ಅಯೋಧ್ಯೆಯಲ್ಲಿ ಸುತ್ತೂರು ಶಾಖಾ ಮಠ ಆರಂಭಕ್ಕೆ ಅಮಿತ್‌ ಶಾ ಸಂತಸ

| Published : Feb 12 2024, 01:30 AM IST

ಅಯೋಧ್ಯೆಯಲ್ಲಿ ಸುತ್ತೂರು ಶಾಖಾ ಮಠ ಆರಂಭಕ್ಕೆ ಅಮಿತ್‌ ಶಾ ಸಂತಸ
Share this Article
  • FB
  • TW
  • Linkdin
  • Email

ಸಾರಾಂಶ

ಸುತ್ತೂರಿನ ಎಲ್ಲಾ 24 ಮಠಾಧೀಶರನ್ನು ಸ್ಮರಣೆ ಮಾಡುತ್ತೇನೆ. ಲಿಂಗಾಯತ ಸಮುದಾಯಕ್ಕೆ ಅವರು ಕೊಡುಗೆ ನೀಡಿದ್ದು, ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ. ಕರ್ನಾಟಕದ ಪುಣ್ಯಭೂಮಿಯಲ್ಲಿ ಬಸವಣ್ಣ ಅವರು ಕೋಟ್ಯಂತರ ಜನರಿಗೆ ತಮ್ಮ ವಚನಗಳ ಮೂಲಕ, ಒಂದು ವರ್ಗಕ್ಕೆ ಮಾತ್ರವಲ್ಲದೆ ಎಲ್ಲರಿಗೂ ಭಕ್ತಿಯ ಪ್ರೇರಣೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಪ್ರಧಾನಿ ನರೇಂದ್ರಮೋದಿ ಅವರು ಅಯೋಧ್ಯೆ, ಕಾಶಿ ಕಾರಿಡಾರ್‌, ಉಜ್ಜೈನಿ, ಕೇದರ ನಾಥ್, ಬದ್ರಿನಾಥ್ ಮುಂತಾದ ಪ್ರದೇಶಗಳ ಅಭಿವೃದ್ಧಿಯ ಮೂಲಕ ಈ ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಗೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ಜಿಲ್ಲೆಯ ಸುತ್ತೂರಿನಲ್ಲಿ ಭಾನುವಾರ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಶ್ರೀಮತಿ ಪಾರ್ವತಮ್ಮ ಮತ್ತು ಡಾ.ಶ್ರೀಶಾಮನೂರು ಶಿವಶಂಕರಪ್ಪ ಅತಿಥಿಗೃಹ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಪರಂಪರೆಯನ್ನು ವಹೆಚ್ಚು ಮಾಡುವ ಕೆಲಸವನ್ನು ಮೋದಿ ಅವರು ಮಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರವನ್ನು ಅಭಿವೃದ್ಧಿಪಡಿಸಿದ್ದು ಅಲ್ಲದೆ, ಕಾಶಿ ಕಾರಿಡಾರ್‌, ಉಜ್ಜೈನಿ, ಕೇದರ ನಾಥ್, ಬದ್ರಿನಾಥ್ ಮುಂತಾದ ತಾಣಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳ ಅಭಿವೃದ್ಧಿಗೆ ಮತ್ತು ಪರಂಪರೆಗೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.

ದೇಶದ ಹಿರಿಮೆಯಾದ ಯೋಗವನ್ನು ವಿಶ್ವವಿಖ್ಯಾತಗೊಳಿಸಿದರು. ಆಯುರ್ವೇದಕ್ಕೆ ಆದ್ಯತೆ ನೀಡಿದರು. ಇದರ ಜೊತೆಗೆ ದೇಶದ ಸುರಕ್ಷತೆಯನ್ನು ಪ್ರಮುಖ ಗುರಿಯನ್ನಾಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಜನರ ನಡುವೆ ಹೋಗುತ್ತೇವೆ ಎಂದರು.

ಸುತ್ತೂರಿನ ಎಲ್ಲಾ 24 ಮಠಾಧೀಶರನ್ನು ಸ್ಮರಣೆ ಮಾಡುತ್ತೇನೆ. ಲಿಂಗಾಯತ ಸಮುದಾಯಕ್ಕೆ ಅವರು ಕೊಡುಗೆ ನೀಡಿದ್ದು, ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ. ಕರ್ನಾಟಕದ ಪುಣ್ಯಭೂಮಿಯಲ್ಲಿ ಬಸವಣ್ಣ ಅವರು ಕೋಟ್ಯಂತರ ಜನರಿಗೆ ತಮ್ಮ ವಚನಗಳ ಮೂಲಕ, ಒಂದು ವರ್ಗಕ್ಕೆ ಮಾತ್ರವಲ್ಲದೆ ಎಲ್ಲರಿಗೂ ಭಕ್ತಿಯ ಪ್ರೇರಣೆ ನೀಡಿದ್ದಾರೆ ಎಂದರು.

ಸುತ್ತೂರು ಮಠದ ಎಲ್ಲಾ ಪೀಠಾಧಿಪತಿಗಳು ಸೇವಾ ಮನೋಭಾವ ಇಂದಿಗೂ ಮುಂದುವರಿಸಿದ್ದಾರೆ. ಅದರ ಪರಿಣಾಮವಾಗಿ ಲಕ್ಷಾಂತರ ಭಕ್ತಸಮೂಹ ಹೊಂದಿದ್ದು, ಅನೇಕರು ಸುತ್ತೂರು ಮಠದ ಸೇವೆ ಪಡೆದು, ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ನಿನ್ನೆಯ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು, ಆದರೆ ಸಂಸತ್‌ಅಧಿವೇಶನ ಮುಂದೂಡಿದ ಕಾರಣ ನಿನ್ನೆ ಬರಲು ಆಗಲಿಲ್ಲ. ಅಹ್ಮದಾಬಾದ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು, ಅಲ್ಲಿಗೂ ಹೋಗದಿದ್ದಾಗ ಅಲ್ಲಿನ ಪತ್ರಕರ್ತರು ಇಲ್ಲಿಗೆ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು. ನಾನು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಶ್ರೀಗಳ ಆಶೀರ್ವಾದ ಪಡೆದುಕೊಳ್ಳಲು ತೆರಳುತ್ತಿರುವುದಾಗಿ ಹೇಳಿದೆ ಎಂದು ಅವರು ಹೇಳಿದರು.

ಆರು ದಿನಗಳ ಸುತ್ತೂರು ಜಾತ್ರೆಯಲ್ಲಿ ಕುಸ್ತಿ, ಪಾರಂಪರಿಕ ಕ್ರೀಡೆ, ಸಾಮೂಹಿಕ ವಿವಾಹ, ಕೊಂಡೋತ್ಸವ ಹೀಗೆ ಹಲವು ರೀತಿಯ ಕಾರ್ಯಕ್ರಮ ನಡೆಸುವ ಮೂಲಕ ಎಲ್ಲಾ ವರ್ಗದ ಜನರನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಸಲಾಗಿದೆ. ಈ ಪರಂಪರೆ ಮುಂದುವರಿಸುವ ಮೂಲಕ ಸುತ್ತೂರು ಸಂಸ್ಥಾನ 300ಕ್ಕೂ ಹೆಚ್ಚು ಸಂಸ್ಥೆ, 20 ಸಾವಿರ ಸಿಬ್ಬಂದಿ, ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಂಗವಿಕಲರಿಗೆ ಪಾಲಿಟೆಕ್ನಿಕ್ ಕಾಲೇಜು ಮಾಡಿರುವುದು ಆದರ್ಶ ‌ಸಂಗತಿ, ಈ ಮೂಲಕ ಅನೇಕರು ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಸುತ್ತೂರು ಮಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುತ್ತೂರು ಮಠದ ಪ್ರತಿಯೊಂದು ಸೇವಾ ಕಾರ್ಯಗಳನ್ನು ಸಮಾಜ ಹತ್ತಿರದಿಂದ ಕಡಿದೆ. ಆ ಕಾರಣದಿಂದಾಗಿ ಬಿಜೆಪಿ ಸದಾ ನಿಮ್ಮೊಂದಿಗೆ ಇರಲಿದೆ. ನಿಮ್ಮ ಕೊಡುಗೆಯನ್ನು ಕಾರ್ಯಕರ್ತರು ಸದಾಕಾಲವೂ ಸ್ಮರಿಸುತ್ತಾ ಜನರ ಮಧ್ಯೆ ಹೋಗುತ್ತೇವೆ, ಕೊನೆಯವರೆಗೂ ಈಸೇರವೆಯನ್ನು ಕೊಂಡಾಡುತ್ತೇವೆ ಎಂದು ಸೂಚ್ಯವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಮಿತ್‌ಶಾ ಅವರಿಗೆ ತಮ್ಮದೇ ಆದ ಸುಂದರ ಭಾವಚಿತ್ರವನ್ನು ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆತ್ಮೀಯವಾಗಿ ಅಭಿನಂದಿಸಿದರು. ಬಳಿಕ ಅಯೋಧ್ಯೆ ರಾಮಮಂದಿರದ ಶಿಲ್ಪಿ ಅರುಣ್‌ಯೋಗಿರಾಜ್‌ ಅವರಿಗೆ ಫಲತಾಂಬೂಲ ನೀಡಿ ಅಮಿತ್‌ಶಾ ಅವರ ಮೂಲಕ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿಪಕ್ಷ ನಾಯಕ ಆರ್‌. ಅಶೋಕ್‌, ಸಂಸದ ಪ್ರತಾಪ ಸಿಂಹ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ, ಮಾಜಿ ಸಚಿವ ಸಿ.ಟಿ. ರವಿ ಇದ್ದರು.

ಇತ್ತೀಚಿಗೆ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಯೋಧ್ಯೆಯಲ್ಲೂ ಸಹ ಸುತ್ತೂರು ಶಾಖಾ ಮಠ ನಿರ್ಮಿಸುವ ತೀರ್ಮಾನಕ್ಕೆ ಶ್ರೀಗಳು ಬಂದಿದ್ದು, ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.

- ಅಮಿತ್‌ ಶಾ, ಕೇಂದ್ರ ಗೃಹ ಸಚಿವರು