ರಾಜ್ಯದಲ್ಲಿ ತೀವ್ರ ಚರ್ಚೆಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಅನುಮಾನ ಹಾಗೂ ಆತಂಕದ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಐಆರ್ ಪರಿಣಾಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದು, ಸುಪ್ರೀಂ ಕೋರ್ಟ್ ಕದ ತಟ್ಟುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು:
ರಾಜ್ಯದಲ್ಲಿ ತೀವ್ರ ಚರ್ಚೆಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಅನುಮಾನ ಹಾಗೂ ಆತಂಕದ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಐಆರ್ ಪರಿಣಾಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದು, ಸುಪ್ರೀಂ ಕೋರ್ಟ್ ಕದ ತಟ್ಟುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ.ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್ ಸೃಷ್ಟಿಸಿರುವ ಅವಾಂತರಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು. ರಾಜ್ಯ ಚುನಾವಣಾ ಆಯೋಗವು ಇತ್ತೀಚೆಗಷ್ಟೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವ ಹಿನ್ನೆಲೆಯಲ್ಲಿ ಈ ಅಂಶ ಮುಂದಿಟ್ಟುಕೊಂಡು ಎಸ್‌ಐಆರ್ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ.
ಒಂದು ವೇಳೆ ಎಸ್‌ಐಆರ್‌ಗೆ ಸುಪ್ರೀಂ ಕೋರ್ಟ್ ತಡೆ ನೀಡದಿದ್ದರೂ, ಎಸ್‌ಐಆರ್ ಬಳಿಕದ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹಾಗೂ ಅಂತಿಮ ಪಟ್ಟಿ ಬಗ್ಗೆ ಆಕ್ಷೇಪಣೆಗಳನ್ನು ಆಲಿಸಿಯೇ ಅಂತಿಮಗೊಳಿಸಲು ನಿರ್ದೇಶಿಸುವಂತೆ ಮನವಿ ಮಾಡುವ ಬಗ್ಗೆ ಚರ್ಚಿಸಲಾಗಿದೆ. ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ನೀಡದೆ ಎಸ್‌ಐಆರ್ ಅಂತಿಮಗೊಳಿಸಬಾರದು ಎಂದು ನಿರ್ದೇಶನ ನೀಡುವಂತೆ ಕೋರ್ಟ್‌ಗೆ ಕೋರಲು ಚರ್ಚಿಸಲಾಗಿದೆ.ಶೇ.66 ರವರೆಗೆ ಮತ ಡಿಲೀಟ್ ಭೀತಿ:
ಎಸ್ಐಆರ್‌ಗೆ ಪೂರ್ವ ಸಿದ್ಧತೆಯಾಗಿ ಚುನಾವಣಾ ಆಯೋಗ ‘ಆಧಾರ್’ ಮ್ಯಾಪಿಂಗ್ ಮೂಲಕ ಸಮೀಕ್ಷೆ ನಡೆಸಿದೆ. ಅದರಂತೆ ರಾಜ್ಯದಲ್ಲಿ ಕನಿಷ್ಠ 8ರಿಂದ ಗರಿಷ್ಠ 66ರಷ್ಟು ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಈ ಪ್ರಮಾಣ ಶೇ. 46ರಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಹಾಸನ, ಕೊಡಗು ಮತ್ತಿತರ ಕಡೆ ಪಟ್ಟಿಯಿಂದ ಬಿಟ್ಟುಹೋಗುವ ಮತದಾರರ ಸಂಖ್ಯೆ ಅತಿ ಕಡಿಮೆ ಇದ್ದರೆ, ರಾಯಚೂರಿನಲ್ಲಿ ಅತಿ ಹೆಚ್ಚು ಇದ್ದಾರೆ ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಟ್ಟೆಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಅರ್ಹ ಮತದಾರರು ಹೊರಗುಳಿಯದಂತೆ ಮಾಡಲು ಪಕ್ಷ ಸನ್ನದ್ಧರಾಗಬೇಕು ಎಂದು ಸಂಪುಟದಲ್ಲಿ ಚರ್ಚಿಸಲಾಗಿದೆ.
ಪಕ್ಷದ ವೇದಿಕೆಯಡಿ ನಾಡಿದ್ದು ಮಹತ್ವದ ಚರ್ಚೆ:ಇದರ ಭಾಗವಾಗಿ ಎಸ್‌ಐಆರ್ ಬಗ್ಗೆ ಎಲ್ಲಾ ನಾಯಕರಿಗೂ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳಿಗೆ ಜಾಗೃತಿ ಹಾಗೂ ಸ್ಪಷ್ಟ ಸಂದೇಶ ನೀಡಲು ಮೇ 24ರಂದು ದೇವನಹಳ್ಳಿ ಬಳಿಯ ಸಿಗ್ನೇಚರ್ ಕ್ಲಬ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ವೇದಿಕೆಯಡಿ ಮಹತ್ವದ ಸಭೆ ಕರೆಯಲಾಗಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಶಾಸಕರು, ಸಂಸದರು, ವಿಧಾನಸಭಾ, ಲೋಕಸಭಾ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಿಗೆ ಸಭೆಗೆ ಬುಲಾವ್ ನೀಡಲಾಗಿದೆ.ವಿಶೇಷ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಎಸ್‌ಐಆರ್ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ.
ಮತದಾರರ ಹಕ್ಕಿಗಾಗಿ ಕೋರ್ಟ್ ಮೊರೆ:ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, ‘ಈಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮತದಾರರು ತಮ್ಮ ಹಕ್ಕು ಕಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲೂ ಇದನ್ನು ಕಾಣಬಹುದು. ಹಲವು ರಾಜ್ಯಗಳಿಂದ ಆಕ್ಷೇಪಗಳೂ ವ್ಯಕ್ತವಾಗಿವೆ. ಮತದಾರರ ಹಕ್ಕಿಗಾಗಿ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದರು.ಕೇವಲ ನ್ಯಾಯಾಲಯ ಮಾತ್ರವಲ್ಲದೆ ಇಂತಹ 10-12 ಅಂಶಗಳ ಬಗ್ಗೆ ವಿವರವಾದ ಚರ್ಚೆ ಮಾಡಿದ್ದೇವೆ. ಚರ್ಚೆ ಅಪೂರ್ಣ ಆಗಿದ್ದು, ಸಿಎಂ-ಡಿಸಿಎಂ ಹಾಗೂ ನಮ್ಮ ನಾಯಕರ ಜತೆಗೆ ಚರ್ಚಿಸಿ, ಮೇ 24 ಅಥವಾ 25ರ ಒಳಗೆ ಮುಂದಿನ ಕ್ರಮದ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದೇವೆ ಎಂದು ಪಾಟೀಲ್ ಅವರು ತಿಳಿಸಿದರು.
ನ್ಯಾಯಾಲಯಕ್ಕೆ ಹೋಗಲು ಇದೆ ಅವಕಾಶ:ರಾಜ್ಯದಲ್ಲಿ ಆರಂಭ ಆಗಲಿರುವ ಎಸ್ಐಆರ್ ರಾಜ್ಯದಲ್ಲಿ ಯಾವುದೇ ಪ್ರಜೆಯ ಮತದಾನದ ಹಕ್ಕನ್ನು ಉದ್ದೇಶಪೂರ್ಣವಾಗಿ ಕಸಿಯುವ, ದಮನ ಮಾಡುವ ಕ್ರಿಯೆಗಳು ನಡೆಯದಂತೆ ನೋಡಿಕೊಳ್ಳಬೇಕು. ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯದಿದ್ದರೆ, ನಾವು ನ್ಯಾಯಾಲಯಕ್ಕೆ ಹೋಗುವುದಕ್ಕೂ ಅವಕಾಶಗಳಿವೆ ಎಂದು ಎಚ್.ಕೆ. ಪಾಟೀಲ್ ಹೇಳಿದರು.
ಸಮೀಕ್ಷೆ ವೇಳೆ ಶೇ.6 ಮನೆಗಳಿಗೆ ಬೀಗ?:ರಾಜ್ಯದಲ್ಲಿ ನಡೆದಿರುವ ಜನಗಣತಿ, ಹಿಂದೆ ನಡೆದಿರುವ ಜಾತಿಗಣತಿ ಹಾಗೂ ಮುಂದೆ ಕೇಂದ್ರದಿಂದ ನಡೆಯಲಿರುವ ಜಾತಿ ಗಣತಿಗಳ ಬಗ್ಗೆಯೂ ಪ್ರಸ್ತಾಪವಾಯಿತು.
ರಾಜ್ಯದಲ್ಲಿ ಈಗ ಜನಗಣತಿ ಪ್ರಕ್ರಿಯೆ ನಡೆದಿದ್ದು, ಈ ವೇಳೆ ಶೇಕಡ 6ರಷ್ಟು ಮನೆಗಳಿಗೆ (ಲಾಕ್ಡ್ ಹೌಸಸ್) ಬೀಗ ಹಾಕಿರುವುದು ಕಂಡುಬಂದಿದೆ. ಇದು ಎಸ್‌ಐಆರ್ ಪ್ರಕ್ರಿಯೆಯಲ್ಲೂ ಪ್ರತಿಬಿಂಬಿಸುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಆತಂಕ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.