ಅಮ್ಮತ್ತಿ, ಪಾಲಿಬೆಟ್ಟ: ರಸ್ತೆ ದುರಸ್ತಿ ಆಗ್ರಹಿಸಿ ಆಟೋ ಚಾಲಕರ ಸಂಘ ಪ್ರತಿಭಟನೆ

| Published : Nov 28 2024, 12:36 AM IST

ಸಾರಾಂಶ

ಅಮ್ಮತ್ತಿ ಪಾಲಿಬೆಟ್ಟ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು ರಸ್ತೆ ದುರಸ್ತಿ ಆಗ್ರಹಿಸಿ ಅಮ್ಮತ್ತಿ ಮತ್ತು ಪಾಲಿಬೆಟ್ಟ ಆಟೋ ಮಾಲೀಕರ ಹಾಗೂ ಚಾಲಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಯಿತು. ಅಮ್ಮತ್ತಿ ಮತ್ತು ಪಾಲಿಬೆಟ್ಟದಲ್ಲಿ ಆಟೋ ರಿಕ್ಷಾ ಸಂಚಾರ ಸ್ಥಗಿತಗೊಳಿಸಿ ಏಕ ಕಾಲದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ಕಾಮಗಾರಿಗೆ ಒತ್ತಾಯಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಅಮ್ಮತ್ತಿ ಪಾಲಿಬೆಟ್ಟ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು ರಸ್ತೆ ದುರಸ್ತಿ ಆಗ್ರಹಿಸಿ ಅಮ್ಮತ್ತಿ ಮತ್ತು ಪಾಲಿಬೆಟ್ಟ ಆಟೋ ಮಾಲೀಕರ ಹಾಗೂ ಚಾಲಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಯಿತು. ಅಮ್ಮತ್ತಿ ಮತ್ತು ಪಾಲಿಬೆಟ್ಟದಲ್ಲಿ ಆಟೋ ರಿಕ್ಷಾ ಸಂಚಾರ ಸ್ಥಗಿತಗೊಳಿಸಿ ಏಕ ಕಾಲದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ಕಾಮಗಾರಿಗೆ ಒತ್ತಾಯಿಸಲಾಯಿತು.

ಅಮ್ಮತ್ತಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಆಟೋ ಚಾಲಕರು ರಸ್ತೆ ದುರಸ್ತಿಗೆ ಒತ್ತಾಯಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

ಈ ಸಂದರ್ಭ ಮಾತನಾಡಿದ ಕಾರ್ಮಾಡು ಗ್ರಾಮ ಪಂಚಾಯತಿ ಸದಸ್ಯ ಅಭಿಜಿತ್, ಅಮ್ಮತ್ತಿ-ಪಾಲಿಬೆಟ್ಟ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆಗೆ ಹಾಕಿದ್ದ ಡಾಂಬರು ಕಿತ್ತು ಬಂದಿದ್ದು ರಸ್ತೆ ಪೂರ್ತಿ ಗುಂಡಿಗಳಾಗಿವೆ. ಬಸ್ ಸಂಚಾರ ಕಡಿಮೆಯಿರುವ ಈ ರಸ್ತೆಯಲ್ಲಿ ಸಂಚರಿಸಲು ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಆಟೋ ರಿಕ್ಷಾವನ್ನೆ ಅವಲಂಬಿಸಿದ್ದಾರೆ. ಹಾಗಾಗಿ ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖಾ ಅಭಿಯಂತರ ಲಿಂಗರಾಜು ಅವರನ್ನು ಆಟೋದಲ್ಲಿ ಕುರಿಸಿ ಎಲ್ಲಾ ಆಟೋ ಚಾಲಕರು ತಮ್ಮ ತಮ್ಮ ಆಟೋದಲ್ಲಿ ಮೆರವಣಿಗೆಯ ಮೂಲಕ ತೆರಳಿ ಅಮ್ಮತ್ತಿ ಪಾಲಿಬೆಟ್ಟ ರಸ್ತೆಯಲ್ಲಿ ಕರೆದೊಯ್ದು ರಸ್ತೆಯ ಸಮಸ್ಯೆ ಮನವರಿಕೆ ಮಾಡಿದರು. ರಸ್ತೆ ದುರಸ್ತಿ ಮಾಡುವಂತೆ ಅವರಿಗೆ ಮನವಿ ಸಲ್ಲಿಸಿದರು.

ಪಾಲಿಬೆಟ್ಟ ಆಟೋ ಚಾಲಕರನ್ನು ಸೇರಿಸಿ ಅಮ್ಮತ್ತಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿದರು. ರಸ್ತೆ ಕಾಮಗಾರಿಗೆ ಒಂದು ತಿಂಗಳ ಗಡುವು ನೀಡಿದ ಪ್ರತಿಭಟನಾಕಾರರು ದುರಸ್ತಿ ಆಗದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಅಭಿಯಂತರ ಲಿಂಗರಾಜು, ಈ ಭಾಗದ ರಸ್ತೆ ಸಂಪೂರ್ಣ ಹದೆಗೆಟ್ಟಿರುವುದು ತಿಳಿದ ಹಿನ್ನಲೆಯಲ್ಲಿ ಈಗಾಗಲೇ 4 ಕೋಟಿ ರು. ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಮಸ್ಯೆ ವಿವರವನ್ನು ಸರ್ಕಾರ ಮತ್ತು ಶಾಸಕರ ಗಮನಕ್ಕೆ ತಂದು ಶೀಘ್ರ ಹಣ ಬಿಡುಗಡೆ ಮಾಡಿ ಕಾಮಗಾರಿ ನಡೆಸಬೇಕೆಂದು ತಿಳಿಸಲಾಗುವುದೆಂದರು.

ಈಗ ಸಂಪೂರ್ಣ ಹಾಳದ ಕಡೆ ತಾತ್ಕಾಲಿಕ ಗುಂಡಿ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಅದಕ್ಕೆ ಸಮ್ಮತಿಸದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಗುಂಡಿ ಮುಚ್ಚಿ ಸರ್ಕಾರದ ಹಣ ಪೋಲು ಮಾಡುವುದು ಬೇಡ, ಅದಷ್ಟು ಬೇಗ ಸಂಪೂರ್ಣ ರಸ್ತೆ ಮರು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿದರು.

ಅಮ್ಮತ್ತಿ ಆಟೋ ಚಾಲಕರ ಸಂಘದ ಅಧ್ಯಕ್ಷ ರಿಚರ್ಡ್ ನರೋನ್ಹ, ಉಪಾಧ್ಯಕ್ಷ ಶ್ರೀಜು, ಕಾರ್ಯದರ್ಶಿ ಶಿವರಾಜು, ಸಹ ಕಾರ್ಯದರ್ಶಿ ಇಬ್ರಾಹಿಂ, ಪಾಲಿಬೆಟ್ಟ ಅಟೋ ಚಾಲಕರ ಸಂಘದ ಅಧ್ಯಕ್ಷ ಪವನ್, ಉಪಾಧ್ಯಕ್ಷ ಚಂದ್ರ, ಸಹ ಕಾರ್ಯದರ್ಶಿ ವಿನು, ಖಜಾಂಚಿ ದೂಜಾ, ಗೂಡ್ಸ್ ಆಟೋ ಸಂಘದ ಅಧ್ಯಕ್ಷ ಸಜೀರ್ ಟಿ.ಎ. ಸೇರಿದಂತೆ ಆಟೋ ಚಾಲಕರು, ವಿವಿಧ ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಇದ್ದರು.