ಸಾರಾಂಶ
ಶಿರಸಿ: ಸಮಾಜದಲ್ಲಿರುವ ಮೂಢನಂಬಿಕೆ ಹಾಗೂ ಜಾತಿ ಪದ್ಧತಿ ನಿರ್ಮೂಲನೆಗೆ ಹೋರಾಡಿ, ನಾವೆಲ್ಲರೂ ಸಮಾನತೆಯಲ್ಲಿ ಬದುಕು ಸಾಗಿಸಬೇಕೆಂದು ಬೋಧಿಸಿದ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳು ನಮಗೆಲ್ಲರಿಗೂ ಮಾದರಿ ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ತಿಳಿಸಿದರು.ಮಂಗಳವಾರ ನಗರದ ಅಂಬೇಡ್ಕರ ಭವನದಲ್ಲಿ ತಾಲೂಕಾಡಳಿತ, ನಗರಸಭೆ, ತಾಲೂಕು ಪಂಚಾಯಿತಿ, ಗಂಗಾ ಅಂಬಿಗ ಸೇವಾ ಟ್ರಸ್ಟ್, ಪುಣ್ಯಕೋಟಿ ಮೀನುಗಾರರ ಸಹಕಾರಿ ಸಂಘ, ಮೀನುಗಾರರ ಸಮುದಾಯಕ್ಕೆ ಸೇರಿದ ೩೯ ಜಾತಿ ಪಂಗಡಗಳ ಆಶ್ರಯದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಂಬಿಗರ ಚೌಡಯ್ಯನವರು ೧೨ನೇ ಶತಮಾನದಲ್ಲಿ ವಚನಗಳನ್ನು ರಚಿಸಿ, ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು. ಅವರ ಜೀವನವನ್ನು ಅಧ್ಯಯನ ಮಾಡಿ ಸಮಾಜದಲ್ಲಿರುವ ಅಂಕುಡೊಂಕು ತಿದ್ದುವ ಕೆಲಸ ಮಾಡಬೇಕು ಎಂದರು.ಅಂಬಿಗರ ಚೌಡಯ್ಯನವರ ಜೀವನ ಕುರಿತು ನಿವೃತ್ತ ಪ್ರಾಂಶುಪಾಲ ಕೆ.ಎನ್. ಹೊಸ್ಮನಿ ಉಪನ್ಯಾಸ ನೀಡಿದರು. ಗಂಗಾ ಅಂಬಿಗ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಬದನಗೋಡ ಗ್ರಾಪಂ ಅಧ್ಯಕ್ಷ ನಟರಾಜ ಬಿ. ಹೊಸೂರು ಅಧ್ಯಕ್ಷತೆ ವಹಿಸಿದ್ದರು. ಗ್ರೇಡ್- ೨ ತಹಸೀಲ್ದಾರ್ ರಮೇಶ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಗಂಗಾ ಅಂಬಿಗ ಸೇವಾ ಟ್ರಸ್ಟ್ ಉಪಾಧ್ಯಕ್ಷ ಅರವಿಂದ ತೆಲಗುಂದ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಲ್ಮನೆ, ಸದಸ್ಯರಾದ ಮಹಾಂತೇಶ ಬಿಳಗಲಿ, ಶಿವಾನಂದ ಗಡದ, ರೇಣುಕಾ ಕನ್ನಿ, ಗೌರಿ ಅಂಬಿಗ, ದಿನೇಶ ಮಶಾಲ್ಡಿ ಮತ್ತಿತರರು ಇದ್ದರು. ಚಂದ್ರಶೇಖರ ಡಿ.ಎಂ. ಸ್ವಾಗತಿಸಿದರು. ವೀಣಾ ಪ್ರಾರ್ಥಿಸಿದರು.ಶರಣರ ತತ್ವ ಪಾಲಿಸಿ
ಮುಂಡಗೋಡ: ವಚನಗಳ ಮೂಲಕ ಜನರ ಮನ ಪರಿವರ್ತನೆ ಮಾಡಿದ ಕೀರ್ತಿ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ತಿಳಿಸಿದರು.ಮಂಗಳವಾರ ಇಲ್ಲಿಯ ಮಿನಿ ವಿಧಾನಸೌದ ಸಭಾಂಗಣದಲ್ಲಿ ಅಂಬಿಗರ ಚೌಡಯ್ಯನವರ ಹಾಗೂ ವೇಮನ ಅವರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.ಬಸವಣ್ಣರಂಥ ನೂರಾರು ಜನ ಶರಣರು ಜನಿಸಿದ ೧೨ನೇ ಶತಮಾನವು ದೇಶದ ಇತಿಹಾಸದಲ್ಲಿ ಮಹತ್ವಾಗಿದೆ. ಅಂಬಿಗರ ಚೌಡಯ್ಯ ಅವರ ಕಾರ್ಯಕ್ಷಮತೆಯನ್ನು ಮೆಚ್ಚಿದ ಬಸವಣ್ಣನವರು ಅವರಿಗೆ ಅನುಭವ ಮಂಟಪದಲ್ಲಿ ಸ್ಥಾನ ನೀಡಿದ್ದರು. ಶರಣರ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಇತಿಹಾಸದ ಪರಿಚಯ ಮಾಡಿಕೊಡಬೇಕಿದೆ ಎಂದರು.ತಹಸೀಲ್ದಾರ್ ಶಂಕರ ಗೌಡಿ ಅವರು ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದರು. ಫಕ್ಕೀರಪ್ಪ ವರ್ದಿ ಉಪನ್ಯಾಸ ನೀಡಿದರು. ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ಉಪತಹಸೀಲ್ದಾರ್ ಜಿ.ಬಿ. ಭಟ್, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಜಿಪಂ ಮಾಜಿ ಸದಸ್ಯ ಅಶೋಕ ಶಿರ್ಶಿಕರ, ಪ್ರಭಾರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ರಮೇಶ ಅಂಬಿಗೇರ, ಮಾಧ್ಯಮಿಕ ಶಾಲಾ ಮುಖ್ಯಾಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ. ಮುಡೆಣ್ಣವರ ಓಂಪ್ರಕಾಶ ಪೂಜಾರ, ನಾಗರಾಜ ಅಂಟಾಳ, ಪ್ರಕಾಶ ಅಂಟಾಳ, ಎಸ್.ಬಿ. ಹೂಗಾರ ಮುಂತಾದವರು ಉಪಸ್ಥಿತರಿದ್ದರು.