ಸಮಾಜ ಕೊಟ್ಟ ನೋವು, ಅವಮಾನಗಳನ್ನು ನುಂಗಿ, ಜಾತಿ ಪದ್ಧತಿಗೆ ದಿಟ್ಟತನದಿಂದ ಪ್ರತಿರೋಧ ಒಡ್ಡುತ್ತ, ನವ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು.

ಬಳ್ಳಾರಿ: ನಿತ್ಯದ ಬದುಕಿನಲ್ಲಿ ಕಾಣ ಸಿಗುವ ನಿರಂತರ ಒಡಕು, ಅಸಮಾನತೆ, ಮೂಢನಂಬಿಕೆಗಳನ್ನು ನಿಲ್ಲಿಸಿ ಸಮಾನತೆಯ ಸಮಾಜದ ಏಳಿಗೆಗೆ ಅವಿರತವಾಗಿ ಶ್ರಮಿಸಿದ ಡಾ. ಅಂಬೇಡ್ಕರ್ ಅವರು ಶೋಷಿತ ರಹಿತ ಸಮಾಜದ ಕನಸು ಕಂಡಿದ್ದರು ಎಂದು ನಿವೃತ್ತ ಉಪನ್ಯಾಸಕ ಎಚ್. ವೆಂಕಟೇಶಲು ಅಭಿಪ್ರಾಯಪಟ್ಟರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ (ಸ್ವಾಯತ್ತ ) ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾಜ ಕೊಟ್ಟ ನೋವು, ಅವಮಾನಗಳನ್ನು ನುಂಗಿ, ಜಾತಿ ಪದ್ಧತಿಗೆ ದಿಟ್ಟತನದಿಂದ ಪ್ರತಿರೋಧ ಒಡ್ಡುತ್ತ, ನವ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು. ಎಲ್ಲರ ಹಿತವನ್ನು ಕಾಪಾಡುವ, ಸ್ವಾತಂತ್ರ್ಯ, ಸಮಾನತೆಯನ್ನು ಎತ್ತಿ ಹಿಡಿಯುವ ಸಂವಿಧಾನವನ್ನು ರಚಿಸಿ ಭೂಪಟದಲ್ಲಿ ಒಂದು ದೇಶಕ್ಕೆ ಅಸ್ಮಿತೆಯನ್ನು ತಂದುಕೊಟ್ಟ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ವಿಶ್ಲೇಷಿಸಿದರು.

ನಿವೃತ್ತ ಪ್ರಾಧ್ಯಾಪಕ ಡಾ. ಸೋಮನಾಥ ಸಿ.ಎಚ್. ಮಾತನಾಡಿ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಾಗಿರದೇ ದೇಶದ ಶಕ್ತಿಯಾಗಿದ್ದರು. ಆಳವಾದ ವಿದ್ವತ್ತನ್ನು ಹೊಂದಿದ್ದ ಅವರಿಗೆ ಎಲ್ಲ ಧರ್ಮದವರನ್ನು ಒಂದುಗೂಡಿಸುವ ಶಕ್ತಿ ಇತ್ತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ, ಭಾರತದ ನೆಲದಲ್ಲಿ ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳು ಮೊಳಕೆಯೊಡೆಯಲು ಕಾರಣರಾದ ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೊಸ ಅರ್ಥ ತುಂಬಿದವರು. ಅವರ ವೈಚಾರಿಕ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು. ವೇದಿಕೆಯ ಮೇಲೆ ಪ್ರಾಧ್ಯಾಪಕ ಡಾ. ಇಸ್ಮಾಯಿಲ್ ಮಕಂದಾರ, ದಸ್ತಗೀರಸಾಬ್ ದಿನ್ನಿ, ಜ್ಯೋತಿ ಅಣ್ಣಾರಾವ್ ಇದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕ ಡಾ. ಹುಚ್ಚೂಸಾಬ್, ಗುರುಬಸಪ್ಪ, ಕಲ್ಯಾಣ ಬಸವ, ಘಂಟೆಪ್ಪ ಶೆಟ್ಟಿ, ಬಸವರಾಜ, ದೊಡ್ಡ ಬಸವರಾಜ, ರಾಮಸ್ವಾಮಿ, ಕನ್ಯಾಕುಮಾರಿ ಉಡಗಿ, ನಾಜಿಯಾ ಖಾಜಿ, ಶೋಭಾರಾಣಿ, ಶಿಲ್ಪಾ ಕುಲಕರ್ಣಿ, ಮಮತಾ, ಪ್ರವೀಣಕುಮಾರ್, ಬಸಪ್ಪ, ಉಪನ್ಯಾಸಕರಾದ ಹನುಮೇಶ್, ಹನುಮಂತರಾಯ, ಗುರುರಾಜ್, ಮಾರೆಪ್ಪ, ಶರಣಪ್ಪ, ಗಂಗಾಧರ, ರುದ್ರಮುನಿ ಉಪಸ್ಥಿತರಿದ್ದರು.