ಸಾರಾಂಶ
ಹೊನ್ನಾವರ: ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ರಹದಾರಿ ಹಾಕಿದ ಅಂಬೇಡ್ಕರ್ ಅವರನ್ನು ಪೂಜಿಸುವ, ಆರಾಧಿಸುವ ದಿನ. ಶೋಷಿತ ಸಮುದಾಯದವರೆಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ತಮ್ಮ ಇಡೀ ಜೀವನ ತ್ಯಾಗ ಮಾಡಿದ ಏಕೈಕ ವ್ಯಕ್ತಿ ಅಂಬೇಡ್ಕರ್ ಎಂದು ಮಠಾಧೀಶ ಬಸವಮೂರ್ತಿ ಮಾದರಚೆನ್ನಯ್ಯ ಶ್ರೀ ಹೇಳಿದರು.ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಸೋಮವಾರ ನಾಮಧಾರಿ ಹಿತರಕ್ಷಣಾ ವೇದಿಕೆ ಮತ್ತು ದಲಿತ ಹಿತರಕ್ಷಣಾ ವೇದಿಕೆಯ ಜಂಟಿ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಚಿತ್ರದುರ್ಗ ಮಾದರ ಚೆನ್ನಯ್ಯ, ಮೀಸಲಾತಿಯನ್ನು ನಿರ್ದಿಷ್ಟವಾಗಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆಲ್ಲ ಹಂಚಿಕೆ ಮಾಡಿದ್ದಾರೆ. ಹಾಗೆಯೇ ಉಳಿದಿರುವ ಮೀಸಲಾತಿಯನ್ನು ಸಾಮಾನ್ಯ ವರ್ಗದವರೂ ಅನುಭವಿಸಲಿ ಎಂದು ನಿಗದಿ ಮಾಡಿದ್ದಾರೆಂದರೆ ಭಾರತ ದೇಶದಲ್ಲಿರುವವರೆಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕು. ಸಮಾನತೆಯಿಂದ ಬದುಕಬೇಕು ಎಂಬ ಉದ್ದೇಶದಿಂದ ಬಹುದೊಡ್ಡ ಗ್ರಂಥ, ಸಾಮಾಜಿಕ ನ್ಯಾಯವನ್ನು ಕೊಟ್ಟಿರುವ ಬಹುದೊಡ್ಡ ದಾರ್ಶನಿಕರು, ಮಹಾ ಮಾನವತಾವಾದಿಗಳು. ಅವರ ಹುಟ್ಟುಹಬ್ಬದ ದಿನವನ್ನು ಅನೇಕ ದೇಶಗಳಲ್ಲಿ ಜ್ಞಾನದ ದಿನವೆಂದು ಆಚರಣೆ ಮಾಡುತ್ತಿದ್ದಾರೆ. ಅವರ ಜನ್ಮದಿನ ನಮಗೆ ನಿಜವಾದ ಯುಗಾದಿ ಹಬ್ಬ ಎಂದು ಹೇಳಿದರು.
ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ, ಗಾಂಧೀಜಿ ಮತ್ತು ಅಂಬೇಡ್ಕರ ಪ್ರಕೃತಿಯ ಕೊಡುಗೆಗಳು. ಬ್ರಿಟಿಷರ ಮತ್ತು ಸಾಮಾಜಿಕ ಗುಲಾಮಗಿರಿ ಮಧ್ಯೆ ಬೆಳೆದವರಾಗಿದ್ದಾರೆ ಎಂದರು.ನ್ಯಾಯವಾದಿ ನಾಗರಾಜ ನಾಯಕ ಮಾತನಾಡಿ, ಜಗತ್ತಿನಲ್ಲಿಯೇ ದೊಡ್ಡದಾದ, ಶ್ರೇಷ್ಠವಾದ, ಪವಿತ್ರವಾದ ಸಂವಿಧಾನವನ್ನು ಕೊಟ್ಟವರು ಅಂಬೇಡ್ಕರ್. ಸಂವಿಧಾನ ರಚನೆಯಲ್ಲಿ ಏಳು ಜನರಿದ್ದರೂ ಬರೆದವರು ಕೇವಲ ಅಂಬೇಡ್ಕರ್ ಮಾತ್ರ. ಸಂವಿಧಾನ ತಿದ್ದುಪಡಿ ಮಾಡಬಹುದು. ಬದಲಾವಣೆ ಸಾಧ್ಯವಿಲ್ಲ. ಬದಲಾವಣೆ ಮಾಡುತ್ತೇನೆ ಎನ್ನುವುದು ದೇಶದ್ರೋಹದ ಮಾತು. ಸಾಮಾಜಿಕ ಸಮಾನತೆ ಉಂಟಾಗುವವರೆಗೂ ಮೀಸಲಾತಿ ಅಗತ್ಯವಿದೆ ಎಂದರು.
ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಎಲಕಪಾಟಿ, ಡಾ.ಜಿ.ಪಿ. ಪಾಠಣಕರ, ಸೂರಜ್ ನಾಯ್ಕ ಸೋನಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಆರ್.ಎನ್.ನಾಯ್ಕ ಮಾತನಾಡಿ, ಅಂಬೇಡ್ಕರ ನಡೆ-ನುಡಿ-ಜೀವನವನ್ನು ಅಳವಡಿಸಿಕೊಳ್ಳಬೇಕು. ಅವರಷ್ಟು ಅಚ್ಚುಕಟ್ಟಾದ ವ್ಯಕ್ತಿ ಭಾರತದಲ್ಲಿ ಬೇರೆಯಾರೂ ಹುಟ್ಟಿಲ್ಲ. ಅವರಷ್ಟು ದೊಡ್ಡ ವಿದ್ಯಾವಂತರು ಜಗತ್ತಿನಲ್ಲಿ ಬೇರೆಯಾರೂ ಇಲ್ಲ. ಅವರನ್ನು ನೋಡಿ ನಾವು ಕಲಿಯಬೇಕು ಎಂದರು.
ಶ್ರೀಗಳಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಪತ್ರಕರ್ತ ಸಂದೀಪ ಸಾಗರ, ಕಲಾವಿದ ಸುರೇಶ ನಾಯ್ಕ ಹುಡಗೋಡ, ಪಪಂ ಸದಸ್ಯ ಸುಭಾಷ ಹರಿಜನ, ವಿದ್ಯಾರ್ಥಿ ಧ್ರುವ ಹಳ್ಳೇರ ಇವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ತಹಸೀಲ್ದಾರ ಪ್ರವೀಣ ಕರಾಂಡೆ, ಪಪಂ ಮುಖ್ಯಾಧಿಕಾರಿ ಯೇಸು ಬೆಂಗಳೂರು ಮತ್ತಿತರರಿದ್ದರು. ನಾಮಧಾರಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಿಕ್ರಮ್ ನಾಯ್ಕ ಸ್ವಾಗತಿಸಿದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ನಿರ್ವಹಿಸಿದರು. ಸತೀಶ ನಾಯ್ಕ ಪ್ರಾರ್ಥಿಸಿದರು.