ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಡಾ.ಬಿ.ಆರ್. ಅಂಬೇಡ್ಕರ್ ಆಶಯಗಳು ಈಡೇರಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅಭಿಪ್ರಾಯಪಟ್ಟರು.ಪಟ್ಟಣದ ಪ್ರಜಾಸೌಧದ ಸಭಾ ಭವನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ನೇ ಪರಿ ನಿರ್ವಾಣ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ನೀಡಿದ್ದಾರೆ. ನಮ್ಮ ದೇಶದ ಸಂವಿಧಾನ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿದೆ. ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ, ಕನಕದಾಸ ಸೇರಿದಂತೆ ಹಲವು ಮಹನೀಯರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಗೊಂದಲ, ಗದ್ದಲ:ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ೧೦.೩೦ ಕ್ಕೆ ಬದಲಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗಂಟೆ ಗಟ್ಟಲೇ ತಡವಾಗಿ ಬಂದಾಗ ದಲಿತ ಮುಖಂಡ ಚಿಕ್ಕಣ್ಣ ಅಂಬೇಡ್ಕರ್ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದೀರಿ ಎಂದು ವಾಗ್ವಾದಕ್ಕಿಳಿದರು. ಈ ಸಮಯದಲ್ಲಿ ಶಾಸಕ ಕೂಡ ಸ್ವಲ್ಪ ತಾಳ್ಮೆ ಕಳೆದುಕೊಂಡು ವೇದಿಕೆಯಿಂದ ಕೆಳಗಿಳಿದು ಬಂದ ಕಾರಣ ಸಭೆ ಗದ್ದಲಗೊಂಡಿತು. ಈ ವೇಳೆ ಶಾಸಕರ ಬೆಂಬಲಿಗ ನೇನೇಕಟ್ಟೆ ಪ್ರದೀಪ್ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಗದರಿ ಗಲಾಟೆ ಮಾಡೋರನ್ನು ಆಚೆ ಕಳುಹಿಸಿ ಎಂದ ಬಳಿಕ ಪೊಲೀಸರು ಚಿಕ್ಕಣ್ಣರನ್ನು ಸಭೆಯಿಂದ ಆಚೆ ಕರೆದುಕೊಂಡು ಹೋಗಿ ಸಮಾಧಾನ ಪಡಿಸಿದರು.
ಪುರಸಭೆ ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್, ತಹಸೀಲ್ದಾರ್ ಟಿ.ರಮೇಶ್ ಬಾಬು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಎಚ್.ಆರ್.ರಾಜಗೋಪಾಲ್, ಪುರಸಭೆ ಮುಖ್ಯಾಧಿಕಾರಿ ಶರವಣ, ಸಿಡಿಪಿಒ ಎಂ.ಹೇಮವತಿ ಸೇರಿದಂತೆ ದಲಿತ ಮುಖಂಡರು ಇದ್ದರು.ದಲಿತ ವಿರೋಧಿ ಪಟ್ಟ ಕಟ್ಟುವ ಹುನ್ನಾರಅಂಬೇಡ್ಕರ್ ಪರಿನಿರ್ವಾಣ ಸಭೆಯಲ್ಲಿ ಶಾಸಕ ಗಣೇಶ್ ಪ್ರಸಾದ್ ಅವರು ನನ್ನ ಮೇಲೆ ದಲಿತ ವಿರೋಧಿ ಪಟ್ಟ ಕಟ್ಟಲು ಕೆಲವರು ಹುನ್ನಾರ ನಡೆಸಿದ್ದಾರೆ. ಆದರೆ ನಾನು ದಲಿತ ವಿರೋಧಿಯಲ್ಲ ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಸ್ಪಷ್ಟಪಡಿಸಿದರು. ಅಂಬೇಡ್ಕರ್ ಪರಿ ನಿರ್ವಾಣ ಕಾರ್ಯಕ್ರಮದಲ್ಲಿ ನಾನು ಸ್ವಲ್ಪ ತಡವಾಗಿ ಬಂದಿದ್ದಕ್ಕೆ ವ್ಯಕ್ತಿಯೋರ್ವ ಮಾತನಾಡಿದ ಪರಿ ನೋಡಿದ್ರೆ ನನ್ನ ಹೆಸರು ಕೆಡಿಸಲು ನಡೆಸುವ ಹುನ್ನಾರ ಎಂದು ಆರೋಪಿಸಿದರು. ನಾನು ಶಾಸಕನಾಗುವುದಕ್ಕೂ ಮುಂಚೆಯು ಅಂಬೇಡ್ಕರ್ ಕಾರ್ಯಕ್ರಮಗಳು ಹಾಗೂ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಸಹಾಯ ಮಾಡಿದ್ದೇನೆ. ಆದರೂ ಕೆಲವರು ದಲಿತ ವಿರೋಧಿ ಪಟ್ಟ ಕಟ್ಟಲು ಪ್ರಯತ್ನಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.