ಸಾರಾಂಶ
ಧಾರವಾಡ:
ಹಲವು ಬಾರಿ ನೋಟಿಸ್ ನೀಡಿದರು ಆಸ್ತಿ ಕರ ತುಂಬದ ವಾಣಿಜ್ಯ ಸಂಕೀರ್ಣಗಳ ಮೂಲಭೂತ ಸೌಕರ್ಯಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಮಹಾನಗರ ಪಾಲಿಕೆ ಮುಂದಾಗಿದ್ದು ಸೋಮವಾರದಿಂದ ವಲಯ ಕಚೇರಿ 3ರಲ್ಲಿ ಕಾರ್ಯಾಚರಣೆ ಶುರು ಮಾಡಿದೆ. ಈ ಮೂಲಕ ಹಲವು ವರ್ಷಗಳಿಂದ ತೆರಿಗೆ ಕಟ್ಟದೆ ನುಣುಚಿಕೊಳ್ಳುತ್ತಿದ್ದ ಮಾಲೀಕರಿಗೆ ಬಿಸಿ ಮುಟ್ಟಿಸಿದೆ.ಇಲ್ಲಿನ ವಲಯ ಕಚೇರಿಯಲ್ಲಿ ಅಂದಾಜು ₹ 4.5 ಕೋಟಿ ಆಸ್ತಿ ತೆರಿಗೆ ಬಾಕಿ ಇದ್ದು, ಇದನ್ನು ವಸೂಲು ಮಾಡಲು ಹತ್ತಾರು ಪ್ರಯತ್ನಗಳ ನಂತರ ಅನಿವಾರ್ಯವಾಗಿ ತೆರಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಕಟ್ಟಡಗಳ ಮೂಲಭೂತ ಸೌಕರ್ಯಗಳನ್ನು ತಾತ್ಕಾಲಿಕವಾಗಿ ತಡೆಯಲಾಗುತ್ತಿದೆ. ಸೋಮವಾರ ಗಾಂಧಿಚೌಕ್ ಸೇರಿದಂತೆ ಹಲವು ಕಡೆಗಳಲ್ಲಿ ವಾರ್ಡ್ ಎಂಜಿನಿಯರ್ ಸಹಾಯದೊಂದಿಗೆ ಈ ಕಾರ್ಯ ಶುರುವಾಗಿದೆ.
ನೋಟಿಸ್‌ಗೂ ಕ್ಯಾರೆ ಎನ್ನದ ಮಾಲೀಕರು:ನಗರದಲ್ಲಿ ಕೆಲವು ವಾಣಿಜ್ಯ ಸಂಕೀರ್ಣಗಳು ಹಲವು ವರ್ಷಗಳಿಂದ ಕರ ಬಾಕಿ ಉಳಿಸಿಕೊಂಡಿದ್ದರು. ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು ಕರ ಬಾಕಿ ತುಂಬುವಂತೆ ಹಲವು ಬಾರಿ ಮೌಖಿಕವಾಗಿ ಹಾಗೂ ನೋಟಿಸ್ ಮೂಲಕ ತಿಳಿಸಿದ್ದರೂ ಮಾಲೀಕರು ಮಾತ್ರ ಸ್ಪಂದಿಸಿರಲಿಲ್ಲ. ಕರ ಬಾಕಿ ಸಕಾಲಕ್ಕೆ ಬರದೆ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗಿತ್ತು. ಹೀಗಾಗಿ ಇಲ್ಲಿನ ವಲಯ ಕಚೇರಿ 3ರ ವ್ಯಾಪ್ತಿಯಲ್ಲಿ ಬರುವ ಕರ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಸಂಕೀರ್ಣಗಳ ಪಟ್ಟಿಯನ್ನು ಕೈಯಲ್ಲಿ ಹಿಡಿದು ಸೋಮವಾರ ಕಾರ್ಯಾಚರಣೆಗೆ ಇಳಿದ ಪಾಲಿಕೆ ಅಧಿಕಾರಿಗಳು, ಮೊದಲ ಹಂತದಲ್ಲಿ ಸಂಕೀರ್ಣಕ್ಕೆ ನೀಡಿದ್ದ ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ. ತಕ್ಷಣ ಕರ ಬಾಕಿ ತುಂಬದಿದ್ದರೆ ಮತ್ತಷ್ಟು ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಇದೇ ವೇಳೆ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ವೇಳೆ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಸಹಾಯಕ ಅಭಿಯಂತರ ರಾಜೇಶ್ ಎಸ್.ಪಿ. ಕಂದಾಯ ಅಧಿಕಾರಿ ಜಿ.ಆರ್. ಮಣಕಟ್ಟಿಮಠ, ಕಂದಾಯ ನಿರೀಕ್ಷಕ ಜಿ.ವಿ. ಹಿರೇಮಠ ಹಾಗೂ ಕರ ವಸೂಲಿಗಾರರು ಇದ್ದರು.;Resize=(128,128))
;Resize=(128,128))
;Resize=(128,128))