ಶಾಲೆ ಆವರಣದಲ್ಲೇ ಅಂಬೇಡ್ಕರ್‌ ಪ್ರತಿಮೆ ಉಳಿಸಿಕೊಳ್ಳಬೇಕು

| Published : Mar 10 2025, 12:18 AM IST

ಸಾರಾಂಶ

ಡಾ.ಎಂ.ಸಿ.ಸುಧಾಕರ್ ಶಾಸಕರು ಮಂತ್ರಿಗಳು ಆದ ಮೇಲೆ ಅವರ ಸ್ವಂತ ಟ್ರಸ್ಟ್‌ ಮುವತ್ತೋ ಮುವತ್ತೈದು ಗುಂಟೆ ಜಾಗ ಮಾಡಿಸಿಕೊಂಡು ಶಾಲೆ ನಡೆಸುತ್ತಿದ್ದಾರೆ. ಬಹುಶ ಅವರ ಉದ್ದೇಶ ನನಗೆ ಬೇರೆಯವರು ಹೇಳಿದಂತೆ ಈ ಸರ್ಕಾರಿ ಶಾಲೆಯ ಜಮೀನನ್ನು ಕೂಡ ಅವರ ಖಾಸಗಿ ಟ್ರಸ್ಟ್ ಗೆ ವರ್ಗಾಯಿಸಿಕೊಳ್ಳುವ ಹುನ್ನಾರವಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಂತಾಮಣಿ ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಡಳಿತ ತಾಲೂಕು ಆಡಳಿತ ಕೊಳಕುಬಟ್ಟೆ ಸುತ್ತಿ ಅವಮಾನಿಸಿವೆ ಎಂದು ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ವೇಳೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಡಾ.ಅಂಬೇಡ್ಕರ್ ಪ್ರತಿಮೆ ವಿಚಾರದಲ್ಲಿ ಜಿಲ್ಲಾಡಳಿತ ಕಾರ್ಯವೈಖರಿ ಖಂಡನೀಯ ಎಂದರು.

ಬಿಇಒ ಅನುಮತಿ ನೀಡಿದ್ದಾರೆ

ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣ ಮಾಡಲು ಆಗಿನ ಬಿಇಒ ಅನುಮತಿ ಕೊಟ್ಟಿದ್ದಾರೆ. ಈಗಿನ ಸರ್ಕಾರದಲ್ಲಿ ಡಾ.ಎಂ.ಸಿ.ಸುಧಾಕರ್ ಶಾಸಕರು ಮಂತ್ರಿಗಳು ಆದ ಮೇಲೆ ಅವರ ಸ್ವಂತ ಟ್ರಸ್ಟ್‌ ಮುವತ್ತೋ ಮುವತ್ತೈದು ಗುಂಟೆ ಜಾಗ ಮಾಡಿಸಿಕೊಂಡು ಶಾಲೆ ನಡೆಸುತ್ತಿದ್ದಾರೆ. ಬಹುಶ ಅವರ ಉದ್ದೇಶ ನನಗೆ ಬೇರೆಯವರು ಹೇಳಿದಂತೆ ಈ ಸರ್ಕಾರಿ ಶಾಲೆಯ ಜಮೀನನ್ನು ಕೂಡ ಅವರ ಖಾಸಗಿ ಟ್ರಸ್ಟ್ ಗೆ ವರ್ಗಾಯಿಸಿಕೊಳ್ಳುವ ಹುನ್ನಾರವಿದೆ ಎಂದರು.ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ.ಹೋರಾಟಗಾರರು ಹೇಳುತ್ತಿರುವ ಕಾಣದ ಕೈಯೆಂದರೆ ಅದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ ಆಗಿದ್ದಾರೆ ಎಂದು ನೇರವಾಗಿ ಹೇಳುತ್ತಿದ್ದೇವೆ. ಸಚಿವ ಡಾ.ಎಂ.ಸಿ.ಸುಧಾಕರ್ ಎಂ.ಎಲ್.ಎ ಆಗಿದ್ದಾರೆಂದರೆ ದೀನ ದಲಿತರು ಮತಗಳನ್ನು ಕೊಟ್ಟಿದ್ದಾರೆ.ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಒಣ ಪ್ರತಿಷ್ಠೆ ಬಿಟ್ಟು ತಕ್ಷಣ ಪ್ರತಿಮೆಯನ್ನು ಅಲ್ಲೇ ಉಳಿಸುವ ಕೆಲಸ ಮಾಡಿ ಅನಾವರಣ ಮಾಡುವಂತೆ ಒತ್ತಾಯಿಸಿದರು.

ಸಂಘಟನೆಯ ಸಂಘ ಟನಾ ಸಂಚಾಲಕ ಯಣ್ಣೂರು ಶ್ರೀನಿವಾಸ್ ಮಾತನಾಡಿದರು. ಈವೇಳೆ ಕೇಂದ್ರದ ಮಾಜಿನ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸೂಲಕುಂಟೆ ರಮೇಶ್, ಜಿಲ್ಲಾ ಸಂಘಟನಾ ಸಂಚಾ ಲಕ ತಿಪ್ಪೇನಹಳ್ಳಿ ನಾರಾಯಣ್, ಜಿಲ್ಲಾ ಸಂಚಾಲಕ ಕಡ್ಡೀಲ್ ವೆಂಕಟರೋಣಪ್ಪ, ಎಂ.ಜಿ.ಕಿರಣ್ ಕುಮಾರ್, ನಂಜುಂಡಪ್ಪ, ಗೊರಮಡುಗು ನಾರಾಯಣಸ್ವಾಮಿ, ಚಲಪತಿ, ರಘು ಮತ್ತಿತರರು ಇದ್ದರು.