ದೇಶವಾಸಿಗಳು ಸಮಾನ ಹಕ್ಕುಗಳನ್ನು ಪಡೆದು ಮೇಲು-ಕೀಳನ್ನದೆ ಸಮಭಾವದಿಂದ ಶಿಕ್ಷಣ ಪಡೆದು ಸಮಾನತೆಯಿಂದ ಬದುಕುವ ಶಾಸನಬದ್ಧ ಅಧಿಕಾರವನ್ನು ಸಂವಿಧಾನದ ಮೂಲಕ ಕೊಟ್ಟವರು ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸೊರಬ
ದೇಶವಾಸಿಗಳು ಸಮಾನ ಹಕ್ಕುಗಳನ್ನು ಪಡೆದು ಮೇಲು-ಕೀಳನ್ನದೆ ಸಮಭಾವದಿಂದ ಶಿಕ್ಷಣ ಪಡೆದು ಸಮಾನತೆಯಿಂದ ಬದುಕುವ ಶಾಸನಬದ್ಧ ಅಧಿಕಾರವನ್ನು ಸಂವಿಧಾನದ ಮೂಲಕ ಕೊಟ್ಟವರು ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ ಅಭಿಪ್ರಾಯಪಟ್ಟರು.ಪಟ್ಟಣದ ಡಾ.ರಾಜ್ ರಂಗಮಂದಿರದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಬಾಬೂ ಜಗಜೀವನರಾಂ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋರಾಟಗಳ ಮೂಲಕ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ ಮಹಾನ್ ಚೇತನ ಅಂಬೇಡ್ಕರ್ ಆಗಿದ್ದಾರೆ. ಸಂವಿಧಾನ ರಚಿಸುವ ಮೂಲಕ ಸಮತಾ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಕೊಡುಗೆ ಅನನ್ಯ. ದಲಿತರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ ಪ್ರಾಬಲ್ಯತೆ ಹೊಂದಲು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಇಡೀ ವಿಶ್ವವೇ ಗೌರವಿಸಲ್ಪಡುವ ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ ಎಂದರು.ಭಾರಂಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜ್ ಮಾತನಾಡಿ, ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ಬೆಳಕಿನ ನಿರೀಕ್ಷೆಯಲ್ಲಿದ್ದ ತಳ ಸಮುದಾಯಕ್ಕೆ ನಕ್ಷತ್ರವಾಗಿ ಪ್ರಜ್ವಲಿಸಿ ದಾರಿ ದೀಪವಾಗಿದ್ದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಮಹಾನ್ ಮಾನವಾತವಾದಿ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕ ಎಂ.ಮಾರುತಿ ಮಾಜಿ ಉಪಪ್ರಧಾನಿ ಬಾಬೂ ಜಗಜೀವನರಾಂ ಬಗ್ಗೆ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಆಡಳಿತದುದ್ದಕ್ಕೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದವರು ಬಾಬು ಜಗಜೀವನ್ ರಾಮ್ ಆಗಿದ್ದಾರೆ. ಸುಮಾರು ೫೦ ವರ್ಷಗಳ ರಾಜಕೀಯ ಜೀವನದಲ್ಲಿ ದೇಶದ ಅಭಿವೃದ್ಧಿಗೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಮುನ್ನುಡಿ ಬರೆದಿದ್ದರು ಎಂದರು.ತಹಸೀಲ್ದಾರ್ ಪುರಂದರ ಸಂವಿಧಾನ ಪ್ರಸ್ತಾವನೆ ಬಗ್ಗೆ ಪ್ರಮಾಣ ವಚನ ಬೋಧಿಸಿದರು. ಸಮಾಜ ಕಲ್ಯಾಣಾಧಿಕಾರಿ ಇಕ್ಬಾಲ್ ಜಾತಿಗೇರ್ ಸ್ವಾಗತಿಸಿ, ಶೀಲಾ ಶಶಿಕಾಂತ್ ನಿರೂಪಿಸಿದರು. ಇದಕ್ಕೂ ಮುನ್ನ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬೂ ಜಗಜೀವನ ರಾಂ ಅವರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪಟ್ಟಣದ ರಂಗನಾಥ ದೇವಸ್ಥಾನದಿಂದ ಮುಖ್ಯ ಬೀದಿಯಲ್ಲಿ ವಿವಿಧ ಜನಪದ ಕಲಾತಂಡಗಳೊಂದಿಗೆ ರಂಗ ಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು.
ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬಿಇಒ ಪುಷ್ಪಾ, ಪುರಸಭೆ ಮುಖ್ಯಾಧಿಕಾರಿ ಚಂದನ್ ಕುಮಾರ್, ಶಿವಪ್ಪ, ಗುರುರಾಜ್, ಪುರುಷೋತ್ತಮ, ದಿನೇಶ್ ಹಣಜಿ, ಮಹೇಶ್ ಶಕುನವಳ್ಳಿ, ನಾಗರಾಜ್, ಸಂಜೀವ್ ನೇರಲಗಿ, ಕೆರಿಯಪ್ಪ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.