ಬೆಂಗಳೂರು : ಮುಖ್ಯಮಂತ್ರಿ ಹುದ್ದೆ ತೊರೆದು ತಮಗೆ ರಾಜ್ಯಸಭಾ ಸದಸ್ಯ ಆಗುವಂತೆ ನೀಡಿದ ಆಹ್ವಾನ ಹಾಗೂ ಪುತ್ರ ಯತೀಂದ್ರ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಕಾಂಗ್ರೆಸ್‌ ವರಿಷ್ಠರ ಪ್ರಸ್ತಾಪ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸಂಪೂರ್ಣ ಮೌನ ತಾಳಿದ್ದಾರೆ. ಇದು ಹೈಕಮಾಂಡ್‌ ಅನ್ನು ಗೊಂದಲಕ್ಕೆ ದೂಡಿದೆ.

ಹೈಕಮಾಂಡ್‌ ಸೂಚನೆಯಂತೆ ರಾಜೀನಾಮೆ

ಹೈಕಮಾಂಡ್‌ ಸೂಚನೆಯಂತೆ ರಾಜೀನಾಮೆಗೆ ಮುಂದಾಗಿರುವ ಸಿದ್ದರಾಮಯ್ಯ ಉಳಿದ ಎಲ್ಲ ವಿಷಯಗಳ ಬಗ್ಗೆಯೂ ಮೌನ ತಾಳಿದ್ದಾರೆ. ರಾಜ್ಯಸಭೆ ಸದಸ್ಯತ್ವ ಹಾಗೂ ಡಿಸಿಎಂ ಪದವಿ ಕುರಿತಂತೆ ಒಂದೆರಡು ದಿನದಲ್ಲಿ ನಿಲುವು ತಿಳಿಸುವುದಾಗಿ ಹೇಳಿದ್ದ ಸಿದ್ದರಾಮಯ್ಯ ಅವರು ಈ ಬಗ್ಗೆ ಗುರುವಾರ ಚಕಾರ ಎತ್ತುತ್ತಿಲ್ಲ.

ಮೂಲಗಳ ಪ್ರಕಾರ ದೆಹಲಿ ರಾಜಕಾರಣಕ್ಕೆ ತೆರಳುವ ಮನಃಸ್ಥಿತಿ ಸಿದ್ದರಾಮಯ್ಯ ಅವರಿಗೆ ಇಲ್ಲ. ಅಲ್ಲದೆ, ಡಿಸಿಎಂ ಪದವಿಯನ್ನು ತಮ್ಮ ಪುತ್ರನಿಗೆ ನೀಡುವ ಹೈಕಮಾಂಡ್‌ ಪ್ರಸ್ತಾಪ ಬಗ್ಗೆಯೂ ಒಲವು ಹೊಂದಿಲ್ಲ ಎಂದು ಹೇಳಲಾಗುತ್ತಿದೆ.


ಶಾಸಕರಾಗಿ ಮುಂದುವರೆಯುವಂತಾಗುತ್ತದೆ

ಒಂದು ವೇಳೆ ಇದು ನಿಜವೇ ಆಗಿದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಕೇವಲ ಶಾಸಕರಾಗಿ ಮುಂದುವರೆಯುವಂತಾಗುತ್ತದೆ. ಆದರೆ ಹಿಂದುಳಿದ ವರ್ಗದ ಮೇರು ನಾಯಕ ಸಿದ್ದರಾಮಯ್ಯ ಅವರು ಕೇವಲ ಶಾಸಕರಾಗಿ ಮುಂದುವರೆದರೆ ಅದು ಮುಂದಿನ ರಾಜ್ಯ ಸರ್ಕಾರದ ನಾಯಕತ್ವದ ಮೇಲೆ ತೀವ್ರ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ಹೈಕಮಾಂಡ್ ಅನ್ನು ಚಿಂತೆಗೀಡು ಮಾಡಿದೆ ಎನ್ನಲಾಗುತ್ತಿದೆ.

ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಮನವೊಲಿಸುವ ಪ್ರಯತ್ನ ತೀವ್ರಗೊಳಿಸುವ ಸಾಧ್ಯತೆಯಿದೆ. ಹೀಗಾಗಿಯೇ ಹೈಕಮಾಂಡ್‌ನ ದೂತರಾದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಪ್ರಭಾರಿ ರಣದೀಪ್‌ ಸುರ್ಜೇವಾಲ ಅವರು, ‘ನಾಯಕತ್ವ ಬದಲಾವಣೆ ಎಂಬುದು ಊಹಾಪೋಹ’ ಎಂಬ ಅಧಿಕೃತ ಹೇಳಿಕೆಗೆ ಅಂಟಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.