ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿದ್ದುಕೊಂಡು ಸಮಾಜ ಸುಧಾರಣೆಯಲ್ಲಿ ತೊಡಗಿದ್ದ ಅಂಬಿಗರ ಚೌಡಯ್ಯ ಎಂತಹ ಕಷ್ಟ ಸಂದರ್ಭ ಎದುರಾದರೂ ನಿಜವನ್ನೇ ನುಡಿಯುತ್ತಿದ್ದರು. ಹಾಗಾಗಿ ಅವರಿಗೆ ನಿಜಶರಣ ಎಂಬ ಹೆಸರು ಬಂತೆಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದರು.
ಹೊಳಲ್ಕೆರೆ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿದ್ದುಕೊಂಡು ಸಮಾಜ ಸುಧಾರಣೆಯಲ್ಲಿ ತೊಡಗಿದ್ದ ಅಂಬಿಗರ ಚೌಡಯ್ಯ ಎಂತಹ ಕಷ್ಟ ಸಂದರ್ಭ ಎದುರಾದರೂ ನಿಜವನ್ನೇ ನುಡಿಯುತ್ತಿದ್ದರು. ಹಾಗಾಗಿ ಅವರಿಗೆ ನಿಜಶರಣ ಎಂಬ ಹೆಸರು ಬಂತೆಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ಬಿಹಾರದಲ್ಲಿ ಜನಿಸಿದ ಬುದ್ಧ ಜಗತ್ತು ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ. ಸಾವಿರಾರು ಮಹಾ ಪುರುಷರು ಜನಿಸಿರುವ ನೆಲ ನಮ್ಮದು. ಲೋಕದ ಅಣ್ಣ ಬಸವಣ್ಣವರು ಜಗತ್ತಿಗೆ ಪಾರ್ಲಿಮೆಂಟ್ ನೀಡಿದರು. ಅನುಭವ ಮಂಟಪದಲ್ಲಿದ್ದ ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕ, ಧಾರ್ಮಿಕ ನಾಯಕ. ಎಷ್ಟೆ ದೊಡ್ಡವರು ಎದುರಿನಲ್ಲಿದ್ದರು ನೇರವಾಗಿ ನಿಜವನ್ನೇ ಹೇಳುತ್ತಿದ್ದರು. ಜೀವನಕ್ಕಾಗಿ ಮೀನು ಹಿಡಿಯುತ್ತಿದ್ದ ಅವರು ಎಲ್ಲಾ ಶರಣರಿಗೂ ಬೇಕಾಗಿದ್ದವರು ಎಂದು ಸ್ಮರಿಸಿದರು.
ಮುಂದಿನ ದಿನಗಳಲ್ಲಿ ನಿಮ್ಮ ಸಮಾಜಕ್ಕೆ ಸರ್ಕಾರ ಜಾಗ ನೀಡಿದರೆ ಸಮಾಜದ ಕೆಲಸ ಮಾಡಲು ಅನುಕೂಲವಾಗುತ್ತದೆ. ಎಲ್ಲಾ ಜಾತಿಯೂ ಶ್ರೇಷ್ಠ. ಯಾವುದೂ ಮೇಲು ಯಾವುದು ಕೀಳಲ್ಲ. ಎಲ್ಲಾ ಜಾತಿಯಲ್ಲಿಯೂ ಶರಣರಿದ್ದಾರೆ. ದೇಶಕ್ಕೆ ಸಂವಿಧಾನವನ್ನು ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಲ್ಲಿ ಬ್ರಾಹ್ಮಣರನ್ನು ಮೀರಿಸುವಂತ ವಿದ್ವತ್ತಿತ್ತು ಎಂದು ಹೇಳಿದರು.ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಹಿಂದುಳಿದ ಸಮಾಜದಲ್ಲಿ ಜನಿಸಿದ ಅಂಬಿಗರ ಚೌಡಯ್ಯನವರು ಅನುಭವ ಮಂಟಪದಲ್ಲಿದ್ದುಕೊಂಡು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲು ನಿಜವನ್ನೇ ನುಡಿಯುತ್ತಿದ್ದರಿಂದ ನಿಜ ಶರಣ ಎಂಬ ಹೆಸರು ಗಳಿಸಿದರು. ಪರಿಶಿಷ್ಟ ಪಂಗಡದಲ್ಲಿ ಜನಿಸಿದ ವಾಲ್ಮೀಕಿ ರಾಮಾಯಣ ರಚಿಸಿ ಇತಿಹಾಸದಲ್ಲಿ ಸೇರಿದರು ಎಂದು ತಿಳಿಸಿದರು.
ಬುದ್ಧ, ಬಸವಣ್ಣ ಹುಟ್ಟಿರುವ ನಾಡು ನಮ್ಮದು. ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಪಾಲಿಸಬೇಕು. ಕಾಯಕಕ್ಕೆ ಮಹತ್ವ ಕೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದವರು ಎಂದು ನುಡಿದರು.ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆದು ಕೆರೆಗಳನ್ನು ತುಂಬಿಸಿದ್ದೇನೆ. ನಿಮ್ಮ ಸಮುದಾಯಕ್ಕೆ ಎಲ್ಲಿಯಾದರೂ ಜಾಗ ನೋಡಿ ಅನುದಾನ ಮಂಜೂರು ಮಾಡಿಸಿ ಕಟ್ಟಡ ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ತಹಸೀಲ್ದಾರ್ ವಿಜಯಕುಮಾರ್, ಅಂಬಿಗರ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ, ಪರಮೇಶ್ವರಪ್ಪ, ಸತೀಶ್, ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಜಯಂತಿಯಲ್ಲಿ ಪಾಲ್ಗೊಂಡಿದ್ದರು.