ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲೂಕು ಕೋಟಾಲದಿನ್ನೆ ಗ್ರಾಮದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಮಂಗಳವಾರ ನಡೆಯಿತು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೆ.ಕೆ.ಹೊನ್ನಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅಂಬೇಡ್ಕರ್ ರವರ ಆಶಯಗಳ ಬಗ್ಗೆ ಮಾತನಾಡಿ,
ಡಾ. ಬಿ.ಆರ್.ಅಂಬೇಡ್ಕರ್ ಅಸಮಾನತೆ, ಅಸ್ಪೃಶ್ಯತೆಯನ್ನು ಸ್ವತಃ ಕಂಡು ಇದಕ್ಕೆ ಮದ್ದು ನೀಡಿದರು. ಎಲ್ಲರಿಗೂ ಬದುಕುವ ಹಕ್ಕು, ಸಮಾನತೆಯ ಹಕ್ಕಿಗಾಗಿ ಹೋರಾಡಿದ ಮಹಾ ಚೇತನ ಹಾಗೂ ಮೊಟ್ಟ ಮೊದಲ ಬಾರಿಗೆ ಚೌಡರ ಕೆರೆಯ ನೀರನ್ನು ಮತ್ತು ಕಾಳರಾಮ ದೇವಸ್ಥಾನವನ್ನು ಪ್ರವೇಶಿಸುವುದರ ಮೂಲಕ ಅಸಮಾನತೆಗೆ ತಿಲಾಂಜಲಿ ಇಟ್ಟ ಕಾರುಣ್ಯಮೂರ್ತಿ ಎಂದರು.ಸಾಹಿತಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಜಗತ್ತು ಅರ್ಥ ಮಾಡಿಕೊಂಡ ಸರ್ವ ಶ್ರೇಷ್ಠ ವ್ಯಕ್ತಿಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿಶ್ವಜ್ಞಾನಿಯಾಗಿ ನಿಲ್ಲುತ್ತಾರೆ. ಸಂವಿಧಾನದ ಮೂಲಕ ಧ್ವನಿ ಇಲ್ಲದವರ ಧ್ವನಿಯಾಗಿ, ಕಾರ್ಮಿಕರ ಹಕ್ಕು, ಮಹಿಳಾ ಹಕ್ಕು, ಎಲ್ಲಾ ಶೋಷಿತರ ಹಕ್ಕುಗಳಿಗಾಗಿ ಹೋರಾಡಿದ ಸರ್ವಶ್ರೇಷ್ಠ ಮಾನವತಾವಾದಿ. ಅಂಬೇಡ್ಕರ್ ತನಗಾಗಿ ಬದುಕಲಿಲ್ಲ, ಮಿಗಿಲಾಗಿ ಸಮಾಜದ ಪ್ರತಿಯೊಬ್ಬರ ಹಕ್ಕುಗಳ ಪರವಾಗಿ ಹೋರಾಡಿದ ಹೃದಯವಂತ ಎಂದರು.
ನಿವೃತ್ತ ಸಹಕಾರ ಸಂಘಗಳ ಮಹಾ ನಿಬಂಧಕ ಎಂ.ಡಿ.ನರಸಿಂಹಮೂರ್ತಿ ಮಾತನಾಡಿ, ಅಂಬೇಡ್ಕರ್ ಅವರು ಜಗತ್ತು ಕಂಡ ಶ್ರೇಷ್ಠ ಜ್ಞಾನಿಗಳಲ್ಲಿ ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ, ಅಂಬೇಡ್ಕರ್ ಅವರು ಸೇವೆ ಮಾಡದ ಕ್ಷೇತ್ರವಿಲ್ಲ, ತಮ್ಮ ಅಪಾರ ಪಾಂಡಿತ್ಯದ ಮೂಲಕ ಜ್ಯೋತಿಬಾ ಪೂಲೆಯವರ ಸರ್ವ ಶಿಕ್ಷಣದ ಕನಸುಗಳನ್ನು ಸಂವಿಧಾನದ ಮೂಲಕ ಅರಳಿಸಿದ ಧ್ರುವತಾರೆ ಎಂದರು.ಪ್ರಾಂಶುಪಾಲ ಆರ್.ಆದಿಶೇಷರಾವ್ ಮಾತನಾಡಿ, ಅಂಬೇಡ್ಕರ್ ಅವರು ಶ್ರೇಷ್ಠ ಸಾಮಾಜಿಕ ಚಿಂತಕ. ಎಲ್ಲರ ಎದೆಯೊಳಗೆ ಹೃದಯದ ಕಣ್ಣು ತೆರೆಸಿದ ತತ್ವಜ್ಞಾನಿ, ಮನುಕುಲದ ಅಸಮಾನತೆಗೆ ಮದ್ದು ನೀಡಿದ ಮಾನವತಾವಾದಿ, ಸಂವಿಧಾನದ ಮೂಲಕ ಜಾತ್ಯಾತೀತ ತತ್ವಗಳನ್ನು ಸಾರಿದ ಜ್ಞಾನದ ಸಂಕೇತ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಕವನ, ವಾಚನ ಸ್ಪರ್ಧೆಗಳ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ನಮ್ಮ ಇಲಾಖೆ ಮಾಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಗೌರಿಬಿದನೂರು ತಾಲೂಕಿನ ಏಳು ಪದವಿ ಪೂರ್ವ ಕಾಲೇಜುಗಳ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ 80 ಜನ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನವನ್ನು ವಿತರಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ. ವಿ. ನಾಯಕ್, ನ್ಯಾಷನಲ್ ಆ್ಯಂಡ್ ರೂರಲ್ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್, ಕನ್ನಡ ಉಪನ್ಯಾಸಕ ವಿ ನರಸಿಂಹಪ್ಪ , ಗಾಯಕ ಚಂದ್ರಶೇಖರ್, ಇಡಗೂರು ಪ್ರಸನ್ನ ಕುಮಾರ್ ಮತ್ತು ಎಲ್ಲಾ ಕಾಲೇಜುಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.