ವಚನ ಸಾಹಿತ್ಯಕ್ಕೆ ಅಂಬಿಗರ ಚೌಡಯ್ಯ ಕೊಡುಗೆ ಅಪಾರ

| Published : Jan 22 2024, 02:19 AM IST

ಸಾರಾಂಶ

ಅಂಬಿಗರ ಚೌಡಯ್ಯ ಕಾಯಕದ ಜೊತೆ ಸಾಮಾಜಿಕ ಬದಲಾವಣೆಯ ಹರಿಕಾರರಾಗಿ ಗುರುತಿಸಿಕೊಂಡಿದ್ದರು. 12ನೇ ಶತಮಾನದಲ್ಲಿ ವಚನಗಳ ಮೂಲಕ ನಡೆದ ಸಾಮಾಜಿಕ ಕ್ರಾಂತಿ ಅವಿಸ್ಮರಣೀಯವಾಗಿದೆ. ಆ ಕಾಲಘಟ್ಟದಲ್ಲಿ ವಚನ ಸಾಹಿತ್ಯಕ್ಕೆ ಅಂಬಿಗರ ಚೌಡಯ್ಯ ನೀಡಿದ ಕೊಡುಗೆ ಅನನ್ಯವಾದುದು ಎಂದು ತಹಸೀಲ್ದಾರ್ ಚಂದ್ರಶೇಖರ ನಾಯ್ಕ್ ಸಾಗರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ಅಂಬಿಗರ ಚೌಡಯ್ಯ ಕಾಯಕದ ಜೊತೆ ಸಾಮಾಜಿಕ ಬದಲಾವಣೆಯ ಹರಿಕಾರರಾಗಿ ಗುರುತಿಸಿಕೊಂಡಿದ್ದರು ಎಂದು ತಹಸೀಲ್ದಾರ್ ಚಂದ್ರಶೇಖರ ನಾಯ್ಕ್ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ವಚನಗಳ ಮೂಲಕ ನಡೆದ ಸಾಮಾಜಿಕ ಕ್ರಾಂತಿ ಅವಿಸ್ಮರಣೀಯವಾಗಿದೆ. ಆ ಕಾಲಘಟ್ಟದಲ್ಲಿ ವಚನ ಸಾಹಿತ್ಯಕ್ಕೆ ಅಂಬಿಗರ ಚೌಡಯ್ಯ ನೀಡಿದ ಕೊಡುಗೆ ಅನನ್ಯವಾದುದು ಎಂದರು. ಅಂಬಿಗರ ಚೌಡಯ್ಯನವರ ಎಲ್ಲ ವಚನಗಳಲ್ಲಿ ಸಮಾಜ ಬದಾವಣೆಯ ಸಂದೇಶ ಒಳಗೊಂಡಿದೆ. ನೇರ ಮತ್ತು ನಿಷ್ಠೂರದ ನಡೆ-ನುಡಿಯ ಅಂಬಿಗರ ಚೌಡಯ್ಯ ಅವರು ಜನಸಮುದಾಯಗಳ ನಡುವೆ ಸಮನ್ವಯತೆ ಸಾಧಿಸುವ ಕೆಲಸವನ್ನು ಮಾಡಿದ್ದರು. ಅವರ ವಚನಗಳನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಬಿ.ಡಿ.ರವಿಕುಮಾರ್‌ ಅವರು ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ ನೀಡಿ, 12ನೇ ಶತಮಾನ ಆಚರಣೆಗಳ ಭಾರಕ್ಕೆ ಬೆನ್ನು ಬಗ್ಗಿ ಹೋಗಿದ್ದ ಕಾಲಘಟ್ಟವಾಗಿತ್ತು. ಇಂತಹ ಸಂದರ್ಭ ಸನಾತನ ಸಂಸ್ಕೃತಿಯಲ್ಲಿ ಬೆಳೆದಿದ್ದ ವರ್ಣಕಳೆಯನ್ನು ಕಿತ್ತು ವಚನ ಸಂಸ್ಕೃತಿಯೆಂಬ ಚಿಂತನೆ ಬೆಳೆಸುವಲ್ಲಿ ಅಂಬಿಗರ ಚೌಡಯ್ಯ ತಮ್ಮದೇ ಹಂತದಲ್ಲಿ ಶ್ರಮಿಸಿದ್ದರು. ತಮ್ಮ ಸರಳವಾದ ಭಾಷೆ ಮೂಲಕ ಎಲ್ಲ ವರ್ಗಗಳನ್ನು ವಚನ ಸಾಹಿತ್ಯದ ಮೂಲಕ ತಲುಪಿಸುವ ಕೆಲಸ ಮಾಡಿದ್ದರು. ಸಮಾಜದ ಓರೆಕೋರೆಗಳನ್ನು ವಚನದ ಮೂಲಕ ನಿರ್ಭೀತಿಯಿಂದ ಹೇಳುವ ಕಲೆ ಚೌಡಯ್ಯ ಅವರಿಗೆ ಸಿದ್ಧಿಯಾಗಿತ್ತು ಎಂದು ಹೇಳಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷ್, ಉಪ ತಹಸೀಲ್ದಾರ್ ಕಲ್ಲಪ್ಪ ಮೆಣಸಿನಾಳ್, ಗಂಗಾಮತ ಸಮಾಜದ ಉಪಾಧ್ಯಕ್ಷ ಧರ್ಮರಾಜ್, ವಿ.ಟಿ.ಸ್ವಾಮಿ, ಜಿ.ಬಸವರಾಜ್, ಮೋಹನ್ ಇನ್ನಿತರರು ಹಾಜರಿದ್ದರು. - - -