ಮಾಜಿ ಉಪಪ್ರಧಾನಿ ಹಾಗೂ ಶೋಷಿತ ವರ್ಗಗಳ ಧ್ವನಿಯಾಗುವ ಜೊತೆಗೆ ಕೃಷಿ ಸಚಿವರಾಗಿದ್ದ ಕಾಲದಲ್ಲಿ ಭಾರತವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಯಶಸ್ವಿಯಾಗಿ ದೀನದಲಿತರ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾಪುರುಷರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಟದೊಂದಿಗೆ ನಮ್ಮ ಹಕ್ಕುಗಳನ್ನು ಪಡೆಯಿರಿ ಎಂಬ ಅಂಬೇಡ್ಕರ್ ಅವರ ಸಂದೇಶ ಹಾಗೂ ಬಾಬುಜೀಯವರ ಸಮಾನತೆಯ ತತ್ವಗಳು ಪ್ರತಿಯೊಬ್ಬರಿಗೂ ದಾರಿದೀಪ ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಡುಕಲಪುರ ಮಂಜುನಾಥ್ ತಿಳಿಸಿದರು.

ಪಟ್ಟಣದ ಅಶೋಕ್‌ನಗರ ಮಾದಿಗರ ಸಂಘಟನೆಗಳ ಒಕ್ಕೂಟದಿಂದ ನಡೆದ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್‌ರಾಂ ಜಯಂತಿ ಅಂಗವಾಗಿ ಮಹನೀಯರ ಭಾವಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಾಜಿ ಉಪಪ್ರಧಾನಿ ಹಾಗೂ ಶೋಷಿತ ವರ್ಗಗಳ ಧ್ವನಿಯಾಗುವ ಜೊತೆಗೆ ಕೃಷಿ ಸಚಿವರಾಗಿದ್ದ ಕಾಲದಲ್ಲಿ ಭಾರತವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಯಶಸ್ವಿಯಾಗಿ ದೀನದಲಿತರ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾಪುರುಷರಾಗಿದ್ದಾರೆಂದು ಸ್ಮರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವಿಶ್ವದಲ್ಲಿಯೇ ಜ್ಞಾನದ ಸಂಕೇತ. ಸಂವಿಧಾನ ಶಿಲ್ಪಿಯಷ್ಟೇ ಅಲ್ಲದೇ, ಪ್ರಖ್ಯಾತ ಅರ್ಥಶಾಸ್ತ್ರಜ್ಞ, ನ್ಯಾಯಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕರಾಗಿದ್ದರು ಎನ್ನುವುದನ್ನು ಅರಿಯಬೇಕಿದೆ. ಮಹಾನ್ ನಾಯಕರು ನಮ್ಮ ಜೊತೆಗೆ ದೈಹಿಕವಾಗಿ ಇಲ್ಲದಿದ್ದರೂ ಅವರ ಸಾಧನೆಗಳೊಂದಿಗೆ ಮಾನಸಿಕವಾಗಿ ಸದಾ ನಮ್ಮಜೊತೆ ಇರುತ್ತಾರೆಂದರು.

ಜಾನಪದ ಕಲಾ ಮೇಳದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್‌ರಾಂವರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಪ್ರವಾಸಿ ಮಂದಿರದ ಮುಂಭಾಗ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಜಯಂತಿ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಸಂಗೀತ ಸೌಂಡ್ ವೆಂಕಟೇಶ್, ನರಸಿಂಹಮೂರ್ತಿ, ಕುಮಾರ್, ಚಾಮರಾಜು, ಶಿವನಂಜು, ಶಿವಣ್ಣ, ರಮೇಶ್, ಶಿವನಂದ್, ಸತೀಶ್, ಕರಿಯಪ್ಪ, ಸರೋಜಮ್ಮ, ಪ್ರಮೀಳ ಸೇರಿದಂತೆ ಇತರರು ಇದ್ದರು.