ಕನ್ನಡಪ್ರಭ ವಾರ್ತೆ ವಿಜಯಪುರ

ಭವಿಷ್ಯದ ಭಾರತ ಹೇಗೆ ಇರಬೇಕೆಂಬ ಕಲ್ಪನೆ ಕೊಟ್ಟ ಮಹಾನ್ ನಾಯಕರು ಡಾ.ಬಿ.ಆರ್‌.ಅಂಬೇಡ್ಕರ್ ಅವರು ಒಂದು ಸಮುದಾಯದ ನಾಯಕರಲ್ಲ, ದೇಶದ ಹಿತದೃಷ್ಟಿಯಿಂದ ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಡಾ.ಅಂಬೇಡ್ಕರ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ ಮಹಾನ್ ನಾಯಕರಾದ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್ ಅವರು ಜಗತ್ತಿಗೆ ಮಾದರಿಯಾದ ಸಂವಿಧಾನದ ನೀಡಿದ್ದಾರೆ. ದೇಶಕ್ಕೆ ಅಂಬೇಡ್ಕರ್ ನೀಡಿರುವ ಕೊಡುಗೆ ಅಪಾರವಾದದ್ದು. ತಮ್ಮ ವಿಚಾರಗಳನ್ನು ಸ್ಪಷ್ಟವಾಗಿ ಮತ್ತು ಯಾವುದೇ ಮುಲಾಜಿಲ್ಲದೆ ಮಾತನಾಡುತ್ತಿದ್ದ ಅಂಬೇಡ್ಕರ್ ರವರು ಜಗತ್ತಿನ ಎಲ್ಲ ಧರ್ಮಗಳ ಅಧ್ಯಯನ ಮಾಡಿದ್ದರು. ಅವರ ಕೊಡುಗೆಗಳನ್ನು ಸ್ಮರಿಸುವ ಹಾಗೂ ಅವರ ಉದ್ದೇಶಗಳನ್ನು ಈಡೇರಿಸುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ ಎಂದು ತಿಳಿಸಿದರು. ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿ ವತಿಯಿಂದ ಅಲ್ಪೋಹಾರ, ತಂಪು ಪಾನಿಯ ವ್ಯವಸ್ಥೆ ಮಾಡಲಾಗಿತ್ತು.

ಮಹಾನಗರ ಪಾಲಿಕೆ ಮೇಯರ್‌ ಎಂ.ಎಸ್.ಕರಡಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಕುಮಾರ ಗಡಗಿ, ವಿಠ್ಠಲ ಹೊಸಪೇಟೆ, ರಾಹುಲ ಜಾಧವ, ಮುಖಂಡರಾದ ಮಡಿವಾಳ ಯಾಳವಾರ, ಶಶಿಧರ ಅಥರ್ಗಾ, ವಿಠ್ಠಲ ನಡುವೀನಕೆರಿ, ಸಂತೋಷ ತಳಕೇರಿ, ಅಶೋಕ ಬೆಲ್ಲದ, ವಿಕ್ರಮ ಗಾಯಕವಾಡ, ಲಕ್ಷ್ಮಣ ಜಾಧವ, ರಾಜಶೇಖರ ಬಜಂತ್ರಿ, ಶರಣು ಕಾಖಂಡಕಿ, ದತ್ತಾ ಗೊಲಂಡೆ, ಪಾರೀಶ ಶಿರಹಟ್ಟಿ ಇದ್ದರು.