ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಸಮಾನತೆಯ ಕತ್ತಲಲ್ಲಿದ್ದ ಭಾರತದ ಜನತೆಗೆ ಸಮಾನತೆಯ ಆಶಯಗಳಡಿ ಸಂವಿಧಾನ ನೀಡಿದ ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾರತಕ್ಕೆ ಬೆಳಕು ನೀಡಿದ ಸೂರ್ಯ. ಅವರ ಸಂವಿಧಾನದ ಬೆಳಕಿನ ಹಾದಿಯಲ್ಲಿಯೇ ಸರ್ವರನ್ನೊಳಗೊಂಡು ದೇಶ ಮುಂದುವರೆಯುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಅಭಿಪ್ರಾಯಪಟ್ಟರು.ಮಹಾರಾಷ್ಟ್ರದ ನಾಗಪುರದ ಬಳಿಯ ಅಮರಾವತಿ ಜಿಲ್ಲೆಯ ನಯಾ ಅಂಕೋಲದಲ್ಲಿ ಶುಕ್ರವಾರ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ 68ನೇ ಪುಣ್ಯಸ್ಮರಣೆ ಪ್ರಯುಕ್ತ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಸಾವಿರಾರು ವರ್ಷಗಳಿಂದ ಅವಕಾಶ ವಂಚಿತವಾಗಿದ್ದ ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅವಕಾಶಗಳ ಬಾಗಿಲುಗಳನ್ನು ತೆರೆದರು. ಅವರ ತತ್ವ ಚಿಂತನೆಗಳ ಹಾದಿಯಲ್ಲಿ ವಿದ್ಯಾರ್ಥಿ ಯುವಜನರು ನಡೆದು ದೇಶದ ಹಲವು ಸಮಸ್ಯೆಗಳಿಗೆ ಸಂವಿಧಾನದ ಚೌಕಟ್ಟಿನಲ್ಲೇ ಪರಿಹಾರ ಕಂಡು ಹಿಡಿಯಬೇಕು. ಅಂಬೇಡ್ಕರ್ ಅವರು ಹಾಕಿಕೊಟ್ಟ ಕಾನೂನಿನ ಚೌಕಟ್ಟಿನಲ್ಲೇ ನಡೆಯುವ ಜೊತೆಗೆ ಸಂವಿಧಾನ, ಕಾನೂನಿಗೆ ಆದ್ಯತೆ ನೀಡಿ ಗೌರವಿಸಬೇಕು ಎಂದು ಸಲಹೆ ಮಾಡಿದರು.
ಅಂಬೇಡ್ಕರ್ ಅವರು ಹತ್ತು ಹಲವು ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಆಳವಾದ ಪಾಂಡಿತ್ಯವನ್ನೂ ಪಡೆದಿದ್ದರು. ವಿದೇಶಗಳಿಗೂ ಹೋಗಿ ಜ್ಞಾನ ಸಂಪಾದನೆ ಮಾಡಿಕೊಂಡು ಅದನ್ನು ಭಾರತದ ಅಭಿವೃದ್ಧಿ ಮತ್ತು ದಲಿತರು, ಹಿಂದುಳಿದವರು ಮತ್ತು ಮಹಿಳೆಯರ ಸ್ವಾತಂತ್ರ, ಅವಕಾಶಗಳನ್ನು ನೀಡಲು ಬಳಸಿದರು. ಅವರು ಸಮಾಜಶಾಸ್ತ್ರ, ಕಾನೂನು, ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಸೇರಿದಂತೆ ಅನೇಕ ವಿಷಯಗಳನ್ನು ಅಧ್ಯಯನ ಮಾಡಿದ್ದರು. ಅವರು ಮುಟ್ಟದ ವಿಷಯವೇ ಇಲ್ಲ. ಆ ಮಟ್ಟಿಗೆ ಅವರು ಅಧ್ಯಯನಶೀಲರಾಗಿದ್ದರು.ಇಡೀ ತಮ್ಮ ಬದುಕಿನಾದ್ಯಂತ ಶೋಷಿತ ಸಮುದಾಯಗಳ ಬಿಡುಗಡೆ ಮತ್ತು ಉದ್ಧಾರಗಕ್ಕಾಗಿ ಹೋರಾಡಿ ಹಗಲಿರುಳು ಶ್ರಮಿಸಿದರು. ಅಂಬೇಡ್ಕರ್ ಅವರ ಶಿಸ್ತು, ಕ್ರಿಯಾಶೀಲತೆ, ಅಧ್ಯಯನಶೀಲತೆ, ಬದ್ಧತೆ, ಪ್ರಾಮಾಣಿಕತೆ ಮತ್ತು ವಿದ್ಯಾರ್ಹತೆಯನ್ನು ಮೀರಿದವರು ಮತ್ತೊಬ್ಬರಿಲ್ಲ. ಅವರು ಭಾರತಕ್ಕೆ ಬೆಳಕು ನೀಡಿದ ನಿಜವಾದ ಸೂರ್ಯ. ಅಂಬೇಡ್ಕರ್ ವಿಚಾರಧಾರೆಯನ್ನು ವಿದ್ಯಾರ್ಥಿ ಯುವಜನರು ಆಳವಾಗಿ ಅಧ್ಯಯನ ಮಾಡಿ ಅವರ ತ್ಯಾಗಮಯ ಬದುಕು, ಹೋರಾಟದಿಂದ ಸ್ಪೂರ್ತಿ ಪಡೆಯಬೇಕು. ಆ ಮೂಲಕ ದೇಶದ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಿ ಸದೃಢ ಭಾರತವನ್ನು ಕಟ್ಟಲು ಮುಂದಾಗಬೇಕು. ಅಂಬೇಡ್ಕರ್ ಇಡೀ ದೇಶದ ನಾಯಕ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅವರು ತಮ್ಮ ಬೌದ್ಧಿಕತೆ ಮೂಲಕ ಖ್ಯಾತರಾಗಿದ್ದಾರೆ. ಅವರು ದೇಶಕ್ಕೆ ಮತ್ತು ತಳಸಮುದಾಯಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಅವರು ನೀಡಿದ ಸಂವಿಧಾನ ಮತ್ತು ಅವರ ಜೀವನ ಪ್ರೇರಣೆಯಿಂದಲೇ ತಾನು ಶಾಸಕನಾಗಲು ಸಾಧ್ಯವಾಯಿತು. ಪ್ರತಿಯೊಬ್ಬರು ಸಾಧನೆ ಮಾಡಲು ಅಂಬೇಡ್ಕರ್ ಅವರನ್ನು ಮಾದರಿಯನ್ನಾಗಿ ಸ್ವೀಕರಿಸಬೇಕು ಎಂದರು.
ಅಂಬೇಡ್ಕರ್ ಅವರು ತಮ್ಮ ಬದುಕಿನುದ್ದಕ್ಕೂ ನಿರಂತರ ಹೋರಾಟ ಮಾಡುತ್ತಲೇ ಬಂದರು. ಅಧಿಕಾರ, ಪದವಿಗಳ ಹಿಂದೆ ಬೀಳದೆ ನಿಜವಾದ ಅರ್ಥದಲ್ಲಿ ದೇಶದ ಜನರ ಬದುಕಿನಲ್ಲಿ ಹೊಸ ಭಾಷ್ಯ ಬರೆದರು. ಅಂಬೇಡ್ಕರ್ ಮಾನವೀಯತೆಯ ಸಾಕಾರ ಮೂರ್ತಿ. ತಾಯಿ ಹೃದಯದ ಮೇರು ವ್ಯಕ್ತಿತ್ವದ ಮಾನವ ಹಕ್ಕುಗಳ ಹೋರಾಟಗಾರ ಎಂದು ತಿಳಿಸಿದರು.ಅವರ ಆಶಯಗಳನ್ನು ಸಂವಿಧಾನದ ಮೂಲಕವೇ ಈಡೇರಿಸಬೇಕು. ಜಾತೀಯತೆಯನ್ನು ಮನಸ್ಸುಗಳಿಂದ ದೂರ ಮಾಡಿ ಸಮ ಸಮಾಜವನ್ನು ಹಾಗೂ ದೂರದೃಷ್ಟಿಯ ಭಾರತವನ್ನುಕಟ್ಟಬೇಕು. ಇದರಲ್ಲಿ ಯುವಪೀಳಿಗೆ ಹೆಚ್ಚಿನ ಪಾತ್ರ ವಹಿಸಬೇಕು. ಅಂಬೇಡ್ಕರ್ ಜಯಂತಿ ಮತ್ತು ಪುಣ್ಯಸ್ಮರಣೆಯಂತ ಕಾರ್ಯಕ್ರಮಗಳಿಗೆ ಮತ್ತು ಆರಾಧನೆಗೆ ಸೀಮಿತವಾಗಬಾರದು. ಅವರು ನಾಲಿಗೆ ಮೇಲೆ ನಲಿದಾಡುವ ಹೆಸರಾಗಬಾರದು. ಬದಲಿಗೆ ತತ್ವಚಿಂತನೆಗಳ ಮೂಲಕ ಪ್ರತಿಯೊಬ್ಬರ ಹೃದಯಕ್ಕೆ ಇಳಿಯಬೇಕು ಎಂದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಅಮರಾವತಿ ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅವರ ಅಸ್ತಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ನಂತರ, ನಯಾ ಅಂಕೋಲಗೆ 15 ಕಿಲೋ ಮೀಟರ್‌ಗಳ ಬೃಹತ್ ಬೈಕ್ ರ್ಯಾಲಿಗೆ ಸ್ವತಃ ಬೈಕ್ ಚಾಲನೆ ಮಾಡುವ ಮೂಲಕ ಉಧ್ಘಾಟಿಸಿದರು. ಈ ನಡುವೆ ಪ್ರದೀಪ್ ಈಶ್ವರ್ ಜೊತೆ ಸೆಲ್ಫಿಗಾಗಿ ಜನ ಮುಗಿಬಿದ್ದರು.ಈ ವೇಳೆ ಸಂಸದ ಬಲವಂತರಾಂ ವಾಂಕಡೆ, ಮಾಜಿ ಸಚಿವೆ ಯಶೋಮತಿ ಠಾಕೂರು ಮತ್ತಿತರರು ಇದ್ದರು.
ಸಿಕೆಬಿ-1 ಡಾ.ಬಿ.ಆರ್.ಅಂಬೇಡ್ಕರ್ 68ನೇ ಪುಣ್ಯಸ್ಮರಣೆ ಪ್ರಯುಕ್ತ ಮಹಾರಾಷ್ಟ್ರದ ಅಮರಾವತಿ ಯಿಂದ ನಯಾ ಅಂಕೋಲಗೆ ಏರ್ಪಡಿಸಿದ್ದ ಬೃಹತ್ ಬೈಕ್ ರ್ಯಾಲಿಯಲ್ಲಿ ಸ್ವತಃ ಬೈಕ್ ಚಾಲನೆ ಮಾಡುತ್ತಿರುವ ಶಾಸಕ ಪ್ರದೀಪ್ ಈಶ್ವರ್ಸಿಕೆಬಿ-2 ಡಾ.ಬಿ.ಆರ್.ಅಂಬೇಡ್ಕರ್ 68 ನೇ ಪುಣ್ಯಸ್ಮರಣೆ ಪ್ರಯುಕ್ತ ಮಹಾರಾಷ್ಟ್ರದ ನಯಾ ಅಂಕೋಲದಲ್ಲಿ ಶಾಸಕ ಪ್ರದೀಪ್ ಈಶ್ವರ್ ಜೊತೆ ಸೆಲ್ಫಿಗಾಗಿ ಜನ ಮುಗಿಬಿದ್ದರು.