ಪೇದೆಗಳ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು

| Published : Apr 17 2025, 12:02 AM IST

ಸಾರಾಂಶ

ವೀಲ್ಹಿಂಗ್ ಮಾಡಿದವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಬಂದ ಇಬ್ಬರು ಪೇದೆಗಳ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಗರದ ಯಾರಬ್ ನಗರ ಬಡಾವಣೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ವೀಲ್ಹಿಂಗ್ ಮಾಡಿದವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಬಂದ ಇಬ್ಬರು ಪೇದೆಗಳ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಗರದ ಯಾರಬ್ ನಗರ ಬಡಾವಣೆಯಲ್ಲಿ ನಡೆದಿದೆ.

ನಗರದ ಬೀಡಿ ಕಾಲೋನಿ ವಾಸಿ ಯುಸೂಫ್ ಖಾನ್, ಈತನ ಪುತ್ರ ಸೈಫ್ ಖಾನ್ ಸೇರಿದಂತೆ ಆರು ಮಂದಿ ದುಷ್ಕೃತ್ಯ ಎಸಗಿದವರು. ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆ ಪೇದೆ ಜಯಕುಮಾರ್ ನೀಡಿದ ದೂರಿನ ಮೇರೆಗೆ ಆರು ಮಂದಿ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ಚನ್ನಪಟ್ಟಣದ ಕೆಂಗಲ್ ಬಳಿ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಕೆಎ 42, ಇಎಚ್ - 3237 ಸುಜುಕಿ ಆಕ್ಸೆಸ್ ದ್ವಿಚಕ್ರ ವಾಹನ ಮತ್ತು ವಾಹನ ಸವಾರ

ಸೈಫ್ ಖಾನ್‌ಗೆ ನೋಟಿಸ್ ಜಾರಿ ಮಾಡಲು ಏಪ್ರಿಲ್ 15ರಂದು ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆ ಪೇದೆ ಜಯಕುಮಾರ್ ಮತ್ತು ಬಸವರಾಜ ಓಣಿಮನಿ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.

ಅದರಂತೆ ಇಬ್ಬರು ಪೇದೆಗಳು ಚನ್ನಪಟ್ಟಣ ಟೌನಿನ ಸರಹದ್ದಿನಲ್ಲಿ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ದ್ವಿಚಕ್ರ ವಾಹನ ಮತ್ತು ವಾಹನ ಸವಾರ ರಾಮನಗರ ಟೌನ್ ಹುಣಸನಹಳ್ಳಿ ರೋಡ್ ಬಳಿ ಇರುವುದಾಗಿ ಮಾಹಿತಿ ಬಂದಿದೆ. ಇದನ್ನು ಆಧರಿಸಿ ಇಬ್ಬರು ಪೇದೆ ಹುಣಸನಹಳ್ಳಿ ರಸ್ತೆಯಲ್ಲಿನ ಎಂಡಿಆರ್ ಕಲ್ಯಾಣ ಮಂಟಪ ಬಳಿ ತೆರಳಿದಾಗ ಬೀಡಿ ಕಾಲೋನಿ ವಾಸಿ ಸೈಫ್ ಖಾನ್ ಎಂಬಾತ ಸುಜುಕಿ ಆಕ್ಸೆಸ್ ವಾಹನವನ್ನು ಅಡ್ಡಾದಿಡ್ಡಿ ಓಡಿಸುತ್ತಿದ್ದನು.

ಆ ವಾಹನವನ್ನು ತಡೆದು ನಿಲ್ಲಿಸಿದ ಪೊಲೀಸರು, ಸೈಫ್ ಖಾನ್ ಗೆ ಸುಜುಕಿ ಆಕ್ಸೆಸ್ ದ್ವಿಚಕ್ರ ವಾಹನವನ್ನು ಬೆಂಗಳೂರು - ಮೈಸೂರು ಹೆದ್ದಾರಿ ಕೆಂಗಲ್ ಬಳಿ ಅತಿ ವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿ ಸಾರ್ವಜನಿಕರ ಪ್ರಾಣಕ್ಕೆ ಹಾನಿಯಾಗುವ ರೀತಿ ವೀಲ್ಹಿಂಗ್‌ ಮಾಡಿತ್ತೀರೆಂದು ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ನೀವು ವಿಚಾರಣೆಗೆ ಪೊಲೀಸ್ ಠಾಣೆಗೆ ಬರಬೇಕೆಂದು ನೋಟಿಸ್ ಜಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಆಗ ಸೈಫ್ ಖಾನ್ ಇಬ್ಬರು ಪೇದೆಗಳನ್ನು ಏಕವಚನದಲ್ಲಿ ನಿಂದಿಸಿ ಮಾತಿನ ಚಕಮಕಿ ನಡೆದಿದೆ. ಇದೇ ಸಮಯಕ್ಕೆ ಸೈಫ್ ಖಾನ್ ತಂದೆ ಯೂಸುಫ್ ಖಾನ್, ತಾಯಿ ಸೇರಿದಂತೆ ಐವರ ಗುಂಪು ಕಟ್ಟಿಕೊಂಡು ಬಂದು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದರಲ್ಲದೆ ಪೇದೆಗಳಾದ ಜಯಕುಮಾರ್ ಮತ್ತು ಬಸವರಾಜ ಓಣಿಮನಿ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ.

ಆ ಗುಂಪಿನಲ್ಲಿದ್ದ ಒಬ್ಬ ಸುಜುಕಿ ಆಕ್ಸೆಸ್ ವಾಹನವನ್ನು ತೆಗೆದುಕೊಂಡು ಪರಾರಿಯಾದರೆ, ಸೈಫ್ ಖಾನ್ ಮತ್ತು ಆತನ ತಂದೆ ಯೂಸುಫ್ ಖಾನ್ ಕರ್ತವ್ಯಕ್ಕೆ ಬಳಸಿದ್ದ ಕೆಎ - 42, ಇಜಿ 7307 ದ್ವಿಚಕ್ರ ವಾಹನ ಕಸಿದುಕೊಂಡು ಹೋಗಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಲ್ಲದೆ ಕರ್ತವ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ದರೋಡೆ ಮಾಡಿಕೊಂಡು ಹೋಗಿರುವ ಸೈಫ್ ಖಾನ್, ಯೂಸುಫ್ ಖಾನ್ ಸೇರಿದಂತೆ ಆರು ಮಂದಿ ವಿರುದ್ಧ ಪೇದೆ ಜಯಕುಮಾರ್ ದೂರು ದಾಖಲಿಸಿದ್ದಾರೆ.

ಘಟನೆ ಸಂಬಂಧ ರಾಮನಗರ ಪುರ ಠಾಣೆ ಪೊಲೀಸರು ಆರೋಪಿ ಯೂಸುಫ್ ಖಾನ್‌ನನ್ನು ಬಂಧಿಸಿದ್ದು, ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.