ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಎಲ್ಲಾ ಶೋಷಿತ ವರ್ಗದ ಜನರ ಸಮಸಮಾಜ ನಿರ್ಮಾಣ ವಾಗಬೇಕೆಂದರೆ ಶಿಕ್ಷಣ ಪಡೆಯುವುದು ಅಗತ್ಯ. ದೀಕ್ಷಾ ಭೂಮಿ ಯಾತ್ರಿಕರು ಪ್ರವಾಸಕ್ಕಾಗಿ ಮಾತ್ರ ತೆರಳದೆ ಅಂಬೇಡ್ಕರ್ ವಿಚಾರಧಾರೆಗಳನ್ನು ಅರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 222 ಅನುಯಾಯಿಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನಾಗಪುರದ ದೀಕ್ಷಾಭೂಮಿಗೆ ಯಾತ್ರೆ ಕರೆದೊಯ್ಯವ ಬಸ್‌ಗೆ ಚಾಲನೆ ನೀಡಿ ಮಾತನಾ ಡಿದರು. ಇಡೀ ವಿಶ್ವ ಮೆಚ್ಚುವ ಸಂವಿಧಾನ ರಚಿಸಿರುವ ಡಾ.ಅಂಬೇಡ್ಕರ್ ಅವರ ಪಂಚಧಾಮಗಳಲ್ಲಿ ಒಂದಾದ ನಾಗಪುರ ದೀಕ್ಷಾ ಭೂಮಿಯಲ್ಲಿರುವ ಡಾ.ಅಂಬೇಡ್ಕರ್ ವಿಚಾರಧಾರೆಗಳನ್ನು 222 ಮಂದಿ ಯಾತ್ರಿಕರು ಸ್ವತಃ ಅರಿತು ಅದನ್ನು ತಲಾ ಕನಿಷ್ಠ 10 ಜನರಿಗೆ ತಲುಪಿಸಿದಲ್ಲಿ 2,200 ಜನರಿಗೆ ತಲುಪುತ್ತದೆ ಎಂದು ಹೇಳಿದರು. ಸಾಕ್ಷರತೆಯಲ್ಲಿ ದೇಶದಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ನಮ್ಮ ರಾಜ್ಯ 2ನೇ ಸ್ಥಾನದಲ್ಲಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡ ಬೇಕೆಂಬ ಅಂಬೇಡ್ಕರ್ ಆಶಯದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವ ಎಚ್.ಸಿ.ಮಹದೇವಪ್ಪ ಯೋಜನೆ ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ವಿಚಾರವನ್ನು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ದೀಕ್ಷಾಭೂಮಿ ಯಾತ್ರಾರ್ಥಿಗಳು ಮಾಡಬೇಕು ಎಂದರು. ನಮ್ಮ ಸರ್ಕಾರ ಬಂದ 3 ವರ್ಷದಿಂದಲೂ ಈ ಯಾತ್ರೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ನಮ್ಮ ಸರ್ಕಾರ ಬಡವರು, ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜನಾಂಗದ ಬಡವರ ಪರ ಇರುವ ಹಲವಾರು ಯೋಜನೆ ಜಾರಿಗೊಳಿಸಿದೆ. ಅದರಲ್ಲಿ ಇದು ಒಂದು ಯೋಜನೆಯಾಗಿದ್ದು, ಯಾತ್ರಿಕರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.ವಾಹನ ಚಾಲಕರು ಹಾಗೂ ನಿರ್ವಾಹಕರು ಆದಷ್ಟೂ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವಂತೆ ತಿಳಿಸಿದ ಅವರು, ರಾಜ ಹಂಸ ಬಸ್‌ಗಿಂತ ಉತ್ತಮ ಬಸ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ಐದು ದಿನದ ಯಾತ್ರಿಕರು ನಾಗಪುರ ದೀಕ್ಷಾಭೂಮಿ ಯಾತ್ರೆ ಅನುಭವ ಜೀವನ ಪರ್ಯಂತ ಸ್ಮರಣೆಯಲ್ಲಿ ಉಳಿಯಲಿದೆ. ಅಲ್ಲಿ ನಡೆಯುವ ದೀಕ್ಷಾ ಬೋಧನೆ ಬಗ್ಗೆ ಅರಿತು ಇಲ್ಲಿ ಹೆಚ್ಚು ಪ್ರಚಾರ ನೀಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ಮಾಲತಿ ಸ್ವಾಗತಿಸಿದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರೇವಣ್ಣ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.30 ಕೆಸಿಕೆಎಂ 2ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿ ಗಳನ್ನು ನಾಗಪುರದ ದೀಕ್ಷಾಭೂಮಿಗೆ ಯಾತ್ರೆ ತೆರಳುವ ಬಸ್‌ಗೆ ಶಾಸಕ ಎಚ್.ಡಿ. ತಮ್ಮಯ್ಯ ಚಾಲನೆ ನೀಡಿದರು.