ಅಡಿಗಲ್ಲು ಸಮಾರಂಭ ಮಾಡಿದರೆ ಹಕ್ಕು ಚ್ಯುತಿ ಸಾಧ್ಯತೆ

| Published : Feb 06 2024, 01:37 AM IST

ಅಡಿಗಲ್ಲು ಸಮಾರಂಭ ಮಾಡಿದರೆ ಹಕ್ಕು ಚ್ಯುತಿ ಸಾಧ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಒಟ್ಟು ₹1486.41 ಕೋಟಿಯ ಈ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಮತ್ತು ಆರ್ಥಿಕ ಇಲಾಖೆಗಳ ಅನುಮೋದನೆ ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ಅಥಣಿ

ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅಡಿಗಲ್ಲು ಸಮಾರಂಭ ಮುಗಿದ ಅಧ್ಯಾಯ. ಕಳೆದ ವರ್ಷ ಮಾ.28 ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಡಿಗಲ್ಲು ಸಮಾರಂಭ ಮಾಡಿದ್ದಾರೆ. ಆದರೆ, ಶಾಸಕ ಲಕ್ಷ್ಮಣ ಸವದಿ ಅವರು ಈಗ ಮತ್ತೊಮ್ಮೆ ಶಂಕುಸ್ಥಾಪನೆ ನೆರೆವೇರಿಸಿದಲ್ಲಿ ಅದು ಹಕ್ಕು ಚ್ಯುತಿಯಾಗುತ್ತದೆ. ಈ ಸಮಾರಂಭದಲ್ಲಿ ಯಾರೆ ಸಚಿವರು ಭಾಗವಹಿಸಿದವರ ಮೇಲೂ ಹಕ್ಕು ಚ್ಯುತಿ ಆಗುತ್ತದೆ ಎಂದು ಮಾಜಿ ಶಾಸಕ ಮಹೇಶ ಕುಮಟಳ್ಳಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ₹1486.41 ಕೋಟಿಯ ಈ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಮತ್ತು ಆರ್ಥಿಕ ಇಲಾಖೆಗಳ ಅನುಮೋದನೆ ಸಿಕ್ಕಿದೆ. ಅಲ್ಲದೆ ನೀರಾವರಿ ಇಲಾಖೆ ಸಹ ತಾಂತ್ರಿಕ ಬಿಡ್ ಮಾಡಿದೆ. ಈ ಎಲ್ಲ ವಿಷಯ ಹಾಲಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಗೊತ್ತಿದ್ದರೂ ತಮ್ಮ ರಾಜಕೀಯ ಲಾಭಕ್ಕೆ ಮತ್ತೊಮ್ಮೆ ಅಡಿಗಲ್ಲು ಸಮಾರಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಯೋಜನೆ ಬಿಜೆಪಿ ಕೊಡುಗೆ. ಮಾಜಿ ಸಚಿವ ರಮೇಶ ಜಾರಕಿಹೊಳಿಯ ಸತತ ಪ್ರಯತ್ನದಿಂದ ಬಿಜೆಪಿ ಅಧಿಕಾರಾವಧಿಯಲ್ಲಿ ಮಂಜೂರು ಮಾಡಿದ್ದಾರೆ. ಇದರ ಕಾಮಗಾರಿ ಕಳೆದ 7 ತಿಂಗಳ ಹಿಂದೆ ಆರಂಭವಾಗಬೇಕಿತ್ತು. ಆದರೆ, ಇದುವರೆಗೆ ಏಕೆ ಪ್ರಾರಂಭಿಸಲಿಲ್ಲ? ಅದರ ಬದಲು ಮತ್ತೊಮ್ಮೆ ಅಡಿಗಲ್ಲು ಸಮಾರಂಭ ಮಾಡುವ ಅವಶ್ಯಕತೆ ಏನಿದೆ? ಅಡಿಗಲ್ಲು ಸಮಾರಂಭ ಮಾಡುವ ಹಕ್ಕು ಇವರಿಗೆ ಇದೆಯಾ ಎಂದು ಪ್ರಶ್ನಿಸಿದರು.

ಈ ಯೋಜನೆ ಮೇಲೆ ರಾಜಕೀಯ ಮಾಡುವ ಉದ್ದೇಶ ನನಗಿಲ್ಲ. ಈ ಯೋಜನೆಗೆ ನೀಲ ನಕ್ಷೆ ನಾನೇ ಸಿದ್ಧ ಮಾಡಿದ್ದೇನೆ. ನಾನು ಶಾಸಕನಾದ ಮೇಲೆ ಯೋಜನೆ ಮಂಜೂರಾತಿಗಾಗಿ ಶ್ರಮಿಸಿದ್ದೇನೆ ಎಂದು ಹೇಳಿದರು.

ಅಡಿಗಲ್ಲು ಸಮಾರಂಭ ಬಿಟ್ಟು ಕಾಮಗಾರಿ ಕೆಲಸ ಪ್ರಾರಂಭಿಸಿ, ಎರಡು ವರ್ಷದೊಳಗೆ ಪೂರ್ಣಗೊಳಿಸಿ ನೀವೇ ಉದ್ಘಾಟಿಸಿದರೆ ರೈತರು ಒಪ್ಪುತ್ತಾರೆ. ನಾವು ಸ್ವಾಗತಿಸುತ್ತೇವೆ. ಒಂದು ವೇಳೆ ಅಡಿಗಲ್ಲು ಸಮಾರಂಭ ಮಾಡಿದರೆ ಹಕ್ಕು ಚ್ಯುತಿಯಾಗುತ್ತದೆ. ನಮ್ಮ ಪಕ್ಷದಿಂದ ಕಾರ್ಯಕರ್ತರ ಸಲಹೆ ಪಡೆದು ಹೊರಾಟ ಮಾಡುತ್ತೇವೆ ಎಂದು ಹೇಳಿದರು.

ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಡಾ.ರವಿ ಸಂಕ, ಉಮೇಶ ಬೋಟಂಡಕರ, ಸಿದ್ದಣ್ಣ ಮುದಕಣ್ಣವರ, ಗಿರೀಶ್ ಭುಟಾಳೆ, ಉತ್ತಮ ಸಂಕ, ಮಲ್ಲಪ್ಪ ಹಂಚಿನಾಳ, ಶಿವು ಸಿಂಧೂರ, ವಿನಯ ಪಾಟೀಲ, ಅಪ್ಪಾಸಾಹೇಬ ಅವತಾಡೆ ಮುಂತಾದವರು ಇದ್ದರು.