ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾದ್ಯಂತ ನಡೆಯುತ್ತಿರುವ ಹೋರಾಟಗಳು ಸೋಮವಾರ ಸಹ ಮುಂದುವರೆದವು.ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಅಮಿತ್ ಶಾ ಅವರು ರಾಜಿನಾಮೆ ನೀಡಿ ಇಡೀ ದೇಶದ ಜನರಿಗೆ ಕ್ಷಮೆ ಯಾಚಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ದೇಶದ ಜನಸಾಮಾನ್ಯನು ಕೂಡ ಪ್ರಧಾನಿಯಾಗಬಹುದು. ಅಂತಹ ಸಂವಿಧಾನದಿಂದಲೇ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ಕೇಂದ್ರ ಗೃಹ ಸಚಿವರು ಆಡಳಿತ ನಡೆಸಲು ಅನರ್ಹರಾಗಿದ್ದಾರೆ. ಸಂವಿಧಾನದ ಮೇಲಿನ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಅಮಿತ್ ಶಾ ನೀಡಿರುವ ಹೇಳಿಕೆಯು ಬಿಜೆಪಿ ಮತ್ತು ಆರ್‌ಎಸ್ಎಸ್ ನಾಯಕರಿಗೆ ಡಾ.ಬಿ.ಆರ್.ಅಂಬೇಡ್ಕರ್ ಮೇಲೆ ಅಸಾಧಾರಣ ದ್ವೇಷ ಇದೆ ಎಂಬುವುದನ್ನು ತೋರಿಸಿದೆ ಎಂದು ಟೀಕಿಸಿದರು.*ಎಡ ಪ್ರಜಾಸತ್ತಾತ್ಮಕ ಸಂಘಟನೆಗಳ ವೇದಿಕೆ: ರಾಯಚೂರಿನ ಡಿಸಿ ಕಚೇರಿ ಮುಂಭಾಗದ ವೃತ್ತದಲ್ಲಿ ಸೇರಿದ ಎಡ ಪ್ರಜಾಸತ್ತಾತ್ಮಕ ಸಂಘಟನೆಗಳ ವೇದಿಕೆಯ ಮುಖಂಡರು ಅಮಿತ್ ಶಾ ಅವರ ಭಾವಚಿತ್ರಗಳನ್ನು ದಹಿಸಿ ಆಕ್ರೋಶ ಹೊರಹಾಕಿದರು. ನಂತರ ಜಿಲ್ಲಾಡಳಿತದ ಮುಖಾಂತರ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಮನುಸ್ಮೃತಿಯಲ್ಲಿ ನಂಬಿಕೆ ಇರುವವರು ಅಂಬೇಡ್ಕರ್ ಜೊತೆ ಭಿನ್ನಾಭಿಪ್ರಾಯ ಹೊಂದಿರುವುದು ನಿಜವಾಗಿದೆ. ಬಿಜೆಪಿ ಮತ್ತು ಆರ್‌ಎಸ್ಎಸ್ ನಾಯಕರಿಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮೇಲೆ ದ್ವೇಷವಿದೆ ಎಂಬುವುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಮುಖಂಡರಾದ ಕೆ.ಜಿ.ವೀರೇಶ್, ಎಚ್.ಪದ್ಮಾ, ಕರಿಯಪ್ಪ ಅಚ್ಚೋಳಿ, ಡಿ.ಎಸ್.ಶರಣಬಸವ, ವರಲಕ್ಷ್ಮೀ, ಜೆ.ತಾಯಮ್ಮ, ಈ.ರಂಗನಗೌಡ, ಮಲ್ಲಿಕಾರ್ಜುನ, ಜಂಬಣ್ಣ,ಪ್ರವೀಣರೆಡ್ಡಿ, ಶರಣಗೌಡ.ಎಂ, ಅಕ್ಕಮಹಾದೇವಿ, ಹನುಮಂತ,ಶಿವಪ್ಪ, ನಲ್ಲರೆಡ್ಡಿ,ಹುಲಿಗೆಪ್ಪ, ನರಸಿಂಹಲು ಇತರರು ಇದ್ದರು.ದಸಂಸ ಮನವಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಘಟಕದ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಡಳಿತದ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಈ ವೇಳೆ ದಸಂಸ ಮುಖಂಡರಾದ ಹನುಮಂತು, ವೀರೇಶ, ಹೊನ್ನಪ್ಪ, ಮಹೇಶ, ಮಲ್ಲಿಕಾರ್ಜುನ ಸೇರಿ ಅನೇಕರಿದ್ದರು.