ಸಾರಾಂಶ
ಬೆಂಗಳೂರು : ದಲಿತರು, ಶೋಷಿತರು, ಅಲ್ಪಸಂಖ್ಯಾತರು ನ್ಯಾಯ, ಸ್ವಾಭಿಮಾನ, ಗೌರವಕ್ಕಾಗಿ ಹೋರಾಡುವಂತೆ ಸ್ಪೂರ್ತಿ ತುಂಬಿದ ನಿಜವಾದ ನಾಯಕ ಡಾ। ಬಿ.ಆರ್. ಅಂಬೇಡ್ಕರ್ ಎಂದು ಹೈಕೋರ್ಟ್ ವಿಶ್ರಾಂತ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.
ಸೋಮವಾರ ನಗರದ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ(ಸಿಪಿಆರ್‌ಐ) ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ। ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಡಾ। ಬಿ.ಆರ್.ಅಂಬೇಡ್ಕರ್ ಅವರು ಸ್ವಾತಂತ್ರ್ಯ ಭಾರತದ ಮೊದಲ ಕಾನೂನು ಸಚಿವರಾಗಿದ್ದಾಗ ಮಾಡಿದ ಸುಧಾರಣಾ ಕಾರ್ಯಗಳು ಇಂದಿಗೂ ಪ್ರಸ್ತುತ. ಅವರು ಕಾರ್ಮಿಕ ವರ್ಗಕ್ಕೆ ನೀಡಿದ ಬಹುದೊಡ್ಡ ಕೊಡುಗೆ. ಭಾರತ ಕೃಷಿ, ಕೈಗಾರಿಕೆ, ಸಾರಿಗೆ ವಲಯ, ವಿದೇಶಿ ವಿನಿಮಯ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವುದಕ್ಕೆ ಅಂಬೇಡ್ಕರ್ ನೀಡಿದ ಸಂವಿಧಾನ ಮೂಲ ಕಾರಣ ಎಂದರು.
ಶೋಷಿತರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಮಹಿಳೆಯರಿಗೆ ಸಿಗುತ್ತಿರುವ ಗೌರವದ ಸ್ಥಾನಮಾನಗಳು ಸಂವಿಧಾನದ ಮೂಲ ಆಶಯದಲ್ಲಿದೆ.ದೇಶದಲ್ಲಿನ ಎಲ್ಲ ಧರ್ಮಗಳಿಗೂ ಅದರದ್ದೇ ಆದ ಧರ್ಮ ಗ್ರಂಥಗಳೂ ಇವೆ. ಆದರೆ, ಅಂತಿಮವಾಗಿ ಭಾರತೀಯರು ಎನಿಸಿಕೊಳ್ಳುವ ನಮಗೆ ‘ಸಂವಿಧಾನ’ವೇ ಶ್ರೇಷ್ಠ ಗ್ರಂಥ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಮಕ್ಕಳ ಶೈಕ್ಷಣಿಕ ನೆರವಿಗಾಗಿ ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಬಹುಮಾನ ನೀಡಲಾಯಿತು.
ಸಿಪಿಆರ್‌ಐ ನಿರ್ದೇಶಕ ಬಿ.ಎ. ಸಾವಲೆ, ಅಪರ ನಿರ್ದೇಶಕ ಗುಜ್ಜಲ ಬಿ. ಬಾಲರಾಜು ಉಪಸ್ಥಿತರಿದ್ದರು.