ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಕ್ಕೆ ಜ್ಞಾನದ ಸಂಕೇತವಾಗಿದ್ದಾರೆ. ಆದರೆ ಇಂದು ಜನರು ತಮ್ಮ ಸ್ವಪ್ರತಿಷ್ಠೆಗಳನ್ನು ತೋರಿಸಿಕೊಳ್ಳುವ ಸಲುವಾಗಿ ಅಂಬೇಡ್ಕರ್‌ರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಅಭಿಪ್ರಾಯಪಟ್ಟರು.ತಾಲೂಕಿನ ಬೇಗೂರಿನ ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘ ಏರ್ಪಡಿಸಿದ್ದ ಬುದ್ಧ ಬಸವ ಅಂಬೇಡ್ಕರ್ ಹಬ್ಬದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಒಂದು ಹಳ್ಳೀಲಿ ಅದ್ಧೂರಿಯಾಗಿ ಅಂಬೇಡ್ಕರ್ ಮೆರವಣಿಗೆ ಮಾಡಿದರೆ, ಅವರಿಗಿಂತ ನಾವೇನು ಕಮ್ಮಿ ಎಂದು ಅದನ್ನು ಮೀರಿ ನಾವೂ ಮೆರವಣಿಗೆ ಮಾಡಬೇಕು ಎಂದು ಒಬ್ಬರನ್ನು ನೋಡಿ ಒಬ್ಬರು ಪೈಪೋಟಿಯಲ್ಲಿ ಮೆರವಣಿಗೆ ಮಾಡುತ್ತಾ ಹೋದರೆ ಮುಂದೊಮ್ಮೆ ಅಂಬೇಡ್ಕರ್ ಕೇವಲ ಜನರ ಪ್ರತಿಷ್ಠೆಗಾಗಿ ಇರುವ ಉತ್ಸವ ಮೂರ್ತಿಯಾಗಿ ಬಿಡುವ ಅಪಾಯವಿದೆ ಎಂದರು.
ಪೈಪೋಟಿ ಮಾಡುವುದೇ ಆದರೆ ಬಾಬಾ ಸಾಹೇಬರು ತೋರಿದ ಜ್ಞಾನಮಾರ್ಗದಲ್ಲಿ ಜ್ಞಾನಗಳಿಸುವುದರಲ್ಲಿ ಮತ್ತು ಸಂಘಟಿತರಾಗುವುದರಲ್ಲಿ ಪೈಪೋಟಿ ಮಾಡಿ ಎಂದು ಸಲಹೆ ನೀಡಿದರು.ಊರೂರಲ್ಲೂ ವಿದ್ಯಾವಂತರಾಗುವಲ್ಲಿ,ಮೌಢ್ಯ ತೊರೆಯುವುದರಲ್ಲಿ ಜಾಗೃತಿ ಮೂಡಿಸಿ ಆರ್ಥಿಕವಾಗಿ ಸದೃಢ ರಾಗುವುದರಲ್ಲಿ ಯುವಜನರು ಪೈಪೋಟಿಗೆ ಇಳಿದು ಬಾಬಾಸಾಹೇಬರು ಆಶಿಸಿದಂತೆ ರಾಜ್ಯಾಧಿಕಾರ ಗಳಿಸಿ ಎಂದು ನೆರೆದಿದ್ದ ಯುವಕರಿಗೆ ಕರೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಎಚ್. ಸಿ.ಮಹದೇವಪ್ಪರ ಆಪ್ತ ಕಾರ್ಯದರ್ಶಿ ಸ್ನೇಹಜೀವಿ ಹೊರೆಯಾಲ ಗೋಪಾಲ್ ಮಾತನಾಡಿ. ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲ,ಇಡೀ ಭಾರತೀಯರಿಗಾಗಿ ಅದ್ಬುತ ಸಂವಿಧಾನ ಬರೆದು ಅರ್ಪಿಸಿದ ಅಂಬೇಡ್ಕರ್ ಅವರನ್ನು ಸರ್ವರೂ ಸ್ಮರಿಸಬೇಕು ಎಂದರು. ಯುವಜನರು ಅಂಬೇಡ್ಕರ್ ಅವರನ್ನು ಚನ್ನಾಗಿ ಅರಿತು ಬದುಕು ಕಟ್ಟಿಕೊಳ್ಳಬೇಕು.ನಮ್ಮ ಯುವಜನರು ಆರ್ಥಿಕವಾಗಿ ಮುಂದೆ ಬರಲು ನನ್ನಿಂದ ಆಗುವ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಸ್ವಾವಲಂಬನೆ ಕಡೆಗೆ ಚಿಂತಿಸಿ ಸಲಹೆ ನೀಡಿದರು.ಗ್ರಾಪಂ ಅಧ್ಯಕ್ಷೆ ಜಯಮ್ಮ,ಉಪಾಧ್ಯಕ್ಷ ಗುರುಸ್ವಾಮಿ,ಪಿಎಸಿಸಿ ಬ್ಯಾಂಕ್ ನಿರ್ದೇಶಕ ಸದಾ, ಸೇರಿದಂತೆ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು,ಯಜಮಾನರು,ಯುವಕರು ಇದ್ದರು.