ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಬದಲಾಗಿ ಅವರು ಇಂದೂ ಪ್ರಸ್ತುತವಾಗಿರುವ ಒಂದು ಚಿಂತನೆ, ಒಂದು ಚಳವಳಿಯೂ ಹೌದು ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.

ಉಡುಪಿ: ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಬದಲಾಗಿ ಅವರು ಇಂದೂ ಪ್ರಸ್ತುತವಾಗಿರುವ ಒಂದು ಚಿಂತನೆ, ಒಂದು ಚಳವಳಿಯೂ ಹೌದು ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು. ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆಯಲ್ಲಿ ಮಾತನಾಡುತಿದ್ದರು. ಜನಜೀವನ ಮಟ್ಟ ಸುಧಾರಿಸಲು ಶಿಕ್ಷಣವೊಂದೇ ದಾರಿ ಎಂದ ಅಂಬೇಡ್ಕರ್ ಶಿಕ್ಷಣದ ಮೂಲಕ ಸಾಮಾಜಿಕ ಅಶಕ್ತರ ಸಶಕ್ತೀಕರಣಕ್ಕೆ ಒತ್ತು ನೀಡಿದರು, ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸಿದರು, ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿಯ ಪಿಡುಗನ್ನು ತಮ್ಮ ಚಿಂತನೆ, ಬರಹ ಹಾಗೂ ಹೋರಾಟದ ಮೂಲಕ ಶುದ್ಧೀಕರಿಸಲು ಪ್ರಯತ್ನಿಸಿದ ಮಹಾ ಮನವತಾವಾದಿ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಲಿಂಗ, ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಖಾತ್ರಿಪಡಿಸಿದರು. ಸಂವಿಧಾನದ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ನೆಲೆಯನ್ನು ಗಟ್ಟಿಗೊಳಿಸಿದರು ಎಂದರು. ಅಂಬೇಡ್ಕರ್ ಬಗ್ಗೆ ಉಪನ್ಯಾಸಕ ನೀಡಿದ ಚಿಂತಕ ಗಣನಾಥ್ ಎಕ್ಕಾರ್, ಅಂಬೇಡ್ಕರ್ ಅವರನ್ನು ಕೇವಲ ದಲಿತರ ನಾಯಕ ಎಂದು ಪರಿಗಣಿಸದೇ ಅವರ ಜನ್ಮದಿನವನ್ನು ಇಂದು ಸಾರ್ವತ್ರಿಕವಾಗಿ ಆಚರಿಸಬೇಕಾದ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ವೆರೋನಿಕಾ ಕರ್ನೆಲಿಯೋ, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ಪ್ರಶಾಂತ್ ಜತ್ತನ್ನ, ಫಾ. ಮಿಲಿಯಂ ಮಾರ್ಟಿಸ್, ಭಾಸ್ಕರ್ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಮಹಾಬಲ ಕುಂದರ್, ಹರಿಪ್ರಸಾದ್ ರೈ, ಶಶಿಧರ ಶೆಟ್ಟಿ ಎಲ್ಲೂರು, ಯತೀಶ್ ಕರ್ಕೆರ, ಸಂಧ್ಯಾ ತಿಲಕ್ ಮುಂತಾದವರಿದ್ದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿ, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಜಯ ಕುಮಾರ್ ವಂದಿಸಿದರು.