ಸಮಾಜದಲ್ಲಿನ ಅಶಾಂತಿ ಮತ್ತು ಅಸಮಾನತೆ ಹೋಗಲಾಡಿಸಲು ಡಾ.ಅಂಬೇಡ್ಕರ್‌ ತತ್ವಾದರ್ಶ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಮಾಜದಲ್ಲಿನ ಅಶಾಂತಿ ಮತ್ತು ಅಸಮಾನತೆ ಹೋಗಲಾಡಿಸಲು ಡಾ.ಅಂಬೇಡ್ಕರ್‌ ತತ್ವಾದರ್ಶ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.

ತಾಲೂಕು ಆಡಳಿತ ಮತ್ತು ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ಮಂಗಳವಾರ ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ.ಅಂಬೇಡ್ಕರ್ ಮತ್ತು ಬಾಬೂ ಜಗಜೀವನರಾಂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಅಂಬೇಡ್ಕರ್ ಕೇವಲ ದಲಿತರ ನಾಯಕರಾಗಿರಲಿಲ್ಲ ಸರ್ವ ಧರ್ಮದ ಮೌಡ್ಯ ತೊಲಗಿಸಿದ ನಾಯಕರಾಗಿದ್ದು,ಮಹಿಳಾ ಹಕ್ಕುಗಳ ಪರವಾಗಿ ಹಿಂದೂ ಕೋಡ್ ಬಿಲ್ ಜಾರಿ ತಂದು ಕಾರ್ಮಿಕರಿಗೆ ಎಂಟು ಗಂಟೆಗಳ ಕೆಲಸದ ಅವಧಿ,ವೇತನ ಸಹಿತ ರಜೆ ಸೇರಿದಂತೆ ಅನೇಕ ಹಕ್ಕುಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದ ಅವರು ಅಂಬೇಡ್ಕರ್ ರವರ ಆರ್ಥಿಕ ಚಿಂತನೆಗಳು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅಡಿಪಾಯ ಹಾಕಿಕೊಟ್ಟಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದ್ದು,ಪ್ರಸ್ತುತ ಸಮಾಜದಲ್ಲಿ ಅಶಾಂತಿ ಮತ್ತು ಅಸಮಾನತೆಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರುವಾಗ ಅಂಬೇಡ್ಕರ್ ರವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಇದರಿಂದ ಶಾಶ್ವತ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್‌ ಜೀವನದಲ್ಲಿನ ಅತ್ಯಂತ ಪ್ರಮುಖ ಐದು ಪ್ರಮುಖ ಸ್ಥಳಗಳನ್ನು ಆಯ್ದುಕೊಂಡು ಅಭಿವೃದ್ಧಿಪಡಿಸಿದ್ದಾರೆ.ಅಂಬೇಡ್ಕರ್ ಚಿಂತನೆಯಂತೆ ನಾವೆಲ್ಲರೂ ಕೂಡ ಒಂದಾಗಿ ಒಗ್ಗಟ್ಟಾಗಿ ಇಂತಹ ಮಹನೀಯರ ಕಾರ್ಯಕ್ರಮಗಳನ್ನು ಅತ್ಯಂತ ಕಾಳಜಿಯಿಂದ ಹಬ್ಬದಂತೆ ಆಚರಿಸೋಣ ಎಂದು ತಿಳಿಸಿದರು.

ಉಪನ್ಯಾಸಕ ಡಾ.ವಸಂತ ನಾಯಕ್ ಮಾತನಾಡಿ, 32 ಪದವಿಗಳನ್ನು ಪಡೆದ ಮೊದಲ ದಲಿತ ನಾಯಕ ಅಂಬೇಡ್ಕರ್ ರವರು ಇತಿಹಾಸವನ್ನೇ ಸೃಷ್ಟಿಸಿ ನಮ್ಮೆಲ್ಲರಿಗೂ ಪ್ರಜ್ಞೆ ಮೂಡಿಸಿದ್ದಾರೆ, ದಲಿತರ ಮತ್ತು ಶೋಷಿತ ವರ್ಗದ ಧ್ವನಿಯಾಗಿ ನಿಂತ ಅಂಬೇಡ್ಕರ್ ರವರು ಸದಾಕಾಲ ಶಾಶ್ವತ ಎಂದರು.

ಸಂಡ ಪಶು ಆಹಾರ ಘಟಕದ ಸಹಾಯಕ ನಿರ್ದೇಶಕ ಗುಡದಯ್ಯ, ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ನಗರದ ಮಹದೇವಪ್ಪ,ತಹಸೀಲ್ದಾರ್ ವಾಣಿ ,ಇಒ ನಾಗರಾಜ್,ಡಿ ವೈ ಎಸ್ ಪಿ ಕೇಶವ್,ಪುರಸಭೆ ಮುಖ್ಯಾಧಿಕಾರಿ ಭರತ್,ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂಧನ್,ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್,ಕೆಡಿಪಿ ಸದಸ್ಯರಾದ ಮಾರವಳ್ಳಿ ಉಮೇಶ್, ರಾಘವೇಂದ್ರ ನಾಯಕ್,ತಾ.ಕೃಷಿಕ ಸಮಾಜದ ಅಧ್ಯಕ್ಷ ಹುಲ್ಮಾರ್ ಮಹೇಶ್,ತಾ.ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ವಿವಿದ ದಲಿತ ಸಂಘಟನೆಗಳ ಮುಖಂಡರು ಪದಾದಿಕಾರಿಗಳು ಹಾಜರಿದ್ದರು.

ಆರಂಭದಲ್ಲಿ ಶಿವಮೊಗ್ಗ ವೃತ್ತದಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಶಾಸಕ ವಿಜಯೇಂದ್ರ ಪುಷ್ಪಹಾರ ಹಾಕಿ ಗೌರವ ಸಲ್ಲಿಸಿದರು. ನಂತರದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ವಿವಿಧ ಕಲಾತಂಡ, ಮೇಳಗಳು ಭಾಗವಹಿಸಿ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಿತು.