ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಷ ಸೇವಿಸಿ ಅಸ್ವಸ್ಥಳಾದ ಗೃಹಿಣಿಯೋರ್ವರನ್ನು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿಗೆ ಕರೆದೊಯ್ಯುವ ವೇಳೆ 108 ಆಂಬುಲೆನ್ಸ್ ಸಿಬ್ಬಂದಿ ತೋರಿದ ಸಮಯ ಪ್ರಜ್ಞೆಯಿಂದ ದೇಹದೊಳಗಿನ ವಿಷ ಹೊರ ತೆಗೆದು ಮಹಿಳೆಯ ಜೀವ ರಕ್ಷಣೆ ಮಾಡಿದ ಘಟನೆ ವರದಿಯಾಗಿದೆ.ಡಿ. 29ರಂದು ಮಧ್ಯಾಹ್ನದ ಸುಮಾರಿಗೆ ಉಪ್ಪಿನಂಗಡಿ ಮಠ ಪರಿಸರದ ಮಹಿಳೆಯೋರ್ವರು ವಿಷ ಸೇವಿಸಿ ಅಸ್ವಸ್ಥರಾದ ಸ್ಥಿತಿಯಲ್ಲಿ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಕರೆ ತರಲಾಗಿತ್ತು. ಗಂಭೀರ ಸ್ಥಿತಿಗೆ ತಲುಪಿದ್ದ ಮಹಿಳೆಯನ್ನು ಅಗತ್ಯ ಚಿಕಿತ್ಸೆಗೆ ಮಂಗಳೂರಿಗೆ ಕರೆತರಬೇಕಾಗಿತ್ತು. ದುರಾದೃಷ್ಟ ಉಪ್ಪಿನಂಗಡಿಯ 108 ಅಂಬುಲೆನ್ಸ್ ನಲ್ಲಿ ಅಳವಡಿಸಲಾದ ಸೈರನ್ ಹಿಂದಿನ ದಿನ ಕೆಟ್ಟು ಹೋಗಿತ್ತು. ಉಪ್ಪಿನಂಗಡಿಯಿಂದ ಮಂಗಳೂರು ವರೆಗಿನ ದಾರಿ ಮಧ್ಯೆ ಹಲವೆಡೆ ವಾಹನ ದಟ್ಟಣೆ ಇರುವುದರಿಂದ ಸೈರನ್ ಇಲ್ಲದೆ ಅಂಬುಲೆನ್ಸ್ ನಲ್ಲಿ ರೋಗಿಯನ್ನು ಕರೆದೊಯ್ಯುವುದು ಅಸಾಧ್ಯ. ಈ ಸಂದರ್ಭ ಸ್ಥಳೀಯ ಟೀಮ್ ದಕ್ಷಿಣ ಕಾಶಿ ಅಂಬುಲೆನ್ಸ್ ನ್ನು ಸೈರನ್ ಸೇವೆಗಾಗಿ ಬಳಸಿಕೊಂಡು ಅಸ್ವಸ್ಥ ಮಹಿಳೆಯನ್ನು 108 ಅಂಬುಲೆನ್ಸ್ ನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಒಟ್ಟು 50 ನಿಮಿಷಗಳಾವಧಿಯ ಪ್ರಯಾಣದುದ್ದಕ್ಕೂ ಅಸ್ವಸ್ಥ ಮಹಿಳೆಯ ದೇಹದಲ್ಲಿದ್ದ ವಿಷವನ್ನು ಪೂರ್ಣ ಪ್ರಮಾಣದಲ್ಲಿ ಹೊರತೆಗೆಯುವಲ್ಲಿ 108 ಅಂಬುಲೆನ್ಸ್ ನ ಸಿಬ್ಬಂದಿ ಯಶಸ್ವಿಯಾದರು. ಮಂಗಳವಾರ ತೀವ್ರ ನಿಗಾ ವಿಭಾಗದಿಂದ ವಾರ್ಡ್ ಗೆ ಸ್ಥಳಾಂತರಗೊಂಡಿದ್ದಾರೆ.ವಿಷ ಸೇವಿಸಿದ ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ಕರೆ ತಂದಿದ್ದೇವು. ಈ ವೇಳೆ 108ರ ಶುಶ್ರೂಷಕ ಅವಿನಾಶ್ ಎಚ್ ಎಂ ತೋರಿದ ಧೈರ್ಯ ಮತ್ತು ಜಾಣ್ಮೆ ಮೆಚ್ಚಲೇ ಬೇಕು. ಸೈರನ್ ಮೊಳಗಿಸಿಕೊಂಡು ದಾರಿ ಒದಗಿಸಲು ಟೀಮ್ ದಕ್ಷಿಣ ಕಾಶಿಯ ಆಂಬುಲೆನ್ಸ್ ಸಹಕಾರ ಪಡೆಯಲಾಯಿತು ಎಂದು ಟೀಮ್ ದಕ್ಷಿಣ ಕಾಶಿಯ ಚಾಲಕ ರವಿನಂದನ್ ಹೆಗ್ಡೆ ತಿಳಿಸಿದ್ದಾರೆ.