ಸಾರಾಂಶ
ಗದಗ: ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆ ಹಾಗೂ ನಡೆದು ಬಂದ ದಾರಿಯ ವಾಸ್ತವ ತಿಳಿಯುವದು ಇಂದಿನ ಪೀಳಿಗೆಗೆ ಅವಶ್ಯಕ. ಭಾರತದ ಸಂವಿಧಾನ ಇತ್ತೀಚಿನ ದಿನಗಳಲ್ಲಿ ಪಂಚಾಯತ್ ಗಳಿಂದ ಪಾರ್ಲಿಮೆಂಟ್ ವರೆಗೆ ಹೆಚ್ಚು ಚರ್ಚೆಯ ವಿಷಯವಾಗಿದೆ ಎಂದು ನಾಗರಾಜ ಕುಲಕರ್ಣಿ ಹೇಳಿದರು.
ನಗರದ ಕೆಎಸ್ಎಸ್ ಕಾಲೇಜ್ ನಲ್ಲಿ ನಡೆದ ಸಂವಿಧಾನ ಸಮ್ಮಾನ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕಳೆದ ವಿಧಾನಸಭೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭಾಧ್ಯಕ್ಷರಿದ್ದಾಗ ಸಂವಿಧಾನದ ಕುರಿತಾದ ದೀರ್ಘವಾದ ಚರ್ಚೆ ಆಗಿದ್ದನ್ನು ನಾವು ನೋಡಿದ್ದೇವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅತ್ಯಂತ ಅಧ್ಯಯನ ಪೂರ್ಣವಾದ ಮಾನವೀಯ ಮೌಲ್ಯ ಒಳಗೊಂಡ ಶ್ರೇಷ್ಠ ಸಂವಿಧಾನ ನಮಗೆ ನೀಡಿದ್ದಾರೆ. ಹಾಗಾಗಿ ಅಂಬೇಡ್ಕರ್ ಚಿಂತನೆ ಹಾಗೂ ನಡೆದು ಬಂದ ದಾರಿ ಅವರ ಜೀವನ ಇಂದಿನ ಪೀಳಿಗೆ ಅಧ್ಯಯನ ಮಾಡುವುದರಿಂದ ಅಂಬೇಡ್ಕರ್ ನಿಜವಾದ ಜೀವನದ ಘಟನಾವಳಿ ತಿಳಿಯುವದು ಸಾಧ್ಯ. ಕಾಂಗ್ರೆಸ್ ಪಕ್ಷದವರು ನಾವು ಸಂವಿಧಾನ ರಕ್ಷಕರು, ಬಿಜೆಪಿ ಸಂವಿಧಾನ ಬದಲಿ ಮಾಡುತ್ತದೆ ಎಂದು ಹೇಳಿದರೆ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತೀ ಹೆಚ್ಚು ಸಂವಿಧಾನ ತಿದ್ದುಪಡಿ ಮಾಡಿ ಸಂವಿಧಾನದ ಆಶಯಕ್ಕೆ ಭಂಗ ತರುವಂತ ಕೆಲಸ ಕಾಂಗ್ರೆಸ್ ಮಾಡಿದೆ ಎಂದರು.
ರಮೇಶ ಸಜ್ಜಗಾರ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ 32 ಪದವಿ ಪಡೆದು ಅಂದಿನ ಕಾಲದ ವಿಶ್ವದ ಶ್ರೇಷ್ಠ ಜ್ಞಾನವಂತರಲ್ಲಿ ಅವರು ಕೂಡಾ ಒಬ್ಬರಾಗಿದ್ದರು. ಆದರೆ ಅವರನ್ನು ನೆಹರು ಕಾಲದಲ್ಲಿ ಚುನಾವಣೆಯ ಸ್ಪರ್ಧೆಯಲ್ಲಿ ಅವರ ವಿರುದ್ಧ ಆಪ್ತ ಸಹಾಯಕನಿಂದಲೆ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸೊಲಿಸಿತು. ಅಂದಿನ ಪ್ರಧಾನಿ ನೆಹರು ಅಂಬೇಡ್ಕರ್ ಅವರಿಗೆ ಗೌರವ ನೀಡುವ ವಿಚಾರವಿದ್ದಿದ್ದರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬಹುದಾಗಿತ್ತು. ಆದರೆ ಇಂದಿನ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ವಾಸಸ್ಥಳ, ಅಧ್ಯಯನ ಮಾಡಿದ ಸ್ಥಳಗಳಲ್ಲಿ ಪಂಚತೀರ್ಥ ಕ್ಷೇತ್ರಗಳಾಗಿ ನೂರಾರು ಕೋಟಿ ವೆಚ್ಚ ಮಾಡಿ ಅಭಿವೃದ್ಧಿಪಡಿಸಿ ಅವರ ವಿಚಾರ ಚಿಂತನೆ ಯುವ ಪೀಳಿಗೆಗೆ ತಿಳಿಸಲು ಸಹಕಾರಿಯಾಗಿದೆ. ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲು ಕಾಂಗ್ರೆಸೇತರ ಸರ್ಕಾರ ಬರಬೇಕಾಯಿತು. ಹೀಗಾಗಿ ಅಂಬೇಡ್ಕರ್ ಸಾಗಿ ಬಂದ ನಿಜವಾದ ದಾರಿ ನಾವು ಅಧ್ಯಯನ ಮಾಡಿದರೆ ಅಂಬೇಡ್ಕರ್ ವಾಸ್ತವ ಬದುಕು ನಮಗೆ ಪ್ರೇರಣೆಯಾಗುತ್ತದೆ ಎಂದರು.ಈ ವೇಳೆ ಡಾ.ಕಮಲಾಕ್ಷೀ ಅಂಗಡಿ ಮಾತನಾಡಿದರು. ಪ್ರಿನ್ಸಿಪಾಲ ಡಿ.ಬಿ. ಗವಾನಿ, ಉಮೇಶ ಹಿರೇಮಠ, ಉಪನ್ಯಾಸಕ ಸತೀಶ ಪಾಸಿ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.