ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಜಾಥಾದಲ್ಲಿ ಶಾಸಕ ಶಿವಲಿಂಗೇಗೌಡ, ತಹಸೀಲ್ದಾರ್ ಸಂತೋಷ್ ಕುಮಾರ್, ದಲಿತಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಜನಜಾಗೃತಿ ಗೀತೆಯೊಂದಿಗೆ ಹೆಜ್ಜೆ ಹಾಕಿದರು. ಜಾಥಾ ಬಳಿಕ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ಗೌರವ ಸಲ್ಲಿಸಲಾಯಿತು. ನಂತರ ಸರ್ಕಾರಿ ಹಳೆಯ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೃಹತ್ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಭಾರತದ ಸಂವಿಧಾನ ರಚನೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು 18 ವರ್ಷಗಳ ಕಾಲ ದೇಶ–ವಿದೇಶಗಳಲ್ಲಿ ಸಂಶೋಧಿಸಿ, ಜಗತ್ತಿನ ವಿವಿಧ ರಾಷ್ಟ್ರಗಳ ಉತ್ತಮ ಅಂಶಗಳನ್ನು ಅಳವಡಿಸಿ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದರು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.ಸಂವಿಧಾನ ದಿನಾಚರಣೆಯ ಅಂಗವಾಗಿ ಪಟ್ಟಣದ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರಧಾರಿಗಳಾಗಿ, ಅಂಬೇಡ್ಕರ್ ಸಂವಿಧಾನದ ಭಾವಚಿತ್ರವನ್ನು ಕುದುರೆ ಸಾರೋಟ್ ಮೇಲೆ ಪ್ರತಿಷ್ಠಾಪಿಸಿ ಜಾಥಾ ನಡೆಸಿದರು. ಈ ವಿಶಿಷ್ಟ ಆಕರ್ಷಣೀಯ ಜಾಥಾ ನಾಗರಿಕರ ಗಮನ ಸೆಳೆಯಿತು.ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಜಾಥಾದಲ್ಲಿ ಶಾಸಕ ಶಿವಲಿಂಗೇಗೌಡ, ತಹಸೀಲ್ದಾರ್ ಸಂತೋಷ್ ಕುಮಾರ್, ದಲಿತಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಜನಜಾಗೃತಿ ಗೀತೆಯೊಂದಿಗೆ ಹೆಜ್ಜೆ ಹಾಕಿದರು. ಜಾಥಾ ಬಳಿಕ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ಗೌರವ ಸಲ್ಲಿಸಲಾಯಿತು. ನಂತರ ಸರ್ಕಾರಿ ಹಳೆಯ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೃಹತ್ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ 1949ರ ನವೆಂಬರ್ 26ರಂದು ಭಾರತವು ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿ ಹೊಸ ಯುಗಕ್ಕೆ ಪಾದಾರ್ಪಣೆ ಮಾಡಿತು. ಬ್ರಿಟಿಷರ ಆಡಳಿತ ಭಾರತವನ್ನು ಅಶಕ್ತ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಿದರೂ, ಗಾಂಧಿಜಿ, ಸುಭಾಷ್ ಚಂದ್ರಬೋಸ್ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ನಾವು 1947ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡೆವು. ಅನೇಕ ವೈವಿಧ್ಯಗಳಿದ್ದ ಭಾರತವನ್ನು ಒಗ್ಗೂಡಿಸುವುದು ಅಸಾಧ್ಯ ಎಂದು ಬ್ರಿಟಿಷರು ಭಾವಿಸಿದ್ದರು. ಆದರೆ ಅಂಬೇಡ್ಕರ್ ಅವರ ಸಂವಿಧಾನ ರಚನೆ ಜಗತ್ತನ್ನೇ ಬೆಚ್ಚಿಬೀಳಿಸಿತ್ತು ಎಂದು ಹೇಳಿದರು.ಪಂಚಶೀಲ ತತ್ವಗಳನ್ನು ಅಳವಡಿಸಿಕೊಂಡಿರುವ ನಮ್ಮ ಪ್ರಜಾಪ್ರಭುತ್ವವನ್ನು ವಿಶ್ವ ಸಂಸ್ಥೆಯೂ ಮೆಚ್ಚಿದೆ. 12ನೇ ಶತಮಾನದಲ್ಲೇ ಬಸವಣ್ಣನವರು ನೀಡಿದ ಸಮಾನತೆಯ ಘೋಷಣೆಯೇ ಇಂದಿನ ಸಂವಿಧಾನದ ಮೂಲಭೂತ ಮೌಲ್ಯ ಎಂದು ನೆನಪಿಸಿಕೊಳ್ಳಬೇಕು, ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಮಾನವ ಸಂಪತ್ತು ಅಪಾರ. ಅದನ್ನು ಸಮರ್ಪಕವಾಗಿ ಬಳಸಿ ತಾಲೂಕನ್ನು ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ತರುವಲ್ಲಿ ವಿದ್ಯಾರ್ಥಿಗಳು ಮುಂಚೂಣಿಯಲ್ಲಿ ಇರಬೇಕು. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಎಲ್ಲವೂ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತವೆ. ಸಂವಿಧಾನವನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಪಾಲಿಸುವುದು ಕರ್ತವ್ಯ, ಎಂದು ಹೇಳಿದರು.ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ ಭಾರತದ ಸಂವಿಧಾನವು ಕೇವಲ ಕಾನೂನುಗಳ ಸಂಕಲನವಾಗಿರುವುದಿಲ್ಲ; ಇದು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ನೀಡುವ ಮಹತ್ವದ ಪವಿತ್ರ ಗ್ರಂಥಿತ ದಾಖಲೆ. ಮಾತನಾಡುವ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ನ್ಯಾಯ ಕೇಳುವ ಹಕ್ಕು ಈ ಎಲ್ಲವೂ ಸಂವಿಧಾನ ನೀಡಿರುವ ಅಮೂಲ್ಯ ಅನುಗ್ರಹ ಎಂದರು.ಸಂವಿಧಾನದ ಮುಂದೆ ರಾಷ್ಟ್ರಪತಿದಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೂ ಎಲ್ಲರೂ ಒಂದೇ ಸಮಾನ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಕಾನೂನಿನ ಮೇಲಿನ ನಂಬಿಕೆ ಮತ್ತು ಎಲ್ಲರಿಗೂ ಒಂದೇ ರೀತಿಯ ನ್ಯಾಯ ದೊರೆಯುವ ಭರವಸೆ ಇದೇ ಸಂವಿಧಾನದ ಬಲ. ದೇಶದ ವೈವಿಧ್ಯಮಯ ಸಂಸ್ಕೃತಿಗಳನ್ನು ಒಂದೆಡೆಗೂಡಿಸಿ, ಒಗ್ಗಟ್ಟಿನಿಂದ ಬದುಕುವ ಮಾನವೀಯ ನೆಲೆಯನ್ನು ಸಂವಿಧಾನ ನಿರ್ಮಿಸಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಪರಶಿವಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.