ಬೆಂಗಳೂರು : ಹೈಕಮಾಂಡ್‌ನಿಂದ ಕರೆ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ, ಪ್ರಮುಖವಾಗಿ ಸಚಿವ ಸಂಪುಟ ಪುನಾರಚನೆ ಸೇರಿ ವಿವಿಧ ರಾಜ್ಯ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಮುಖ್ಯಮಂತ್ರಿ ಅವರು ಹೈಕಮಾಂಡ್ ಭೇಟಿಗೆ ಈ ಮೊದಲೇ ಸಮಯ ಕೇಳಿದ್ದರಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕರೆ ಮಾಡಿ ಮಂಗಳವಾರ ದೆಹಲಿಗೆ ಬರುವಂತೆ ತಿಳಿಸಿದ್ದಾರೆ.
ಕೆಪಿಸಿಸಿ ವತಿಯಿಂದ ನಗರದ ಹೊರವಲಯದಲ್ಲಿ ಭಾನುವಾರ ನಡೆದ ಎಸ್‌ಐಆರ್ ಪ್ರಕ್ರಿಯೆ, ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಂಘಟನೆ ಕುರಿತ ಪೂರ್ವಭಾವಿ ಸಭೆ ವೇಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಬಂದಿದ್ದು, ಮುಖ್ಯಮಂತ್ರಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಏನೇನು ಚರ್ಚೆ?:
ಸಚಿವ ಸಂಪುಟ ಪುನಾರಚನೆಗೆ ಪಕ್ಷದ ಹಲವು ಶಾಸಕರಿಂದ ಹಲವು ದಿನಗಳಿಂದ ಬೇಡಿಕೆ ಬರುತ್ತಿದೆ. ಇತ್ತ ಶಾಸಕರು ಮುಖ್ಯಮಂತ್ರಿ ಅವರಿಗೂ ಬೇಡಿಕೆ ಒಟ್ಟಿದ್ದಾರೆ, ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿ ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ವಿಚಾರ ಪ್ರಮುಖವಾಗಿ ಚರ್ಚೆಗೆ ಬರಲಿದ್ದು ಹೈಕಮಾಂಡ್ ಒಪ್ಪಿಗೆ ನೀಡಲಿದೆಯಾ? ಎಂಬುದು ಕುತೂಹಲ ಮೂಡಿಸಿದೆ. ಇದೇ ವೇಳೆ ರಾಜ್ಯದಲ್ಲಿ ಮುಂದುವರೆದಿರುವ ನಾಯಕತ್ವ ಬದಲಾವಣೆ ಗೊಂದಲದ ವಿಚಾರವನ್ನೂ ಚರ್ಚಿಸುವ ಸಾಧ್ಯತೆ ಇದ್ದು, ಒಟ್ಟಿನಲ್ಲಿ ಎಲ್ಲದಕ್ಕೂ ತೆರೆಬೀಳುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಇದರ ಜೊತೆಗೆ, ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಆಯ್ಕೆಯಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಬಿಜೆಪಿಯ ನಾರಾಯಣ ಕೊರಗಪ್ಪ ಮತ್ತು ಈರಣ್ಣ ಕಡಾಡಿ ಅವರ ರಾಜ್ಯಸಭಾ ಸದಸ್ಯ ಸ್ಥಾನದ ಅವಧಿ ಜೂ.25ಕ್ಕೆ ಅಂತ್ಯವಾಗಲಿದೆ. ಆ ಸ್ಥಾನಗಳಿಗೆ ಜೂ.18ರಂದು ಚುನಾವಣೆ ಘೋಷಣೆಯಾಗಿದೆ. ಹಾಗಾಗಿ ಪಕ್ಷದ ಅಭ್ಯರ್ಥಿಗಳಾಗಿ ಯಾರನ್ನು ಕಣಕ್ಕಿಳಿಸಬೇಕು? ಎಂಬ ಚರ್ಚೆ ನಡೆಯಲಿದೆ.
ಹಾಗೆಯೇ ಬರುವ ಜೂನ್‌ನಲ್ಲಿ ವಿಧಾನಪರಿಷತ್ತಿನಲ್ಲಿ ಬಿ.ಕೆ. ಹರಿಪ್ರಸಾದ್, ಕೆ.ನಸೀರ್ ಅಹಮದ್, ತಿಪ್ಪಣ್ಣಪ್ಪ ಕಮಕನೂರ ಮತ್ತು ಜುಲೈನಲ್ಲಿ ರಮೇಶ್ ಬಾಬು, ಎಚ್.ವಿಶ್ವನಾಥ್, ಶಾಂತರಾಮ ಸಿದ್ದಿ, ಭಾರತಿ ಶೆಟ್ಟಿ, ಡಾ.ತಳವಾರ ಸಾಬಣ್ಣ ಅವರ ಅವಧಿ ಪೂರ್ಣಗೊಳ್ಳಲಿದೆ. ಶಾಸಕರ ಮತದಾನ ಹಾಗೂ ನಾಮನಿರ್ದೇಶನ ಮೂಲಕ ಆ ಸ್ಥಾನಗಳಿಗೆ ಮರು ಆಯ್ಕೆ ನಡೆಯಲಿದೆ. ಹಾಗಾಗಿ ಈ ಎಲ್ಲಾ ಸ್ಥಾನಗಳಿಗೆ ಪಕ್ಷದ ಅಭ್ಯರ್ಥಿಗಳಾಗಿ ಯಾರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆಯೂ ಹೈಕಮಾಂಡ್ ನಾಯಕರು ಚರ್ಚಿಸುವ ಸಾಧ್ಯತೆ ಇದೆ.
ಆದರೆ, ಈ ವಿಚಾರ ಚರ್ಚಿಸುವುದಾದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿಕೊಳ್ಳಬಹುದು ಎನ್ನಲಾಗಿದೆ. ಆದರೆ, ಸದ್ಯಕ್ಕೆ ಉಪಮುಖ್ಯಮಂತ್ರಿ ಅವರು ಹೈಕಮಾಂಡ್ ಭೇಟಿಗೆ ಸಮಯ ಕೇಳಿಲ್ಲ. ಒಂದು ವೇಳೆ ಹೈಕಮಾಂಡ್‌ನವರೇ ಆಹ್ವಾನಿಸಿದರೆ ಇಬ್ಬರೂ ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಏನೇನು ಚರ್ಚೆ ಸಾಧ್ಯತೆ?
- ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಸಚಿವ ಸಂಪುಟ ಪುನಾರಚನೆ
- ರಾಜ್ಯದಲ್ಲಿ ಮುಂದುವರೆದಿರುವ ನಾಯಕತ್ವ ಬದಲಾವಣೆ ವಿಚಾರವೂ ಚರ್ಚೆ?
- ರಾಜ್ಯಸಭೆಯ 4 ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಮಾಲೋಚನೆ
- ವಿಧಾನಪರಿಷತ್ತಿನಲ್ಲಿ 2 ತಿಂಗಳಲ್ಲಿ ಖಾಲಿ ಆಗಲಿರುವ 8 ಸ್ಥಾನದ ಬಗ್ಗೆ ಮಾತುಕತೆ
- ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಖಚಿತವಾದರೆ ಡಿಕೆಶಿ ಕೂಡ ದೆಹಲಿಗೆ ರವಾನೆ?
