ಸಾರಾಂಶ
ಕೊಪ್ಪಳ: ನಗರ ಸ್ಥಳೀಯ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಿ ರಾಜ್ಯ ಸರ್ಕಾರದ ನೋಟಿಫಿಕೇಶನ್ ಬಳಿಕವೂ ಕೊಪ್ಪಳ ನಗರಸಭೆಯ ಅಧ್ಯಕ್ಷರಾಗಿ ಅಮ್ಜದ್ ಪಟೇಲ್ ಅವರೇ ಮುಂದುವರಿದಿದ್ದಾರೆ.
ಹೌದು, ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸರ್ಕಾರಕ್ಕೆ ಸ್ಪಷ್ಟನೆ ಕೇಳಿರುವುದರಿಂದ ಸ್ಪಷ್ಟನೆ ಸರ್ಕಾರದಿಂದ ಬಾರದ ಹಿನ್ನೆಲೆ ಅಮ್ಜದ್ ಪಟೇಲ್ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.ಆಗಿದ್ದೇನು: ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಕೊಪ್ಪಳ ಅವರು, ನಗರಸಭೆ ಆಡಳಿತ ಮಂಡಳಿಯ ಸದಸ್ಯರ, ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಅವಧಿ ಇನ್ನು ಮುಗಿದಿಲ್ಲ. ನಮಗೆ ಇನ್ನೂ ಆರು ತಿಂಗಳ ಕಾಲವಕಾಶವಿದೆ ಎಂದು ಧಾರವಾಡ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆದಿದ್ದು, ನ. 19 ವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶ ಮಾಡಿರುವುದರಿಂದ ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಅಮ್ಜದ್ ಪಟೇಲ್ ಮುಂದುವರೆದಿದ್ದಾರೆ.
ನೋಟಿಫಿಕೇಶನ್ ಬಂದ ತಕ್ಷಣವೇ ಜಿಲ್ಲಾಧಿಕಾರಿಗಳು ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಸರ್ಕಾರಕ್ಕೆ ಸ್ಪಷ್ಟನೆ ಕೋರಿದ್ದು, ಸರ್ಕಾರದಿಂದ ಇದುವರೆಗೂ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ, ನ್ಯಾಯಾಲಯದ ಆದೇಶ ಇರುವುದರಿಂದ ಕೊಪ್ಪಳ ನಗರಸಭೆಯ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ಆಗಿಲ್ಲ.ಭಾರಿ ಹೈಡ್ರಾಮಾ: ಈ ನಡುವೆ ಕೊಪ್ಪಳ ನಗರಸಭೆಯಲ್ಲಿ ಭಾರಿ ಹೈಡ್ರಾಮವೇ ನಡೆದು ಹೋಯಿತು. ಸರ್ಕಾರದಿಂದ ನೋಟಿಫಿಕೇಶನ್ ಆಗುತ್ತಿದ್ದಂತೆ ಕೊಪ್ಪಳ ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ಅಧ್ಯಕ್ಷರ ಫಲಕ ತೆಗೆದು ಆಡಳಿತಾಧಿಕಾರಿ ಫಲಕ ಹಾಕಿದ್ದರು. ಈ ಕುರಿತು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಲಿಖಿತ ಪತ್ರವನ್ನು ಪೌರಾಯುಕ್ತರಿಗೆ ನೀಡಿ ಆಡಳಿತಾಧಿಕಾರಿ ನೇಮಕದ ಕುರಿತು ನ್ಯಾಯಾಲಯದ ಆದೇಶ ಇದ್ದರೂ ಯಾಕೆ ಆಡಳಿತಾಧಿಕಾರಿ ಬೋರ್ಡ್ ಹಾಕಿದ್ದಿರಿ, ಜಿಲ್ಲಾಧಿಕಾರಿಗಳು ಬಂದು ಸೂಚಿಸಿದ್ದರೇ ಎಂದು ಸ್ಪಷ್ಟನೇ ಕೇಳಿದ್ದರು. ಇದಕ್ಕೆ ತಕ್ಷಣ ಹಿಂಬರಹ ನೀಡಿ ಆಡಳಿತಾಧಿಕಾರಿ ಫಲಕ ತೆಗೆದು ಹಾಕಲಾಗಿದೆ. ಹೀಗಾಗಿ, ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಅಮ್ಜದ್ ಪಟೇಲ್ ಮುಂದುವರೆಸಿದ್ದಾರೆ. ನ. 19 ರಂದು ಧಾರವಾಡ ಹೈಕೋರ್ಟಿನಲ್ಲಿ ವಿಚಾರಣೆ ನಡೆಯಲಿದ್ದು, ಅಂದು ಹೊರ ಬೀಳುವ ಆದೇಶದಂತೆ ಮುಂದಿನ ಪ್ರಕ್ರಿಯೆ ನಡೆಯಲಿದೆ.
ನಮ್ಮ ಅವಧಿ ಇನ್ನೂ ಆರು ತಿಂಗಳು ಇದ್ದು, ನ್ಯಾಯಾಲಯದಲ್ಲಿ ಪ್ರಕರಣ ನಮ್ಮ ಪರವಾಗುತ್ತದೆ ಎನ್ನುವ ವಿಶ್ವಾಸವಿದೆ. ಸದ್ಯಕ್ಕೆ ಅಧಿಕಾರದಲ್ಲಿ ಮುಂದುವರೆದಿದ್ದು, ಮುಂದಿನ ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ತಿಳಿಸಿದ್ದಾರೆ.ಕೊಪ್ಪಳ ನಗರಸಭೆಯ ಅಧ್ಯಕ್ಷರ ಅವಧಿಯ ಕುರಿತು ಪ್ರಕರಣ ನ್ಯಾಯಾಲದಲ್ಲಿದ್ದು, ಹೀಗಾಗಿ, ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿಲ್ಲ. ಈ ಕುರಿತು ಸರ್ಕಾರಕ್ಕೂ ಮಾಹಿತಿ ನೀಡಿದ್ದು, ಸರ್ಕಾರದ ಸೂಚನೆಯನ್ನಾಧರಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))