ಅಂಬೇಡ್ಕರ್ ಆದರ್ಶಗಳು ನಮಗೆ ದಾರಿದೀಪ

| Published : Apr 16 2024, 01:10 AM IST

ಸಾರಾಂಶ

ಹೊಸಕೋಟೆ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಕೇವಲ ದಲಿತ ವರ್ಗಕ್ಕೆ ಸೀಮಿತವಲ್ಲ, ದೇಶದ ಪ್ರತಿಯೊಬ್ಬನಾಗರಿಕನಿಗೆ ಸಲ್ಲುವಂತದ್ದು ಎಂದು ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಆರ್.ಕಿರಣ್ ಕುಮಾರ್ ತಿಳಿಸಿದರು.

ಹೊಸಕೋಟೆ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಕೇವಲ ದಲಿತ ವರ್ಗಕ್ಕೆ ಸೀಮಿತವಲ್ಲ, ದೇಶದ ಪ್ರತಿಯೊಬ್ಬನಾಗರಿಕನಿಗೆ ಸಲ್ಲುವಂತದ್ದು ಎಂದು ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಆರ್.ಕಿರಣ್ ಕುಮಾರ್ ತಿಳಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಅವರ 133ನೇ ಜಯಂತಿ ಪ್ರಯುಕ್ತ ಹೊಸಕೋಟೆಯಿಂದ ತಿಮ್ಮಪ್ಪನಹಳ್ಳಿವರೆಗೆ ಬೆಳ್ಳಿರಥದಲ್ಲಿ ಅಂಬೇಡ್ಕರ್‌ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿಯೊಬ್ಬ ನಾಗರಿಕನು ತನ್ನ ಇಷ್ಟದಂತೆ ಬದುಕುವ ಹಕ್ಕನ್ನ ಕೊಟ್ಟಿರುವವರು ಅಂಬೇಡ್ಕರ್ ಅವರು. ಒಂದು ವೇಳೆ ಅಂಬೇಡ್ಕರ್ ಸಂವಿಧಾನ ರಚನೆ ಮಾಡದಿದ್ದರೆ ನಾವು ಇಂದಿಗೂ ಆಳುವ ವರ್ಗದ ಕೈ ಕೆಳಗೆ ಜೀತದಾಳುಗಳಂತೆ ಬದುಕಬೇಕಿತ್ತು. ಆದರೆ ಇಂದು ನಾವು ಧರಿಸುವ ಬಟ್ಟೆ ತಿನ್ನುವ ಆಹಾರ ನಮ್ಮಿಷ್ಟದಂತೆ ಆಗಿದೆ. ಅದರಿಂದ ಅಂಬೇಡ್ಕರ್ ಪ್ರತಿಪಾದಿಸಿದ ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯ ಮತ್ತು ಸ್ವಾತಂತ್ರ‍್ಯದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಎಂದರು.

ಸಂಘಟನೆಯ ಮುಖಂಡ ಪ್ರಶಾಂತ್ ಬಂಡಳ್ಳಿ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳು ನಮಗೆ ದಾರಿದೀಪ. ಅವರ ವಿಚಾರಧಾರೆಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ನಮಗೆಲ್ಲಾ ಸಮಾನತೆಯ ಹಾದಿ ತೋರಿಸಿದ ಮತ್ತು ಸಹೋದರತ್ವದ ಗುರಿಯತ್ತ ನಮ್ಮನ್ನು ಮುನ್ನಡೆಸಿದ ಮಹಾನ್ ಶಕ್ತಿ ಅಂಬೇಡ್ಕರ್ ಆಗಿದ್ದು ಅವರನ್ನು ನಾವೆಲ್ಲ ನಿತ್ಯ ಸ್ಮರಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಸಜ್ಜನ್, ಪ್ರಸನ್ನ, ಅಮರ್, ಕೆಂಪರಾಜ್, ಉಮೇಶ್, ನಾಗೇಶ್, ಪುನೀತ್ ಸಾಮ್ರಾಟ್, ಗಡಿಗೇನಹಳ್ಳಿ ಸಹದೇವ್, ಲಿಂಗಾಪುರ ತ್ರಿವೇನ್, ಅತ್ತಿಬೆಲೆ ರಾಮಾಂಜಿ, ಮಧು ನಾಯಕ್, ಪ್ರಮೋದ್, ಗಜೇಂದ್ರ ಹಾಜರಿದ್ದರು.