ಹಿಂದು ಸಂಘಟನೆಗಳ ವಿರೋಧ ನಡುವೆಯೇ ಟೆಂಡರ್ ಪೂರ್ಣ, 6 ಅಂಗಡಿ ಮುಸ್ಲಿಮರಿಗೆ

| Published : Oct 15 2023, 12:45 AM IST

ಹಿಂದು ಸಂಘಟನೆಗಳ ವಿರೋಧ ನಡುವೆಯೇ ಟೆಂಡರ್ ಪೂರ್ಣ, 6 ಅಂಗಡಿ ಮುಸ್ಲಿಮರಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂರು ದಿನಗಳ ಹಿಂದೆ ದೇವಸ್ಥಾನದ ಆಡಳಿತ ಟೆಂಡರ್ ಕರೆದು ಅಂತಿಮಗೊಳಿಸಿದಾಗ 125 ಸ್ಟಾಲ್‌ಗಳ ಪೈಕಿ 92 ಸ್ಟಾಲ್‌ಗಳನ್ನು ನೀಡಲಾಗಿತ್ತು. ಆದರೆ 71 ಮಂದಿ ಮಾತ್ರ ಬಿಡ್‌ ಮೊತ್ತ ಪಾವತಿಸಿ ಸ್ಟಾಲ್‌ನ್ನು ಅಧಿಕೃತಗೊಳಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಹಿಂದು ಸಂಘಟನೆಗಳ ವಿರೋಧದ ನಡುವೆಯೇ ಶನಿವಾರ ಕೊನೆಗೂ ಬಾಕಿ ಉಳಿದ ಅಂಗಡಿ ಸ್ಟಾಲ್‌ಗಳ ಟೆಂಡರ್‌ ಕರೆದು ಅಂತಿಮಗೊಳಿಸಲಾಗಿದೆ. ಶನಿವಾರ ನಡೆದ ಏಲಂ ಪ್ರಕ್ರಿಯೆ ವೇಳೆ 11 ಸ್ಟಾಲ್‌ಗಳ ಪೈಕಿ 6 ಸ್ಟಾಲ್‌ಗಳನ್ನು ಮುಸ್ಲಿಮರು ಟೆಂಡರ್‌ನಲ್ಲಿ ವಹಿಸಿಕೊಂಡಿದ್ದಾರೆ. ಇದರೊಂದಿಗೆ ಈ ಬಾರಿ ನವರಾತ್ರಿ ಉತ್ಸವದಲ್ಲಿ ಸ್ಟಾಲ್‌ ಹಾಕಿಯೇ ಸಿದ್ಧ ಎನ್ನುವ ದ.ಕ. ಹಾಗೂ ಉಡುಪಿಯ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಬೇಡಿಕೆ ಈಡೇರಿದಂತಾಗಿದೆ. ಮೂರು ದಿನಗಳ ಹಿಂದೆ ದೇವಸ್ಥಾನದ ಆಡಳಿತ ಟೆಂಡರ್ ಕರೆದು ಅಂತಿಮಗೊಳಿಸಿದಾಗ 125 ಸ್ಟಾಲ್‌ಗಳ ಪೈಕಿ 92 ಸ್ಟಾಲ್‌ಗಳನ್ನು ನೀಡಲಾಗಿತ್ತು. ಆದರೆ 71 ಮಂದಿ ಮಾತ್ರ ಬಿಡ್‌ ಮೊತ್ತ ಪಾವತಿಸಿ ಸ್ಟಾಲ್‌ನ್ನು ಅಧಿಕೃತಗೊಳಿಸಿದ್ದರು. ಟೆಂಡರ್‌ ವೇಳೆ ದೇವಸ್ಥಾನದ ಹೊರಗೆ ಪಾಲಿಕೆ ಜಾಗದಲ್ಲಿ ಸ್ಟಾಲ್‌ ಹಾಕಲು ಮುಕ್ತ ಅವಕಾಶ ಇದ್ದು, ಇದರಿಂದ ಮುಸ್ಲಿಮರನ್ನು ದೂರ ಇರಿಸಲಾಗಿದೆ ಎಂದು ಆರೋಪಿಸಿ ದ.ಕ. ಮತ್ತು ಉಡುಪಿ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿತ್ತಲ್ಲದೆ, ಶುಕ್ರವಾರ ಪ್ರತಿಭಟನೆಯನ್ನೂ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಬಾಕಿ ಉಳಿದಿರುವ ಸ್ಟಾಲ್‌ಗಳನ್ನು ಟೆಂಡರ್‌ ಕರೆಸಿ ಹಂಚಿಕೆಗೊಳಿಸುವಂತೆ ದೇವಸ್ಥಾನದ ಆಡಳಿತಕ್ಕೆ ಸೂಚನೆ ನೀಡಿದ್ದರು. ಅದರಂತೆ ಶನಿವಾರ ಮಧ್ಯಾಹ್ನ ಟೆಂಡರ್‌ ಪ್ರಕ್ರಿಯೆ ನಡೆಸಲಾಯಿತು. ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಮತ್ತೆ 11 ಮಂದಿ ಸ್ಟಾಲ್‌ ಪಡೆದಿದ್ದಾರೆ. ಇವರಲ್ಲಿ 6 ಮಂದಿ ಮುಸ್ಲಿಮರು ಸೇರಿದ್ದಾರೆ. ಒಟ್ಟು 82 ಸ್ಟಾಲ್‌ ಹಂಚಿಕೆಯಾಗಿದ್ದು, ಇಲ್ಲಿಗೆ ಟೆಂಡರ್ ಮುಕ್ತಾಯವಾಗಿದ್ದು, ಇನ್ನೂ ಬಾಕಿಯುಳಿದಿರುವ ಸ್ಟಾಲ್‌ಗಳಿಗೆ ಟೆಂಡರ್‌ ಕರೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಸ್ಪಷ್ಟಪಡಿಸಿದೆ. ಮಂಗಳಾದೇವಿ ದೇವಸ್ಥಾನದಲ್ಲಿ ಅ.15ರಿಂದ 24ರ ವರೆಗೆ ನವರಾತ್ರಿ ಉತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.