ಅಂಬೇಡ್ಕರ್ ಚಿಂತನೆ ಜನಸಾಮಾನ್ಯರಿಗೆ ದಿಕ್ಸೂಚಿ

| Published : Dec 07 2023, 01:15 AM IST

ಅಂಬೇಡ್ಕರ್ ಚಿಂತನೆ ಜನಸಾಮಾನ್ಯರಿಗೆ ದಿಕ್ಸೂಚಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ಅವರು ಸ್ವಾತಂತ್ರ‍್ಯದ ಹೋರಾಟವನ್ನು ಬುದ್ಧನ ದಾರಿಯಂತೆ ಹಾಗೂ ಬಸವಣ್ಣನನ್ನು ದೀಪವಾಗಿಸಿಕೊಂಡು ಅವರ ಬೌದ್ಧಿಕ ಅಂಶಗಳನ್ನು ತಮ್ಮ ಹೋರಾಟದ ಹಾದಿಯಲ್ಲಿ ಅಳವಡಿಸಿಕೊಂಡು ಜೀವನದ ಉದ್ದಕ್ಕೂ ಜನಸಾಮಾನ್ಯರ ಸಮಾನತೆ, ಭ್ರಾತೃತ್ವ, ಸಹಬಾಳ್ವೆ ಹಾಗೂ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿ ಭಾರತದ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಅಂಬೇಡ್ಕರ್ ಅವರ ಚಿಂತನೆಗಳು ಜನಸಾಮಾನ್ಯರ ದಿಕ್ಸೂಚಿಯಾಗಿದ್ದು, ಅವರು ಲಕ್ಷಾಂತರ ಜನರಿಗೆ ದಾರಿದೀಪದಂತೆ ಜನಸಾಮಾನ್ಯರಲ್ಲಿ ಇಂದಿಗೂ ಪ್ರಜ್ವಲಿಸುತ್ತಿದ್ದಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ. ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೭ನೇ ಮಹಾ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶತಮಾನಗಳಿಂದ ತುಳಿತಕ್ಕೆ ಒಳಗಾದ ತಳವರ್ಗ ಹಾಗೂ ತಳಸ್ಪರ್ಶೀಯ ಸಮುದಾಯಗಳ ಸಮಾನತೆಗಾಗಿ ಹಾಗೂ ಅವರ ಅಭಿವೃದ್ಧಿಗಾಗಿ ಸಂವಿಧಾನದ ಮೂಲಕ ಮಾರ್ಗಸೂಚಿಯನ್ನು ನಮ್ಮ ರಾಷ್ಟ್ರಕ್ಕೆ ಅರ್ಪಿಸಿದ್ದಾರೆ ಎಂದರು.

ಅಂಬೇಡ್ಕರ್ ಅವರು ಸ್ವಾತಂತ್ರ‍್ಯದ ಹೋರಾಟವನ್ನು ಬುದ್ಧನ ದಾರಿಯಂತೆ ಹಾಗೂ ಬಸವಣ್ಣನನ್ನು ದೀಪವಾಗಿಸಿಕೊಂಡು ಅವರ ಬೌದ್ಧಿಕ ಅಂಶಗಳನ್ನು ತಮ್ಮ ಹೋರಾಟದ ಹಾದಿಯಲ್ಲಿ ಅಳವಡಿಸಿಕೊಂಡು ಜೀವನದ ಉದ್ದಕ್ಕೂ ಜನಸಾಮಾನ್ಯರ ಸಮಾನತೆ, ಭ್ರಾತೃತ್ವ, ಸಹಬಾಳ್ವೆ ಹಾಗೂ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿ ಭಾರತದ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, ಅಂಬೇಡ್ಕರ ಅವರನ್ನು ಎಷ್ಟರಮಟ್ಟಿಗೆ ಅನುಸರಿಸುತ್ತಿದ್ದೇವೆ ಎನ್ನುವುದು ಮುಖ್ಯ. ಆದರೆ ಮಾತನಾಡುವುದು ಸುಲಭ. ಅವರ ತತ್ವ ಆದರ್ಶಗಳನ್ನ ಪಾಲನೆ ಮಾಡಬೇಕು ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ, ಭಾರತವು ಬಹುದೊಡ್ಡ ಶ್ರಮಿಕ ಸಮುದಾಯವನ್ನು ಒಳಗೊಂಡಿರುವ ಸಮಾಜವಾಗಿದೆ. ಇವರು ಬಹುದಿನಗಳವರೆಗೆ ಮೇಲ್ವರ್ಗದವರ ಅನುಕೂಲಕ್ಕೆ ತಮ್ಮ ಬೆವರನ್ನು ಹರಿಸುತ್ತಿದ್ದರು. ಇಂತಹ ಸಮುದಾಯಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಧ್ವನಿಯಾಗಿದ್ದರು ಎಂದರು.

ಚರಿತ್ರೆ ವಿಭಾಗದ ಸಂಶೋಧನಾರ್ಥಿ ನರಸಿಂಹ, ಮಧು, ಸಾವಿತ್ರಿ ನಿರ್ವಹಿಸಿದರು.

6ಎಚ್‌ಪಿಟಿ2

ಹಂಪಿ ಕನ್ನಡ ವಿವಿಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಪುಷ್ಪನಮನ ಸಲ್ಲಿಸಿದರು.