ರಾಮನಗರ: ಡಾ.ಬಿ.ಆರ್ .ಅಂಬೇಡ್ಕರ್ ದಲಿತರು ಮತ್ತು ಅಸ್ಪೃಶ್ಯರಿಗಾಗಿ ಮಾತ್ರ ಸಂವಿಧಾನ ಬರೆಯಲಾಗಿದೆ ಎಂಬ ಅಪಪ್ರಚಾರ ಇಂದಿಗೂ ನಡೆಯುತ್ತಿರುವುದು ಬಹುದೊಡ್ಡ ದುರಂತ. ಇದು ಅಂಬೇಡ್ಕರ್ ವ್ಯಕ್ತಿತ್ವ, ತ್ಯಾಗ ಮತ್ತು ಹೋರಾಟಕ್ಕೆ ಎಸಗುವ ದ್ರೋಹ ಎಂದು ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಕಿಡಿಕಾರಿದರು
ರಾಮನಗರ: ಡಾ.ಬಿ.ಆರ್ .ಅಂಬೇಡ್ಕರ್ ದಲಿತರು ಮತ್ತು ಅಸ್ಪೃಶ್ಯರಿಗಾಗಿ ಮಾತ್ರ ಸಂವಿಧಾನ ಬರೆಯಲಾಗಿದೆ ಎಂಬ ಅಪಪ್ರಚಾರ ಇಂದಿಗೂ ನಡೆಯುತ್ತಿರುವುದು ಬಹುದೊಡ್ಡ ದುರಂತ. ಇದು ಅಂಬೇಡ್ಕರ್ ವ್ಯಕ್ತಿತ್ವ, ತ್ಯಾಗ ಮತ್ತು ಹೋರಾಟಕ್ಕೆ ಎಸಗುವ ದ್ರೋಹ ಎಂದು ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಕಿಡಿಕಾರಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ 135ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ದಲಿತ ಎಂಬುದನ್ನು ಮರೆತಾಗ ಮಾತ್ರ ಸಂವಿಧಾನ ಮತ್ತು ಅಂಬೇಡ್ಕರ್ ಏನೆಂಬುದು ಗೊತ್ತಾಗುತ್ತದೆ. ಅಂಬೇಡ್ಕರ್ ಜಾತಿವಾದಿ ಆಗಿರಲಿಲ್ಲ. ದೇಶದಲ್ಲಿನ ಎಲ್ಲ ಜಾತಿ, ಧರ್ಮ, ಸಮುದಾಯದವರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡೇ ಸಂವಿಧಾನ ಬರೆದರು. ಒಂದು ವೇಳೆ ದಲಿತರಿಗೆ ಮಾತ್ರ ಸಂವಿಧಾನ ಬರೆದಿದ್ದರೆ ಕಳೆದ 75 ವರ್ಷಗಳಲ್ಲಿ ದಲಿತ ನಾಯಕರು ದೇಶದಲ್ಲಿ ಪ್ರಧಾನಮಂತ್ರಿ ಹಾಗೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಏಕೆ ಸಾಧ್ಯವಾಗಲಿಲ್ಲ ಏಕೆಂದು ಪ್ರಶ್ನಿಸಿದರು.ಅಂಬೇಡ್ಕರ್ ಗೆ ಮಾಡಿದ ಅವಮಾನ:
ಈ ಸಂವಿಧಾನ ಜಾತ್ಯಾತೀತ, ಧರ್ಮತೀತವಾಗಿರುವ ಕಾರಣದಿಂದಲೇ ಎಲ್ಲ ವರ್ಗದವರು ಶಿಕ್ಷಣ, ಉದ್ಯೋಗಾವಕಾಶ, ಅಧಿಕಾರ, ಮತದಾನದ ಹಕ್ಕು ಪಡೆಯುತ್ತಿದ್ದಾರೆ. ಇದ್ಯಾವುದು ದಲಿತರಿಗೆ ಮಾತ್ರ ಸೀಮಿತವಾಗಿಲ್ಲ. ಇಷ್ಟಾದರೂ ಸಂವಿಧಾನ ಬದಲಾಯಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಮನುವಾದಿಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಸಂವಿಧಾನ ಸುಟ್ಟು ಹಾಕಿದಾಗಲೂ ಭಾರತೀಯರು ಮಾತನಾಡಲೇ ಇಲ್ಲ. ಇದೊಂದು ದೊಡ್ಡ ದುರಂತ. ಅಂಬೇಡ್ಕರ್‌ಗೆ ಮಾಡಿದ ಅವಮಾನ ಎಂದು ಅಪ್ಪಗೆರೆ ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.ಈ ದೇಶಕ್ಕೆ ಸಮಾನತೆ, ಸ್ವಾತಂತ್ರ್ಯ, ಭಾತೃತ್ವದ ತತ್ವಗಳ ಅಡಿಯಲ್ಲಿ ಅಂಬೇಡ್ಕರ್ ಸಂವಿಧಾನವನ್ನು ಕೊಡುಗೆಯಾಗಿ ನೀಡಿದರು. ಅವರಿಂದ ಲಾಭ ಪಡೆದ ಜನರು ಅವರಿಗಾಗಿ ಏನನ್ನೂ ಕೊಡಲು ಸಾಧ್ಯವಾಗಲಿಲ್ಲ. ಬದಲಿಗೆ ಜಾತಿಯ ಕಾರಣಕ್ಕೆ ಅವಮಾನ ಎದುರಿಸಿದರು. ಜೀವಂತವಾಗಿದ್ದಾಗಲು ಮತ್ತು ಮರಣದ ನಂತರವೂ ಅಂಬೇಡ್ಕರ್ ಅವರನ್ನು ಸಮಾಜ ಅವಮಾನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿಯ ಕಾರಣಕ್ಕೆ ಅಂಬೇಡ್ಕರ್ ಮೇಲೆ ಹಲ್ಲೆ ಮಾಡಿ ಅವಮಾನಿಸಿ ನಿಂದಿಸಲಾಗುತ್ತಿತ್ತು. ಇಷ್ಟಾದರು ಅಂಬೇಡ್ಕರ್ ತಮ್ಮ ಎದೆಯೊಳಗೆ ಪ್ರತೀಕಾರ ಇಟ್ಟುಕೊಳ್ಳಲಿಲ್ಲ. ದೇಶ ಅವರಿಗೆ ಬಹುದೊಡ್ಡ ಅನ್ಯಾಯ ಮಾಡಿದ್ದಾಗಿಯೂ ಅವರಿಗೆ ಸಂವಿಧಾನ ಬರೆಯುವ ಅವಕಾಶ ಸಿಕ್ಕಾಗ ದೇಶ, ಜಾತಿ, ಧರ್ಮ, ಸಮುದಾಯಗಳಿಗೆ ಅನ್ಯಾಯ ಮಾಡಿಲ್ಲ ಎಂಬುದಕ್ಕೆ ಸಂವಿಧಾನವೇ ಸಾಕ್ಷಿ ಎಂದು ಹೇಳಿದರು.ಧರ್ಮ ಗ್ರಂಥಗಳಲ್ಲಿ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಆದರೆ, ಸಂವಿಧಾನದಲ್ಲಿ ತಿದ್ದುಪಡಿಗಳು ಆಗುತ್ತಲೇ ಇರುತ್ತವೆ. ಇದು ಸಂವಿಧಾನದ ಚಲನಶೀಲತೆ ತೋರಿಸುತ್ತದೆ. ಅಖಂಡ ಭಾರತ ಉಳಿಯಲು ಮತ್ತು ಪ್ರಬುದ್ಧ ಭಾರತ ನಿರ್ಮಾಣಕ್ಕೆ ಅಂಬೇಡ್ಕರ್ ಸಂವಿಧಾನವೇ ಕಾರಣ. ಆದರೀಗ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ. ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಅಪ್ಪಗೆರೆ ಸೋಮಶೇಖರ್ ತಿಳಿಸಿದರು.
ಮನುಧರ್ಮ ಶಾಸ್ತ್ರ ಮಹಿಳೆಯರು, ಅಸ್ಪೃಶ್ಯರು, ಹಿಂದುಳಿದ ವರ್ಗದವರಿಗೆ ಶಿಕ್ಷಣ ಕೊಡಬಾರದು ಅಂತ ಹೇಳಿತ್ತು. ಅಸ್ಪೃಶ್ಯರನ್ನು ಮನುಷ್ಯರನ್ನಾಗಿ ಕಾಣದ ಸ್ಥಿತಿ ಮನುಶಾಸ್ತ್ರದಲ್ಲಿತ್ತು. ಆ ಕಾರಣಕ್ಕಾಗಿ ಅಂಬೇಡ್ಕರ್ ಮನುಧರ್ಮ ಶಾಸ್ತ್ರ ಸುಟ್ಟು ಹಾಕಿದರು. ಎಲ್ಲ ಜಾತಿ , ಧರ್ಮದವರಿಗೆ ಶಿಕ್ಷಣ, ಸಾಮಾಜಿಕ ನ್ಯಾಯ, ಉದ್ಯೋಗಾವಕಾಶ, ರಾಜಕೀಯ ಪ್ರಾತಿನಿಧ್ಯ, ಭೂಮಿ ಹಕ್ಕನ್ನು ಮನುಶಾಸ್ತ್ರ ವಿರೋಧಿಸಿದರೆ ಸಂವಿಧಾನ ಅದೆಲ್ಲವನ್ನು ಕಾನೂನಾಗಿಸಿ ಕೊಡಬೇಕು ಅಂತ ಹೇಳುತ್ತದೆ. ಈ ಕಾರಣಕ್ಕಾಗಿ ಅಂಬೇಡ್ಕರ್ ರಾಷ್ಟ್ರೀಯವಾದಿಯಾಗಿ ಕಾಣುತ್ತಾರೆ ಎಂದು ಹೇಳಿದರು.ನಾವೆಲ್ಲರು ಸಂವಿಧಾನ ಋಣದ ಮಕ್ಕಳು:
ಸಾಮಾನ್ಯವಾಗಿ ಜನರಿಗೆ ಏಪ್ರಿಲ್ 14ರ ಅಂಬೇಡ್ಕರ್, ಡಿಸೆಂಬರ್ 6ರ ಅಂಬೇಡ್ಕರ್, ಮೀಸಲಾತಿ ಜನಕ ಅಂಬೇಡ್ಕರ್, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಹೊರತು ಪಡಿಸಿದರೆ ಉಳಿದ 95 ವ್ಯಕ್ತಿತ್ವದ ಅಂಬೇಡ್ಕರ್ ಬಗ್ಗೆ ತಿಳಿದಿಲ್ಲ. ಇದನ್ನು ಉದ್ದೇಶ ಪೂರ್ಕವಾಗಿ ಮರೆಮಾಚಲಾಗಿದೆ. ಅಹಿಂಸಾವಾದಿ, ಆರ್ಥಿಕ ತಜ್ಞ, ನೀರಾವರಿ, ರೖತವಾದಿ, ಕಾರ್ಮಿಕವಾದಿ, ಮಹಿಳಾ ವಾದಿ, ಸಮಾನತವಾದಿ ಅಂಬೇಡ್ಕರ್ ಅವರನ್ನು ಅರಿಯುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.ಸಾಮಾಜಿಕ , ಆರ್ಥಿಕ, ಭೂಮಿ ಅಸಮಾನತೆ ಸರಿಪಡಿಸಿಕೊಳ್ಳದಿದ್ದರೆ ನೊಂದ ಜನರು ದಂಗೆ ಏಳಿ ಪ್ರಜಾಪ್ರಭುತ್ವ ಧ್ವಂಸ ಮಾಡುತ್ತಾರೆಂದು ಅಂಬೇಡ್ಕರ್ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ. ಆದರೆ, 75 ವರ್ಷಗಳಲ್ಲಿ ಆಳ್ವಿಕೆ ಮಾಡಿದ ಸರ್ಕಾರಗಳನ್ನು ಈ ಮಾತನ್ನು ಕೇಳಿಸಿಕೊಂಡಿಲ್ಲ. ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನ ಋಣದ ಮಕ್ಕಳು ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಆ ಸಂವಿಧಾನವನ್ನು ಮರೆತ ಭಾರತಕ್ಕಾಗಲಿ ಅಥವಾ ಭಾರತೀಯರಿಗಾಗಲಿ ಭವಿಷ್ಯ ಇಲ್ಲ ಎಂದು ಅಪ್ಪಗೆರೆ ಸೋಮಶೇಖರ್ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.ಶಾಸಕ ಇಕ್ಬಾಲ್ ಹುಸೇನ್, ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಮಾತನಾಡಿದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಎಎಸ್ಪಿ ರಾಮಚಂದ್ರಯ್ಯ, ತಹಸೀಲ್ದಾರ್ ತೇಜಸ್ವಿನಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶೇಖರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಲಾಲ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ಡಿಸಿಎಫ್ ರಾಮಕೃಷ್ಣ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್,
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯ ಚೆಲುವರಾಜು ಮತ್ತಿತರರು ಉಪಸ್ಥಿತರಿದ್ದರು.14ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.