ಅಂತರವಳ್ಳಿಯಲ್ಲಿ ಅಂಬೇಡ್ಕರ್ ಜಯಂತಿ: ಸಾಂಸ್ಕೃತಿಕ ಹಬ್ಬದ ಸಂಭ್ರಮ

| Published : Apr 16 2024, 01:04 AM IST

ಅಂತರವಳ್ಳಿಯಲ್ಲಿ ಅಂಬೇಡ್ಕರ್ ಜಯಂತಿ: ಸಾಂಸ್ಕೃತಿಕ ಹಬ್ಬದ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಬಡತನದ ನಡುವೆಯೂ ಉತ್ತಮ ಶಿಕ್ಷಣ ಪಡೆದು ತಮ್ಮ ಅದ್ವಿತೀಯ ಜ್ಞಾನದ ಮೂಲಕ ದೇಶದ ಜನರಿಗೆ ಅಗತ್ಯವಿರುವ ಉತ್ತಮ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ್ದಾರೆ. ದೇಶದ ಎಲ್ಲಾ ಬಗೆಯ ಜನರಿಗೂ ಶಿಕ್ಷಣ, ಸ್ವಾತಂತ್ರ್ಯದ ಜೊತೆಗೆ ಸರ್ವರಿಗೂ ಸಮಾನವಾದ ಹಕ್ಕು ಅವಕಾಶಗಳನ್ನು ಒದಗಿಸಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಅಂತರವಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 133 ನೇ ಜಯಂತ್ಯುತ್ಸವವನ್ನು ಗ್ರಾಮಸ್ಥರು ಸಾಂಸ್ಕೃತಿಕ ಹಬ್ಬದಂತೆ ವೈಭವ ಪೂರಕವಾಗಿ ಆಚರಿಸಿದರು.

ಗ್ರಾಮದ ಬೀದಿಗಳ ಮನೆ ಮುಂದೆ ವಿವಿಧ ಬಗೆಯ ಬಣ್ಣದ ರಂಗೋಲಿಗಳು ಮತ್ತು ನೀಲಿ ಬಾವುಟಗಳು ರಾರಾಜಿಸುತ್ತಿದ್ದವು. ಮಾವಿನ ತಳಿರು ತೋರಣಗಳಿಂದ ಗ್ರಾಮದ ಬೀದಿಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಗ್ರಾಮದಲ್ಲಿ ಸಾಂಸ್ಕೃತಿಕ ಹಬ್ಬದ ವಾತಾವರಣ ಮಾರ್ಪಟ್ಟಿತ್ತು.

ಸಿದ್ದೇಶ್ವರ ಸ್ವಾಮಿ ಬೆಟ್ಟದ ತಪ್ಪಲಿನಿಂದ ಅಂಬೇಡ್ಕರ್ ಭಾವಚಿತ್ರ ಮತ್ತು ಪುತ್ಥಳಿಯನ್ನು ತೆರೆದ ಸಾರೋಟಿನಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದೀಪಾಲಂಕಾರ ಕಣ್ಮನ ಸೆಳೆಯಿತು.

ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ವೀರಗಾಸೆ ಕುಣಿತ ಚಿಲಿಪಿಲಿ ಗೊಂಬೆ ಸೇರಿದಂತೆ ಹಲವು ಬಗೆಯ ಜಾನಪದ ಪ್ರಕಾರಗಳು ನೆರೆದಿದ್ದ ನೋಡುಗರ ಕಣ್ಮನ ಸೆಳೆಯಿತು. ಹೊನ್ನಾಯಕನಹಳ್ಳಿ ತಮಟೆ ಕಲಾವಿದ ಗುಂಡ ಮತ್ತು ತಂಡದ ಸದಸ್ಯರ ತಮಟೆ ನಗಾರಿ ವಾದನಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಗ್ರಾಮದ ಹೆಣ್ಣು ಮಕ್ಕಳು, ಯುವಕರು ಮತ್ತು ಅಂಬೇಡ್ಕರ್ ಅಭಿಮಾನಿಗಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಮೆರವಣಿಗೆಯ ನಂತರ ರಾತ್ರಿ ಗ್ರಾಮಸ್ಥರಿಗೆ ಅಂಬೇಡ್ಕರ್ ಹಬ್ಬದ ಪ್ರಯುಕ್ತ ಹೋಳಿಗೆ ಊಟ ಉಣ ಬಡಿಸಲಾಯಿತು.

ಗ್ರಾಮದ ಹಿರಿಯ ಮುಖಂಡರಾದ ಕೆ.ಸಿದ್ದಯ್ಯ ಮಾತನಾಡಿ, ತೀವ್ರ ಬಡತನದ ನಡುವೆಯೂ ಉತ್ತಮ ಶಿಕ್ಷಣ ಪಡೆದು ತಮ್ಮ ಅದ್ವಿತೀಯ ಜ್ಞಾನದ ಮೂಲಕ ದೇಶದ ಜನರಿಗೆ ಅಗತ್ಯವಿರುವ ಉತ್ತಮ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ್ದಾರೆ. ದೇಶದ ಎಲ್ಲಾ ಬಗೆಯ ಜನರಿಗೂ ಶಿಕ್ಷಣ, ಸ್ವಾತಂತ್ರ್ಯದ ಜೊತೆಗೆ ಸರ್ವರಿಗೂ ಸಮಾನವಾದ ಹಕ್ಕು ಅವಕಾಶಗಳನ್ನು ಒದಗಿಸಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಈ ವೇಳೆ ಎಂ.ಎಚ್.ಅಮಿತ್, ಎ.ಬಿ.ಅನಿಲ್, ಎ.ಎಸ್.ಶ್ರೀಧರ, ಎ.ಸಿ.ಕೃಷ್ಣಮೂರ್ತಿ, ಎ.ಬಿ.ಕುಮಾರ ಸೇರಿದಂತೆ ನೂರಾರು ಸದಸ್ಯರು ಮತ್ತು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.