ಸಾರಾಂಶ
ಬೀರೂರಿನ ಅಂಬೇಡ್ಕರ್ ಪುತ್ತಳಿ ಬಳಿ 68ನೇ ಮಹಾ ಪರಿನಿರ್ವಾಣ ದಿನಾಚರಣೆ
ಕನ್ನಡಪ್ರಭ ವಾರ್ತೆ, ಬೀರೂರುಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರಂತರ ಅಧ್ಯಯನದಿಂದ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿ ಕೊಂಡರು. ಜ್ಞಾನ, ಶಿಕ್ಷಣದ ಅಸ್ತ್ರದಿಂದ ಶೋಷಿತ, ದಮನಿತ ವರ್ಗಗಳಿಗೆ ಅಂಬೇಡ್ಕರ್ ಧ್ವನಿಯಾಗಿದ್ದಾರೆ ಎಂದು ಬೀರೂರು ಪೊಲೀಸ್ ಠಾಣೆ ಪಿಸೈ ಸಜಿತ್ ಕುಮಾರ್ ಹೇಳಿದರು.ಮಾದಿಗ ಸಮುದಾಯ, ಪಟ್ಟಣದ ಪ್ರಮುಖ ಸಂಘಟನೆಗಳು ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ 68ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಬಾಬಾ ಸಾಹೇಬರ ಮೂಲಮಂತ್ರವಾದ ಶಿಕ್ಷಣ, ಸಂಘಟನೆ, ಹೋರಾಟದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿರುವ ಶೋಷಿತರು, ತುಳಿತಕ್ಕೊಳಗಾದರಿಗೆ ನ್ಯಾಯ ಒದಗಿಸಬೇಕಾಗಿದೆ ಎಂದರು.ಮೇಣದಬತ್ತಿ ಬೆಳಗಿ ಶಾಂತಿ ಕೋರಿದ ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ಸಂವಿಧಾನದ ಮೂಲಕ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ವಿಶ್ವಮಾನವ ಅಂಬೇಡ್ಕರ್. ಅವಕಾಶ ವಂಚಿತ ಸಮಾಜಕ್ಕೆ ಸಂವಿಧಾನದ ಮೂಲಕ ನ್ಯಾಯ ಒದಗಿಸುವ ಮೂಲಕ ಅಂಬೇಡ್ಕರ್ ವಿಶ್ವಮಾನವರಾದರು. ಅಕ್ಷರದ ಮಹತ್ವ, ಸಂಘಟನೆ ಕುರಿತು ಸ್ಪಷ್ಟತೆ ಹೊಂದಿದ್ದ ಅವರು ಅಪಾರ ಪಾಂಡಿತ್ಯಗಳಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕಿದೆ ಎಂರು. ಅಂಬೇಡ್ಕರ್ ರಚಿಸಿದ ಸಂವಿಧಾನ ಸರ್ವರಿಗೂ ಪ್ರಾತಿನಿಧ್ಯ ನೀಡುವ ನ್ಯಾಯದಾನದ ಗ್ರಂಥ. ಅದರ ಪಾಲನೆ ನಮ್ಮೆಲ್ಲರ ಕರ್ತವ್ಯ. ಅಂಬೇಡ್ಕರ್ ಜೀವನ, ಆದರ್ಶ ಹಾಗೂ ಸಂದೇಶ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದರು.ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಶ್ರದ್ಧೆ, ಪರಿಶ್ರಮದಿಂದ ರಚಿಸಿದ ಸಂವಿಧಾನವನ್ನು ಗೌರವಿಸಿ, ಅದರ ಆಶಯಗಳನ್ನು ಎತ್ತಿಹಿಡಿಯಬೇಕು. ಮಹಾ ಮಾನವತವಾದಿ ಜನಿಸಿದ ನಾಡಿನಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಇದೆ. ಈ ಕೆಟ್ಟ ಆಚರಣೆ ಸಮಾಜದಿಂದ ದೂರವಾದಾಗ ಮಾತ್ರ ಅಂಬೇಡ್ಕರ್ ಆತ್ಮಕ್ಕೆ ಶಾಂತಿ ದೊರೆಯಲಿದೆ.ನಂಜುಂಡೇಶ್ವರ ಶಾಮಿಯಾನ ಮಾಲೀಕ ಮಧುಬಾವಿನೆ ಮಾತನಾಡಿ, ಭಾರತೀಯ ಸಮಾಜದಲ್ಲಿ ಸ್ವಾತಂತ್ರ‍್ಯ, ಸಮಾನತೆ, ಶಿಕ್ಷಣ ಮತ್ತು ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದ ಅಪ್ರತಿಮ ಹೋರಾಟಗಾರ ಹಾಗೂ ಪ್ರಖರ ಪಾಂಡಿತ್ಯ ಹೊಂದಿದ್ದ ಶ್ರೇಷ್ಠ ಸಾಮಾಜಿಕ ವಿಜ್ಞಾನಿ ಬಿ.ಆರ್ .ಅಂಬೇಡ್ಕರ್. ಅವರ ತತ್ವ ಚಿಂತನೆಗಳ ಬೆಳಕಿನಲ್ಲಿ ದೇಶ ಸಮರ್ಥವಾಗಿ ಮುಂದುವರಿಯುತ್ತಿದೆ. ಅಪಾರ ಜ್ಞಾನ, ಪಾಂಡಿತ್ಯ ಹೊಂದಿದ್ದ ಅವರು ಜಗತ್ತಿನ ಅಪ್ರತಿಮ ಜ್ಞಾನಿ ಮತ್ತು ಹೋರಾಟಗಾರರ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರು.
ದಲಿತ ಸಂಘಟನೆ ಮುಖಂಡ ಜಯಣ್ಣ, ಬಿ.ಜಿ.ಮೈಲಾರಪ್ಪ, ಎನ್.ಗಿರೀಶ್, ವಿನೋದ್, ಲಿಂಗಪ್ರಸಾಧ್, ಆರ್.ಎಂ.ಎಸ್. ನೌಕರ ಆನಂದ್, ನಾಗರಾಜ್, ಪುರಸಭೆ ಕಂದಾಯ ಅಧಿಕಾರಿ ಶಿಲ್ಪ, ಸ್ತ್ರಿಶಕ್ತಿ ಸಂಘದ ಲಕ್ಷ್ಮಿದೇವಿ, ಕಸಾಪ ಹೋಬಳಿ ಅಧ್ಯಕ್ಷ ಹರಿಪ್ರಸಾದ್, ದನುಷ್ ಕೋಟಿ ಸೇರಿದಂತೆ ನೂರಾರು ಸರಸ್ವತಿಪುರಂ ಬಡಾವಣೆ ಮಹಿಳೆಯರು, ನಾಗರಿಕರು ಇದ್ದರು.7 ಬೀರೂರು 1ಬೀರೂರು ಪಟ್ಟಣದ ಮಾದಿಗ ಸಮುದಾಯ ಹಾಗೂ ಪಟ್ಟಣದ ಪ್ರಮುಖ ಸಂಘಟನೆಗಳು ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಮಹಿಳೆಯರು ಮೆಣದಬತ್ತಿ ಹಚ್ಚಿ ಅಂಬೇಡ್ಕರ್ ರವರಿಗೆ ಶಾಂತಿ ಕೋರಿದರು.