ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದಲ್ಲಿ ರಾಜ್ ಕುಮಾರ್. ಡಾ. ಬಿ ಆರ್ ಅಂಬೇಡ್ಕರ್ ರಸ್ತೆ ಅಗಲೀಕರಣದ ಮೂಲಕ ವಾಣಿಜ್ಯ ಕೇಂದ್ರ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ಅಧಿಕಾರಿಗಳು 2 ತಿಂಗಳೊಳಗೆ ಅಂತಿಮ ಸರ್ವೇ ವರದಿಯನ್ನು ಸಲ್ಲಿಸಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಮುಖ್ಯಮಂತ್ರಿಗಳ ಜೊತೆ ಅನುದಾನ ಬಿಡುಗಡೆಗೆ ಚರ್ಚಿಸಲಾಗುವುದು ಎಂದು ಶಾಸಕ ಎ. ಆರ್. ಕೃಷ್ಣಮೂರ್ತಿ ಹೇಳಿದರು.ನಗರಸಭೆ ಸಭಾಂಗಣದಲ್ಲಿ ರಸ್ತೆ ಅಗಲೀಕರಣ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಲೋಕೋಪಯೋಗಿ, ಕಂದಾಯ ಇಲಾಖೆ, ನಗರಸಭೆ, ಸರ್ವೇ ಇಲಾಖೆ ಜೊತೆ ಶೀಘ್ರ ಕಾರ್ಯಪ್ರಕ್ರಿಯೆಗಾಗಿ ತಾಂತ್ರಿಕ ತಜ್ಞ ಹರೀಶ್‌ರನ್ನು ನೇಮಿಸಲಾಗಿದೆ. ಈ ರಸ್ತೆಯಲ್ಲಿ ಬರುವ ಆಸ್ತಿಗಳು ಯಾರಿಗೆ ಸೇರಿದ್ದು ಎಂಬುದರ ಕುರಿತು ಅಧಿಕಾರಿಗಳು ಮೂಲ ದಾಖಲೆ ಪರಿಶೀಲಸಬೇಕು ಎಂದರು.ಸರ್ಕಾರಿ ಜಾಗ ಎಷ್ಟು, ತೆರವಾಗುವ ಖಾಸಗಿ ಮಾಲೀಕರ ಆಸ್ತಿ ವಿವರಗಳ ಪಟ್ಟಿ ಮಾಡಬೇಕು. ಉಪನೋಂದಣಾಧಿಕಾರಿಗಳು ನೀಡುವ ಸರ್ಕಾರಿ ದರದಂತೆ ಪರಿಹಾರ ನೀಡಲು ಪಟ್ಟಿ ತಯಾರಿಸಬೇಕು. ಸರ್ಕಾರಿ ಜಾಗ ಅತಿಕ್ರಮಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿಕೊಂಡಿರುವುದು ಕಂಡು ಬಂದರೆ ಪರಿಹಾರ ನೀಡಲ್ಲ. ಗೊಂದಲ ಉಂಟು ಮಾಡದೆ ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಕೆಲಸ ಮಾಡಿ. ನೂರು ಅಡಿ ರಸ್ತೆ ವಿಸ್ತೀರ್ಣ ಬೇಡ. ಬದಲಿಗೆ 80 ಅಡಿ ರಸ್ತೆ ವಿಸ್ತೀರ್ಣಕ್ಕೆ ಮುಂದಾಗಿ ಅಂತಿಮ ವರದಿ ಸಲ್ಲಿಸಬೇಕು ಎಂದರು.
ಈ ರಸ್ತೆ ಅಗಲೀಕರಣವಾಗಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದಲೂ ಇದೆ. ಇಲ್ಲಿ ಆಯ್ಕೆಯಾದ ಹಲವು ಶಾಸಕರು ಈ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಪ್ರಯತ್ನಿಸಿದ್ದಾರೆ. ಅಂತಿಮ ಸಿದ್ಧತೆ ಮಾಡಿಕೊಂಡು 2 ತಿಂಗಳಲ್ಲಿ ಎಲ್ಲರೂ ಒಗ್ಗೂಡಿ ತೆರವಾಗುವ ಜಾಗಗಳು ಯಾರಿಗೆ ಸೇರಿದ್ದು ಎಂಬಿತ್ಯಾದಿ ಅಂತಿಮ ವರದಿ ಸಲ್ಲಿಸಿ.ಸರ್ಕಾರಿ ಜಾಗವನ್ನು ಕೆಲವು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂಬ ಆರೋಪವಿದ್ದು. ಎರಡು ರಸ್ತೆಗಳಲ್ಲಿ ಸರ್ಕಾರಿ ಜಾಗವನ್ನು ಯಾರಿಗೆ ನಿಯಮ ಮೀರಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಕುರಿತ ಸರ್ವೇ ವೇಳೆ ಸುದೀರ್ಘ ವರದಿ ನೀಡಬೇಕು. ತಪ್ಪಿತಸ್ಥರ ಮೇಲೆ ಕ್ರಮವಹಿಸಲಾಗುವುದು. ಸುಳ್ಳು ಖಾತೆ ಮಾಡಿಕೊಟ್ಟವರಿಗೆ ಶಿಕ್ಷೆಯಾಗಲಿ. ನಗರಸಭೆ ಹಳೇ ಆಸ್ತಿ ರೇಕಾರ್ಡ್ ಪರಿಶೀಲಿಸಬೇಕು ಎಂದರು.
ನಗರಸಭೆ ಆಯುಕ್ತ ರಮೇಶ್ ಮಾತನಾಡಿ, ಕೆಲವು ಸರ್ಕಾರಿ ಜಾಗಗಳನ್ನು ಕೆಲವು ಮಾಲೀಕರು ಈ ಹಿಂದೆ ಹರಾಜಿನಲ್ಲಿ ಸರ್ಕಾರಕ್ಕೆ ಹಣ ಪಾವತಿಸಿಕೊಂಡು ಖರೀದಿಸಿದ್ದು ದಾಖಲೆ ಇವೆ. ಉಳಿದಂತೆ ಕೆಲವರು ಮೂಲ ದಾಖಲೆಗಿಂತ ಹೆಚ್ಚು ಜಾಗವನ್ನು ಅತಿಕ್ರಮಿಸಿಕೊಂಡಿರುವ ಪ್ರಕರಣಗಳಿವೆ. ಪರಿಶೀಲನೆ ಬಳಿಕವಷ್ಟೇ ಯಾವುದೇ ಖಾಸಗಿ, ಯಾವುದು ಸರ್ಕಾರಿ ಜಾಗ ಎಂಬುದು ತಿಳಿಯಲಿದೆ.ಶೋಭ ಟಾಕೀಸ್ ಜಾಗ ಈ ಹಿಂದೆಯೆ ಸರ್ಕಾರದಿಂದ ನಿಯಮಾನುಸಾರ ಹಣ ನೀಡಿ ಖರೀದಿಸಿದ ದಾಖಲೆಗಳು ಲಭ್ಯವಾಗಿದೆ. ದಾಖಲೆಗಳಲ್ಲಿ ಇನ್ನು ಸರ್ಕಾರಿ ಎಂಬ ಮಾಹಿತಿ ಇದ್ದು ಹಲವು ಗೊಂದಲಗಳಿದ್ದು ಈ ಕುರಿತು ಸರ್ಕಾರಿ ಜಾಗದ ದಾಖಲೆ ಪರಿಶೀಲನೆಯಾಗಬೇಕು. ಮಾಲೀಕರಿಗೆ ಯಾವ ರೀತಿ ಈ ಜಾಗ ಬಂತು ಎಂಬುದರ ಕುರಿತ ಮೂಲ ದಾಖಲೆ ಪರಿಶೀಲಿಸಬೇಕು.
ತಾಂತ್ರಿಕ ತಜ್ಞ ಹರೀಶ್ ಮಾತನಾಡಿ. 2 ರಸ್ತೆಗಳಲ್ಲಿ ಬಹುತೇಕವಾಗಿ ಸರ್ಕಾರಿ ಆಸ್ತಿ ಹೆಚ್ಚಿವೆ. ಸರ್ಕಾರಕ್ಕೆ ಎಷ್ಚು ಅಗತ್ಯವಿದೆಯೋ ಅಷ್ಚೆ ಪರಿಹಾರಕ್ಕೆ ವರದಿ ನೀಡಲಾಗುವುದು. ಉಪನೋಂದಾಣಾಧಿಕಾರಿಗಳು ನಿಗದಿಪಡಿಸುವ ಮೌಲ್ಯದಡಿಯಲ್ಲಿ ಖಾಸಗಿ ಮಾಲೀಕರಿಗೆ ಪರಿಹಾರಕ್ಕೆ ವರದಿ ಸಲ್ಲಿಸಲಾಗುವುದು. 45 ದಿನದಲ್ಲಿ ಎಲ್ಲರ ಸಹಕಾರ ಪಡೆದು ಮಾಲೀಕರ ಮೂಲ ದಾಖಲೆ ಪರಿಶೀಲಿಸಿ. ಅವರ ಸಮ್ಮುಖದಲ್ಲಿ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.ನಗರಸಭಾಧ್ಯಕ್ಷೆ ರೇಖಾ ರಮೇಶ್, ಆಯುಕ್ತ ರಮೇಶ್, ಉಪಾಧ್ಯಕ್ಷ ಎ. ಪಿ. ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಜಿ ಎಂ ಸುರೇಶ್, ಎಂಜಿನಿಯರ್ ಗಳಾದ ಪುರುಷೋತ್ತಮ್, ನಟರಾಜು, ನಾಗೇಂದ್ರ, ಆರೋಗ್ಯ ನಿರೀಕ್ಷಕ ಚೇತನ್. ಕಂದಾಯಾಧಿಕಾರಿ ರಾಘವೇಂದ್ರ, ರವಿಶಂಕರ್ ಇನ್ನಿತರಿದ್ದರು.
ಸಭೆ ಪ್ರಾರಂಭಕ್ಕೂ ಮುನ್ನ ಶಾಸಕರು ಪ್ರಥಮ ದರ್ಜೆ ನೌಕರ ರವಿಶಂಕರ್ ವಿರುದ್ಧ ಗರಂ ಆದರು. ಗಂಭೀರವಾಗಿ ಕೆಲಸ ಮಾಡಿ. ದಾದಾಗಿರಿಯ ಮಾತು ಬೇಡ. ದೂರುದಾರ ವೇಣುಗೋಪಾಲ್ ಬಳಿ ನೀವು ಶಾಸಕರು, ಸಚಿವರ ಕುರಿತು ಲಘುವಾಗಿ ಮಾತನಾಡಿದ್ದಿರಂತೆ. ಅದೆಲ್ಲಾ ನಿಮಗ್ಯಾಕೆ. ಈ ವರ್ತನೆ ಸರಿಯಾಗಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಾಗಲ್ಲ ಎಂದು ಎಚ್ಚರಿಸಿದರು.ರವಿಶಂಕರ್ ಪ್ರತಿಕ್ರಿಯಿಸಿ, ಇಲ್ಲ ನಾನು ಆರೀತಿ ಮಾತನಾಡಿಲ್ಲ. ದೂರುದಾರರು ಗೊಂದಲ ಸೖಷ್ಟಿಸಿದ್ದಾರೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಅದ್ಯಕ್ಷೆ ರೇಖಾ ರಮೇಶ್, ಈ ವಿಚಾರದಲ್ಲಿ ದೂರುದಾರರ ಸಮ್ಮುಖದಲ್ಲಿ ರವಿಶಂಕರ್ ಕರೆಸಿ ವಿಚಾರ ಮಾಡಲಾಗಿ. ಅವರು ಯಾರ ವಿರುದ್ಧವೂ ಲಘು ಪದ ಬಳಸಿಲ್ಲ. ನಮ್ಮ ಮುಂದೆ ವೇಣುಗೋಪಾಲ್ ಇದನ್ನ ಒಪ್ಪಿಕೊಂಡರು ಎಂದರು.ಈ ವೇಳೆ ಶಾಸಕರು ಹಾಗಾದರೆ ಆ ದೂರಾದರ ನನಗೆ ಕಾಲ್ ಮಾಡಲಿ ಈ ರೀತಿ ಗೊಂದಲ ಸುಳ್ಳನ್ನೇಕೆ ಹೇಳ್ತಿರಾ ಅಂತ ಕೇಳುವೆ. ಆದರೆ ರವಿಶಂಕರ್ ನೀವು ಗಂಭೀರವಾಗಿ ಕೆಲಸ ಮಾಡಿ. ಸಾರ್ವಜನಿಕ ದೂರಿಗೆ ಸ್ಪಂದಿಸಿ ಎಂದು ಶಾಸಕರು ತಾಕೀತು ಮಾಡಿದರು.
ನಿಮ್ಮ ಜೊತೆ ನಾವಿದ್ದೇವೆ. ಈ ಕ್ಷೇತ್ರದ ಶಾಸಕರಾಗಿ ತಾವು ಹಲವು ವರ್ಷ ನೆನೆಗುದಿಗೆ ಬಿದ್ದಿರುವ ಈ ರಸ್ತೆ ಅಗಲೀಕರಣದ ಮೂಲಕ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ. ಈ ಹಿಂದೆ ಈ ರಸ್ತೆಗೆ ಶೇಷಾದ್ರಿ ಶೆಟ್ಟಿ ರಸ್ತೆ ಎಂದು ಹೆಸರಿತ್ತು. ಕ್ರಮೇಣ ಬದಲಾಯಿತು. ನೀವೆ ಧೈರ್ಯ ಮಾಡಿ ಈ ರಸ್ತೆ ಅಭಿವೃದ್ಧಿ ಮೂಲಕ ವಾಣಿಜ್ಯ ಕೇಂದ್ರ ಅಭಿವೃದ್ಧಿಗೆ ಮುಂದಾಗಿರುವುದು ಅಭಿನಂದನಾರ್ಹ ಎಂದು ನಗರಸಭೆ ಸದಸ್ಯ ಶಾಂತರಾಜು ಹೇಳಿದರು . ರಾಜ್ ಕುಮಾರ್ ರಸ್ತೆಯ ಬಹುತೇಕ ಶೇ. 99ರಷ್ಟು ಸರ್ಕಾರಕ್ಕೆ ಸೇರಿದ ಜಾಗ ಅತೀಕ್ರಮವಾಗಿದೆ. ಕೆಲವರು ಜಾಗ ತಮ್ಮದೆಂದು ದಾಖಲೆ ಇಟ್ಟುಕೊಂಡಿದ್ದಾರೆ. ರವಿ ಮೆಡಿಕಲ್ ಎದುರಿನ ಅಬ್ಬಗೆರೆ ನಗರಸಭೆ ಆಸ್ತಿ. ಅದನ್ನೆ ಹಿಂದಿನ ಆಯುಕ್ತ ನಾಗಭೂಷಣ್ ಅಕ್ರಮ ಖಾತೆ ಮಾಡಿಕೊಟ್ಟಿದ್ದು ಸದ್ಯ ನ್ಯಾಯಾಲಯದಲ್ಲಿ ಖಾತೆ ರದ್ದಾಗಿದೆ. ನಗರಸಭೆ ಆಸ್ತಿಗಳನ್ನು ಅಧಿಕಾರಿಗಳು ಉಳಿಸುವ ನಿಟ್ಟಿನಲ್ಲಿ ಶಾಸಕರು ಸ್ಪಂದಿಸುತ್ತಿರುವುದು ಶ್ಲಾಘನಾರ್ಹ. ನಗರಸಭೆ ಆಸ್ತಿ ವಿವರದ ಕಡತ ಪರಿಶೀಲಿಸಬೇಕಿದೆ.ಶಿವಮಲ್ಲು ನಗರಸಭೆ ಸದಸ್ಯ