅವರು ಬಾಲ್ಯದಲ್ಲಿ ನಾನಾ ರೀತಿಯ ಶೋಷಣೆಗೆ ಒಳಗಾಗಿ ಸಾಕಷ್ಟು ಹಿಂಸೆ ಅನುಭವಿಸಿದ್ದರು. ಮುಂದಿನ ಪೀಳಿಗೆ ಯಾವುದೇ ರೀತಿಯ ಹಿಂಸೆ ಅನುಭವಿಸಬಾರದು ಎಂಬ ದೃಷ್ಠಿಯಿಂದ ಹೋರಾಟ ಮಾಡಿ, ಶೋಷಣೆ, ಅಸಮಾನತೆ, ತಾರತಮ್ಯ ಇರಬಾರದು ಎಂಬ ಗುರಿಯನ್ನು ಇಟ್ಟಿಕೊಂಡು ಎಲ್ಲಾ ಕರ್ತವ್ಯ ನಿರ್ವಹಿಸಿದ್ದಾರೆ. ಅವರು ನಮ್ಮ ಪೀಳಿಗೆಗೆ ನೀಡಿದ ವಿಚಾರಧಾರೆಗಳು, ಆದರ್ಶಗಳು ಹಾಗೂ ವ್ಯಕ್ತಿತ್ವದ ಪಾಲನೆ ಮಾಡೋಣವೆಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಎಚ್.ಕೆ.ಹರೀಶ್ ಮಾತನಾಡಿದರು. ಹಿರಿಯ ವಕೀಲರಾದ ರಾಮಪ್ರಸನ್ನ, ಪುರುಷೋತಮ್, ರವೀಶ್, ಅರುಣ್ ಕುಮಾರ್, ಸಿ.ಎಂ.ಅಶೋಕ್, ಯು.ಆರ್.ಸತೀಶ್, ಮೈತ್ರಿ ಕೆ.ಎನ್., ಕೆ.ಎಸ್.ಪ್ರಕಾಶ್, ಸುನೀಲ್, ರಾಜಶೇಖರ್, ಜಯಪ್ರಕಾಶ್, ಶ್ವೇತ, ಸುನೀಲ್, ರಾಮಪ್ರಸಾದ್, ಶಿವಕುಮಾರ್, ಮಂಜುನಾಥ್, ನವೀನ್, ಶಿವಣ್ಣ, ಶಶಿಕುಮಾರ್, ಲಾವಣ್ಯ, ಆಶಾಕುಮಾರಿ, ಆಶಾರಾಣಿ, ಸಂಗೀತ, ರಾಣಿ, ಜ್ಯೋತಿ, ಅನುಷಾ, ಚಂದ್ರಶೇಖರ್, ರಾಘವೇಂದ್ರ, ಪ್ರವೀಣ್, ಕೃಷ್ಣಮೂರ್ತಿ, ಪುನೀತ್, ಪ್ರಶಾಂತ್, ಕೃಷ್ಣೇಗೌಡ ಇದ್ದರು.