ಅಂಬೇಡ್ಕರ್ ಪುತ್ಥಳಿ ನಿರ್ಮಾಣ ದಲಿತರ ಕೂಗು: ಎಂ.ಎನ್.ಜಯರಾಜು

| Published : Oct 25 2024, 01:09 AM IST

ಅಂಬೇಡ್ಕರ್ ಪುತ್ಥಳಿ ನಿರ್ಮಾಣ ದಲಿತರ ಕೂಗು: ಎಂ.ಎನ್.ಜಯರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಮಳವಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಬೇಕು ಎನ್ನುವುದು ದಲಿತರು ಸೇರಿದಂತೆ ಎಲ್ಲ ಸಂಘಟನೆಗಳ ಬೇಡಿಕೆಯಾಗಿತ್ತು. ಆದರೆ, ಎಂದೂ ಭಿಕ್ಷೆ ಬೇಡಿ ಪುತ್ಥಳಿ ನಿರ್ಮಾಣ ಮಾಡುತ್ತೇವೆ ಎಂದಿಲ್ಲ. ಡಾ.ಕೆ.ಅನ್ನದಾನಿ ದಲಿತ ಸಂಘಟನೆಗಳ ಪುತ್ಥಳಿ ನಿರ್ಮಾಣವಾಗಬೇಕೆಂಬ ಹೋರಾಟವನ್ನು ಅಣಕಿಸುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಬೇಕೆಂಬುವುದು ದಲಿತ ಸಂಘಟನೆ ಪದಾಧಿಕಾರಿಗಳ ಕೂಗಾಗಿತ್ತು ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಎಂ.ಎನ್.ಜಯರಾಜು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಸೋಲಿನ ಹತಾಶೆಯಿಂದ ಹೊರಬಾರದ ಮಾಜಿ ಶಾಸಕ ಕೆ.ಅನ್ನದಾನಿ ದಲಿತ ಮುಖಂಡರ ವಿರುದ್ಧ ಸಲ್ಲದ ಪದ ಬಳಕೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.

ಮಳವಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಬೇಕು ಎನ್ನುವುದು ದಲಿತರು ಸೇರಿದಂತೆ ಎಲ್ಲ ಸಂಘಟನೆಗಳ ಬೇಡಿಕೆಯಾಗಿತ್ತು. ಆದರೆ, ಎಂದೂ ಭಿಕ್ಷೆ ಬೇಡಿ ಪುತ್ಥಳಿ ನಿರ್ಮಾಣ ಮಾಡುತ್ತೇವೆ ಎಂದಿಲ್ಲ. ಡಾ.ಕೆ.ಅನ್ನದಾನಿ ದಲಿತ ಸಂಘಟನೆಗಳ ಪುತ್ಥಳಿ ನಿರ್ಮಾಣವಾಗಬೇಕೆಂಬ ಹೋರಾಟವನ್ನು ಅಣಕಿಸುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿಯನ್ನು ಗೌರವಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ, ಕೆ.ಅನ್ನದಾನಿ ಚುನಾವಣಾ ಲಾಭಕ್ಕಾಗಿ ತರಾತುರಿಯಲ್ಲಿ ಪುತ್ಥಳಿ ನಿರ್ಮಿಸಿದ್ದಾರೆಯೇ ಹೊರತು ಅಭಿವೃದ್ಧಿ ಪಡಿಸಲು ನಿರ್ಲಕ್ಷ್ಯ ವಹಿಸಿ ಈಗಿನ ಶಾಸಕರು ಅಭಿವೃದ್ಧಿ ಪಡಿಸಿಲ್ಲ ಎಂದು ಆರೋಪಿಸುವುದು ಸರಿಯಲ್ಲ ಎಂದು ದೂರಿದರು.

ಪುರಸಭೆ ಮಾಜಿ ಸದಸ್ಯ ಕಿರಣ್ ಶಂಕರ್ ಮಾತನಾಡಿ, ಅನ್ನದಾನಿ ಮೀಸಲು ಕ್ಷೇತ್ರದ ಶಾಸಕರಾಗಿ ದಲಿತ ಸಂಘಟನೆ ಪದಾಧಿಕಾರಿಗಳ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದರು.

ಮುಖಂಡ ಮಹದೇವಯ್ಯ ಮಾತನಾಡಿ, ಡಾ.ಕೆ.ಅನ್ನದಾನಿ ಶಾಸಕಾರಿದ್ದಾಗ ಡಾ.ರೇಣುಕಾದೇವಿ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಇದ್ದರು. ಅಂದು ಅವರ ಬಗ್ಗೆ ಒಂದು ಮಾತನಾಡದ ಮಾಜಿ ಶಾಸಕರು ಇಂದು ರಾಜಕೀಯಕ್ಕಾಗಿ ಟೀಕಿಸುತ್ತಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗಸಿದ್ಧಯ್ಯ, ಸಿದ್ದರಾಜು, ಮುದ್ದುರಾಜು, ಚಿನ್ನಸ್ವಾಮಿ, ಶಿವರಾಜು, ಶಂಕರ್, ಕುಮಾರಸ್ವಾಮಿ, ಮದನ್, ಸಿದ್ದರಾಜು ಇದ್ದರು.