ಸಾರಾಂಶ
ಗದಗ: ಮನುಷ್ಯರನ್ನು ಗುಲಾಮರನ್ನಾಗಿ ಮಾಡಿದವರನ್ನು ನಾವು ನೋಡಿದ್ದೇವೆ, ಆದರೆ ಗುಲಾಮರನ್ನು ರಾಜ ಮಹಾರಾಜರನ್ನಾಗಿಸಿದವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.
ಅವರು ಬುಧವಾರ ಆದರ್ಶ ಶಿಕ್ಷಣ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದ ಸಿಲ್ವರ್ ಜುಬ್ಲಿ ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಆದರ್ಶ ಶಿಕ್ಷಣ ಸಂಸ್ಥೆಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡುವಲ್ಲಿ ಹಾಗೂ ಪ್ರಬುದ್ಧ ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್ ಪಾತ್ರ ಅಭಿಸ್ಮರಣೀಯ. ತಮ್ಮೆಲ್ಲರಿಗೂ ವಿದ್ಯಾಭ್ಯಾಸ, ಶಿಕ್ಷಣ ಓದು ಎಷ್ಟು ಮುಖ್ಯ ಎಂಬುದನ್ನು ಡಾ.ಅಂಬೇಡ್ಕರ್ ನೋಡಿ ಅರಿಯಬೇಕಿದೆ. ನಮ್ಮಲ್ಲಿ ಸಾಧನೆ ಮಾಡಲು ಇಚ್ಛಾಶಕ್ತಿ ಬೇಕು, ಇಚ್ಛಾಶಕ್ತಿ ಇದ್ದಲ್ಲಿ ಸಾಧನೆ ಸಾಧ್ಯ ಎಂದರು. ಹುಲಕೋಟಿ ಜಿಸಿಟಿಎಂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರ್ಜುನ್ ಗೋಳಸಂಗಿ ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಮಾತನಾಡಿ, ಸ್ವಾಭಿಮಾನ ನಮ್ಮತನ ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗೋಣ ಎಂದರು.ಆದರ್ಶ ಶಿಕ್ಷಣ ಸಮಿತಿ ಅಧ್ಯಕ್ಷ ಕೆ.ವಿ.ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಆದರ್ಶ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಗಿರಿರಾಜಕುಮಾರ್ ಸಂವಿಧಾನದ ಪ್ರಸ್ತಾವನೆ ಓದಿಸಿದರು. ಉಪಪ್ರಾಚಾರ್ಯ ಡಾ. ವಿ.ಟಿ.ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ.ಹಾಜರಿದ್ದರು.
ಗದಗ ದಲಿತ ಕಲಾ ಮಂಡಳಿ ಅಧ್ಯಕ್ಷ ಶರೀಫ್ ಬೆಳೆಯಲಿ ಹಾಗೂ ಸಂಗಡಿಗರು ಅಂಬೇಡ್ಕರ್ ಕುರಿತು ಗೀತೆ ಪ್ರಸ್ತುತ ಪಡಿಸಿದರು. ಡಾ. ಬಿ.ಆರ್.ಅಂಬೇಡ್ಕರ್ ಕುರಿತು ರಸಪ್ರಶ್ನೆ ಪ್ರಬಂಧ ಸ್ಪರ್ಧೆ,ಆಶುಭಾಷಣ, ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಆದರ್ಶ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಬಿ.ಪಿ. ಜೈನರ್ ನಿರೂಪಿಸಿದರು.