ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯವಿಶ್ವಕ್ಕೆ ಸನ್ಮಾರ್ಗ ತೋರಿಸಿಕೊಟ್ಟಿರುವ ವ್ಯಕ್ತಿಗಳಲ್ಲಿ ಸ್ವಾಮಿ ವಿವೇಕಾನಂದರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಕೃಷಿಕ ಲಯನ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ನಗರದ ಮಿಮ್ಸ್ ಹೆರಿಗೆ ವಾರ್ಡ್ ಆವರಣದ ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ, ಭೂಮಿ ಬೆಳಗು ಸಾಂಸ್ಕೃತಿಕ ಸಂಘದಿಂದ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತ್ಯೋತ್ಸವ ಹಾಗೂ ವಿವೇಕಾನಂದ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಸ್ವಾಮಿ ವಿವೇಕಾನಂದರ ಹುಟ್ಟಿದ ದಿನವನ್ನು ದೇಶದಲ್ಲಿ ರಾಷ್ಟ್ರೀಯ ಯುವ ದಿನವಾಗಿ, ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧಿ, ರವೀಂದ್ರನಾಥ್ ಟ್ಯಾಗೋರ್, ಕುವೆಂಪು ಅವರು ಸ್ವಾಮಿ ವಿವೇಕಾನಂದರ ದಿವ್ಯ ವಾಣಿಯಿಂದ ಪ್ರಭಾವಿತರಾಗಿ ವಿಶ್ವಚೇತನರಾಗಿದ್ದಾರೆ. ವಿವೇಕಾನಂದರು ಬದುಕಿದ್ದು ೩೯ ವರ್ಷಗಳ ಕಾಲ. ಅಷ್ಟರಲ್ಲಿ ಎರಡು ಬಾರಿ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿದ್ದರು. ಹೊರ ದೇಶಗಳಲ್ಲೂ ಹಿಂದೂ ಧರ್ಮದ ಶ್ರೇಷ್ಠತೆಯ ಸಂದೇಶಗಳನ್ನು ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಇಂದಿನ ಯುವಕರು ಹಾಗೂ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಓದಲು ಹೇಳಬೇಕು. ಅವರನ್ನು ಆದರ್ಶವಾಗಿಟ್ಟುಕೊಂಡವರು ಯುವ ಚೇತನಗಳಾಗಿ ಬೆಳೆಯಲು ಸಾಧ್ಯ. ವಿವೇಕಾನಂದರ ವಾಣಿಯನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಮಿಮ್ಸ್ ಇಸಿಜಿ ವಿಭಾಗದ ತಾಂತ್ರಿಕ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಲ್ಲೇಶ್ ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಿಮ್ಸ್ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ಚ.ಮ.ಉಮೇಶ್‌ಬಾಬು, ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಯೋಗೀಶ್ ಹಾಜರಿದ್ದರು.
ನಿರ್ದಿಷ್ಟ ಗುರಿ ಹೊಂದಿ ಸಾಧಿಸುವ ಛಲ ತಮ್ಮದಾಗಿಸಿಕೊಳ್ಳಿ: ಮುಖ್ಯಶಿಕ್ಷಕ ಶಿವರಾಮುಹಲಗೂರು:ಯುವಜನತೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುವ ಜೊತೆಗೆ ನಿರ್ದಿಷ್ಟ ಗುರಿ ಹೊಂದಿ ಸಕಾಲಕ್ಕೆ ಗುರಿ ಸಾಧಿಸುವ ಛಲ ತಮ್ಮದಾಗಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕ ಶಿವರಾಮು ಕರೆ ನೀಡಿದರು.ವಿದ್ಯಾ ಸಂಸ್ಥೆ ಅವರಣದಲ್ಲಿ ಹಲಗೂರು ಲಯನ್ಸ್ ಕ್ಲಬ್ ಮತ್ತು ಹಲಗೂರು ಪ್ರೌಢಶಾಲೆಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ದಿನಾಚರಣೆ ಮತ್ತು ಹೋಬಳಿ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದರು.ವಿವೇಕಾನಂದರು ತಮ್ಮ ವೈಜ್ಞಾನಿಕ ಬೋಧನೆಗಳಿಂದ ದೇಶಾದ್ಯಂತ ಲಕ್ಷಾಂತರ ಯುವಜನರನ್ನು ಪ್ರೇರೇಪಿಸಿದರು. ಮೌಢ್ಯ, ಕಂದಾಚಾರಗಳನ್ನು ಖಂಡಿಸಿ ಲಕ್ಷಾಂತರ ಯುವಜನರಿಗೆ ಸ್ಪೂರ್ತಿಯಾಗಿದ್ದಾರೆ. ಹೀಗಾಗಿ ಇವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಕರೆಯಲಾಗುತ್ತದೆ ಎಂದರು.ಯುವ ಸಂಪತ್ತನ್ನು ಸದ್ಬಳಕೆ ಮಾಡದೇ ನಮ್ಮ ದೇಶಕ್ಕೆ ಉಳಿಗಾಲವಿಲ್ಲ ಎಂಬ ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರಾದ ವಿದ್ಯಾಶ್ರೀ ಪ್ರಥಮ ಸ್ಥಾನ, ತನುಜಾ ದ್ವಿತೀಯ ಸ್ಥಾನ, ಮಹಾಲಕ್ಷ್ಮಿ ತೃತೀಯ ಸ್ಥಾನ ಪಡೆದುಕೊಂಡರು.ಈ ವೇಳೆ ಮುಖ್ಯ ಶಿಕ್ಷಕ ಶಿವರಾಮು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀನಿವಾಸಾಚಾರಿ, ಖಜಾಂಚಿ ಡಿ.ಎಲ್.ಮಾದೇಗೌಡ, ಸದಸ್ಯರಾದ ಎ.ಎಸ್. ದೇವರಾಜು, ಎನ್.ಕೆ.ಕುಮಾರ್, ಎಚ್.ಎಂ.ಆನಂದ್ ಕುಮಾರ್, ಮನೋಹರ್, ಎನ್.ಎಸ್.ಗುಣೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.