ಸಾರಾಂಶ
ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನವನ್ನು ಸವೆಸಿದರು. ಆದ್ದರಿಂದ ನಾವು ಕೂಡ ಅವರ ಹಾದಿಯನ್ನು ತುಳಿಯಬೇಕು. ಸಮಾಜದ ಉನ್ನತಿಗಾಗಿ ಸಮಾಜದ ರಕ್ಷಣೆಗಾಗಿ ಬೌದ್ಧ ಧರ್ಮ ಅನುಸರಿಸಬೇಕು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಪ್ರಸ್ತುತ ಸಮಾಜದಲ್ಲಿ ದಲಿತರಿಗೆ ಸಮಾನತೆ ದೊರಕಬೇಕಾದರೆ ಅಂಬೇಡ್ಕರ್ ಆಶಯಗಳನ್ನು ಸದಾಕಾಲ ಮುನ್ನೆಲೆಗೆ ತರಬೇಕು ಎಂದು ವಕೀಲರು ಹಾಗೂ ಸಮಾಜ ಸೇವಕರಾದ ದೊಡ್ಡ ಹರಳಿಗೆರೆ ನಾಗೇಶ್ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಬುದ್ಧಿಸ್ಟ್ ಫ್ಯಾಮಿಲೀಸ್ ಹೊಸಕೋಟೆ ತಾಲೂಕು ವತಿಯಿಂದ ಆಯೋಜಿಸಲಾಗಿದ್ದ ಧಮ್ಮದೀಪ ಕಾರ್ಯಕ್ರಮ ಹಾಗೂ ಡಾ. ಸಿದ್ದಲಿಂಗಯ್ಯನವರ ಜೀವನಾಧಾರಿತ ಊರುಕೇರಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ಬದುಕಿರುವಷ್ಟು ದಿನವೂ ದಲಿತರ ಸಮಾನತೆಗಾಗಿ ಅವಿರತ ಹೋರಾಟ ಮಾಡಿದವರು. ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಸಹ ದಲಿತರಿಗೆ ಸಮಾನತೆ ದಕ್ಕುತ್ತಿಲ್ಲ. ಸಮಾನತೆಗಾಗಿ ಸಹಸ್ರಾರು ಹೋರಾಟಗಾರರು ಹೋರಾಟದ ಮೂಲಕ ಬದುಕನ್ನು ಮೀಸಲಿಟ್ಟಿದ್ದಾರೆ. ನಮ್ಮನ್ನು ಆಳುವ ವರ್ಗ ಇಂದಿಗೂ ಕೂಡ ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳುತ್ತಿವೆ. ಆದರೆ ಸಮಾನತೆ ಕೊಡಿಸುವ ಕೆಲಸಕ್ಕೆ ಮಾತ್ರ ಮುಂದಾಗಿಲ್ಲ. ಅದರಿಂದ ಅಂಬೇಡ್ಕರ್ ಅವರ ಆಶಯಗಳನ್ನು ಪ್ರತಿಯೊಬ್ಬರೂ ಅನುಕರಣೆ ಮಾಡಬೇಕು. ದಲಿತ ಕವಿ ಸಿದ್ದಲಿಂಗಯ್ಯನವರ ಊರುಕೇರಿ ನಾಟಕ ದಲಿತರ ಬದುಕನ್ನು ಕಣ್ಣ ಮುಂದೆ ತರುವ ಕೆಲಸ ಮಾಡಿರೋದು ಪ್ರಶಂಸನೀಯ ಎಂದರು.ಪ್ರೊಫೆಸರ್ ಜನಾರ್ಧನ್ ಮಾತನಾಡಿ, ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನವನ್ನು ಸವೆಸಿದರು. ಆದ್ದರಿಂದ ನಾವು ಕೂಡ ಅವರ ಹಾದಿಯನ್ನು ತುಳಿಯಬೇಕು. ಸಮಾಜದ ಉನ್ನತಿಗಾಗಿ ಸಮಾಜದ ರಕ್ಷಣೆಗಾಗಿ ಬೌದ್ಧ ಧರ್ಮ ಅನುಸರಿಸಬೇಕು ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೊರಳೂರು ಶ್ರೀನಿವಾಸ್, ಆಯೋಜಕರಾದ ರಾಮಾಂಜಿನಿ, ಅನಿಲ್, ಅಂಜನ್ ಬೌದ್, ನಾಗೇಶ್ ಮೌರ್ಯ, ಬಂಡಳ್ಳಿ ಪ್ರಶಾಂತ್, ಪೊಲೀಸ್ ದೇವರಾಜ್, ದೇವನಹಳ್ಳಿ ಸಿದ್ದಾರ್ಥ್, ವಿಜಯ್ ಕುಮಾರ್, ಶಶಿಕಲಾ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.----