ಅಮೃತ್-2.0 ಯೋಜನೆ ನನ್ನ ಬಹುದಿನಗಳ ಕನಸಾಗಿತ್ತು: ಸಚಿವ ಚಲುವರಾಯಸ್ವಾಮಿ

| Published : Dec 04 2024, 12:34 AM IST

ಅಮೃತ್-2.0 ಯೋಜನೆ ನನ್ನ ಬಹುದಿನಗಳ ಕನಸಾಗಿತ್ತು: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹೇಮಾವತಿ ಜಲಾಶಯದ ನೀರನ್ನು ಪಟ್ಟಣದ ಸೂಳೆಕೆರೆಗೆ ತುಂಬಿಸಿ ಆ ನೀರನ್ನು ಶುದ್ಧೀಕರಿಸಿ ಪಟ್ಟಣದ ಎಲ್ಲಾ ವಾರ್ಡ್‌ಗಳಿಗೂ ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮುಂದಿನ ಎರಡು ವರ್ಷದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಕಾವೇರಿ ನೀರು ಪೂರೈಸಲು ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಟಿ.ಬಿ.ಬಡಾವಣೆಯ ಮುಳಕಟ್ಟೆ ರಸ್ತೆಯಲ್ಲಿ ಸೋಮವಾರ ಅಮೃತ್-2.0 ಯೋಜನೆಯ 36 ಕೋಟಿ ರು.ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಮತ್ತು ಮೀಟರ್ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹೇಮಾವತಿ ಜಲಾಶಯದ ನೀರನ್ನು ಪಟ್ಟಣದ ಸೂಳೆಕೆರೆಗೆ ತುಂಬಿಸಿ ಆ ನೀರನ್ನು ಶುದ್ಧೀಕರಿಸಿ ಪಟ್ಟಣದ ಎಲ್ಲಾ ವಾರ್ಡ್‌ಗಳಿಗೂ ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಈ ಹಿಂದೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ತಾಲೂಕಿನ ಆದಿಚುಂಚನಗಿರಿ ಸೇರಿದಂತೆ 129 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿದ್ದು, ಇನ್ನುಳಿದ 450 ಹಳ್ಳಿಗಳಿಗೂ ಕಾವೇರಿ ನೀರು ಪೂರೈಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದೆ. ಈಗ ಯೋಜನೆ ಅಂತಿಮ ಹಂತ ತಲುಪಿದೆ ಎಂದರು.

ಮುಂದಿನ ಎರಡು ವರ್ಷದಲ್ಲಿ ಬೆಂಗಳೂರಿನ ಜನರು ಕಾವೇರಿ ನೀರನ್ನು ಕುಡಿಯುತ್ತಿರುವಂತೆ ತಾಲೂಕಿನ ಪ್ರತಿ ಹಳ್ಳಿಯ ಜನರೂ ಸಹ ಕಾವೇರಿ ನೀರು ಕುಡಿಯಬಹುದು. ಈ ಯೋಜನೆ ನನ್ನ ಬಹುದಿನಗಳ ಕನಸಾಗಿತ್ತು ಎಂದರು.

ಪಟ್ಟಣ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳು, ಪುರಸಭೆಗೆ ಹೊಸದಾಗಿ ಸೇರ್ಪಡೆಯಾಗಿರುವ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸಲು ಅಮೃತ್ 2.0 ಯೋಜನೆಯಲ್ಲಿ 36 ಕೋಟಿ ರು. ವೆಚ್ಚದ ಕಾಮಗಾರಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪೈಕಿ ಟೆಂಡರ್ ಆಗಿರುವ 27ಕೋಟಿ ರು. ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು, ಏಜೆನ್ಸಿಯವರಿಗೆ ತಾಕೀತು ಮಾಡಿದರು.

ಪೈಪ್‌ಲೈನ್ ಸೇರಿದಂತೆ ಇದರ ಎಲ್ಲಾ ಕಾಮಗಾರಿಯೂ ಗುಣಮಟ್ಟದಿಂದ ಕೂಡಿರಬೇಕು. ಪೈಪ್‌ಲೈನ್‌ ಅಗೆಯುವ ರಸ್ತೆ ಉತ್ತಮ ರೀತಿಯಲ್ಲಿ ಸರಿಪಡಿಸಬೇಕು. ಸಣ್ಣಪುಟ್ಟ ಲೋಪ ಕಂಡುಬಂದರೂ ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಈ ವೇಳೆ ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮಿ ಅಶೋಕ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ತಿಮ್ಮಪ್ಪ, ನರಸಿಂಹ, ಸಂಪತ್ ಕುಮಾರ್, ತಹಸೀಲ್ದಾರ್ ಜಿ.ಆದರ್ಶ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ ಮಹದೇವಪ್ರಭು, ಎಇಇ ಬಾಬುಸಾಬ್ ನಡಾಫ್, ಎಇ ಭಾಗ್ಯ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಎಂಜಿನಿಯರ್ ಕಿರಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಮುಖಂಡರಾದ ಎಸ್.ಬಿ.ರಮೇಶ್, ತ್ಯಾಪೇನಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.