ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಹತೇಕರು ಡಾ.ಬಿ.ಆರ್.ಅಂಬೇಡ್ಕರ್ ದಲಿತರಿಗಾಗಿ ಮಾತ್ರ ಹೋರಾಟ ಮಾಡಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಅವರು ದೇಶದ ಎಲ್ಲಾ ಜಾತಿ, ಜನಾಂಗದವರ ಸರ್ವಾಂಗೀಣ ಪ್ರಗತಿಗೆ ಹಗಲಿರುಳು ಶ್ರಮಿಸಿದ್ದರು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಲಹೆಗಾರ ಡಾ.ಎಸ್. ತುಕಾರಾಂ ಬಣ್ಣಿಸಿದರು.ಹೊಸಮಠದ ನಟರಾಜ ಸಭಾ ಭವನದಲ್ಲಿ ಶ್ರೀ ನಟರಾಜ ಪ್ರತಿಷ್ಠಾನ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಮಹಿಳೆಯರಿಗಾಗಿ ಸಮಾನ ಅವಕಾಶ ಮತ್ತು ಹಕ್ಕನ್ನು ದೊರಕಿಸಿ ಕೊಡಲು ತಾವು ರೂಪಿಸಿದ ಮಸೂದೆ ಜಾರಿಗೆ ತರಲು ಅಂದಿನ ಸರ್ಕಾರ ನಿರಾಕರಿಸಿದ್ದರಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಭಾರತದ ಏಕೈಕ ಮಹಿಳಾವಾದಿ ಚಿಂತಕ ಡಾ.ಬಿ.ಆರ್.ಅಂಬೇಡ್ಕರ್ ಎಂದರು.ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು, ಪತ್ನಿಯ ನಿಧನದ ನಂತರ ಆಸ್ತಿ ಹಕ್ಕು, ಗಂಡನಿಂದ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾದರೆ ವಿಚ್ಚೇಧನಕ್ಕೆ ಕಾನೂನಾತ್ಮಕ ಅವಕಾಶ, ದುಡಿಯುವ ಸ್ಥಳಗಳಲ್ಲಿ ಭದ್ರತೆ, ಹೆರಿಗೆ ಸಮಯದಲ್ಲಿ ವೇತನ ಸಹಿತ ರಜೆ ಸೇರಿದಂತೆ ಎಲ್ಲಾ ರೀತಿಯ ಅವಕಾಶಗಳೂ ಇರಬೇಕು ಎಂದು ಅವರು ಪ್ರತಿಪಾದಿಸಿದರು.
ಅಂಬೇಡ್ಕರ್ ಅವರ ವ್ಯಕ್ತಿತ್ವ, ಹೃದಯ, ಮಾತು ಮತ್ತು ಬರಹದಲ್ಲಿ ಪ್ರಾಮಾಣಿಕತೆ ಇತ್ತು. ಅವರ ಮಾತುಗಳು ಸಂಪೂರ್ಣ ಮಾನವ ಪರವಾಗಿದ್ದವು. ಜಾತೀಯತೆಯಿಂದ ನೊಂದ ಸಮುದಾಯಗಳಿಗೆ ಧ್ವನಿಯಾಗಿ ನಿಂತರು. ಹೀಗಾಗಿ ಅಂಬೇಡ್ಕರ್ ೧೩೪ ವರ್ಷ ಕಳೆದರೂ ಪ್ರಸ್ತುತವಾಗುತ್ತಾರೆ ಎಂದು ಹೇಳಿದರು.ಅಂಬೇಡ್ಕರ್ ಅವರ ವಿದ್ವತ್ತು, ಕ್ರಿಯಾಶೀಲತೆ, ಸಮಾಜಕ್ಕೆ ಅವರು ಕೊಟ್ಟ ಕಾಣಿಕೆ, ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ರೂಪಿಸಲು ಅವರು ನಿರ್ವಹಿಸಿದ ಪ್ರಾಮಾಣಿಕ ಶ್ರಮವನ್ನು ಅರ್ಥ ಮಾಡಿಕೊಳ್ಳುವಲ್ಲಿ ದೇಶದ ವಿದ್ಯಾವಂತ ಸಮುದಾಯದ ಹಿಂದೆ ಬಿದ್ದಿದೆ ಎಂದು ಅವರು ವಿಷಾದಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ತೋರಿಕೆಯ ಸಮಾನತೆ ಇದೆ. ಆದರೆ, ಅಂತರಂಗದಲ್ಲಿ ಅಸಮಾನತೆ ತುಂಬಿ ತುಳುಕುತ್ತಿದೆ. ಮಾತುಗಳಲ್ಲಿ ರಂಜನೆ ಕಾಣುತ್ತಿದೆ. ಆದರೆ, ನೈತಿಕತೆ ನಾಶವಾಗಿದೆ. ನೈತಿಕತೆ ನಾಶವಾದ ಜಾಗದಲ್ಲಿ ಅಂಬೇಡ್ಕರ್ ಇರುವುದಿಲ್ಲ. ನೈತಿಕತೆ ದೃಢವಾಗಿದ್ದಲ್ಲಿ ಮಾತ್ರ ಅಂತರಂಗ ಶುದ್ಧಿ, ಸವಾನತೆಯ ಭಾವ ಇರುತ್ತದೆ ಎಂದರು.ಮಕ್ಕಳ ಭವಿಷ್ಯದ ಬದುಕನ್ನು ರೂಪಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕ ವೃತ್ತಿಯಲ್ಲಿರುವವರು ಅಂಬೇಡ್ಕರ್ ಅವರು ಬರೆದ ಗ್ರಂಥಗಳನ್ನು ಓದಿಕೊಳ್ಳಬೇಕು ಎಂದರು.
ಅಂಬೇಡ್ಕರ್ ನಾನು ಮೊದಲೂ ಭಾರತೀಯ, ಕೊನೆಗೂ ಭಾರತೀಯ ಎಂದು ಪ್ರತಿಪಾದಿಸಿದ್ದರು. ಆದ್ದರಿಂದ ಅವರು ಅತ್ಯಂತ ದೊಡ್ಡ ರಾಷ್ಟ್ರಪ್ರೇಮಿಗಳಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರು.ಮಂಡ್ಯ ವಿಶ್ವವಿದ್ಯಾನಿಲಯದ ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಟಿ. ವೆಂಕಟೇಶಮೂರ್ತಿ ಮಾತನಾಡಿ, ಸಂವಿಧಾನದ ಪೀಠಿಕೆಯನ್ನು ಸುಮ್ಮನೆ ಪ್ರಮಾಣ ಮಾಡುವುದರಲ್ಲಿ ಪ್ರಯೋಜನವಿಲ್ಲ. ಅಲ್ಲಿನ ಆಶಯಗಳನ್ನು ಅರ್ಥಮಾಡಿಕೊಂಡು ಪಾಲಿಸಬೇಕು. ಎಲ್ಲರೂ ಸಂವಿಧಾನದ ರಕ್ಷಣೆಗೆ ಮುಂದಾಗಬೇಕು ಎಂದರು.
ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ, ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಶೈಕ್ಷಣಿಕ ಸಂಯೋಜಕ ಪ್ರೊ.ಎಂ.ಆರ್. ಜಯಪ್ರಕಾಶ್, ಪ್ರಾಂಶುಪಾಲ ಡಾ. ಮಹೇಶ್ ದಳಪತಿ, ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ದಂಡೀಕೆರೆ ನಾಗರಾಜು ಸೇರಿದಂತೆ ಕಾಲೇಜಿನ ಬೋಧಕ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.