ಸಾರಾಂಶ
ಪ್ರಸ್ತುತ ನಮ್ಮ ದೇಶದಲ್ಲಿ 40 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ 50 ಸಾವಿರದಿಂದ ಒಂದು ಲಕ್ಷ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ತಿಳಿಸಿದರು.
ಮೈಸೂರು ಪ್ರಸ್ತುತ ನಮ್ಮ ದೇಶದಲ್ಲಿ 40 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ 50 ಸಾವಿರದಿಂದ ಒಂದು ಲಕ್ಷ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ನಡೆದ ಕೇಂದ್ರ ರೇಷ್ಮೆ ಮಂಡಳಿಯ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 10 ವರ್ಷಗಳ ಹಿಂದೆ 20 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗುತ್ತಿತ್ತು ಎಂದರು.ಚೀನಾದಲ್ಲಿ ಉತ್ಪಾದನೆ ಹೆಚ್ಚಳ:
ಚೀನಾ ದೇಶವು 50 ಸಾವಿರ ಮೆಟ್ರಿಕ್ ಟನ್ ನಿಂದ 94 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದೆ. ಆದರೆ, ಆ ದೇಶದಲ್ಲಿ ಕೆಲಸಗಾರರ ಕೊರತೆ ಹಾಗೂ ರೇಷ್ಮೆ ಬೆಳೆಯನ್ನು ಬೆಳೆಯುವವರ ಪ್ರಮಾಣ ಕಡಿಮೆ ಆಗಿರುವುದರಿಂದ ಸಹಜವಾಗಿಯೇ ಉತ್ಪಾದನೆ ಕುಂಠಿತವಾಗಲಿದೆ. ಹೀಗಾಗಿ, ನಮ್ಮ ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚು ಮಾಡಿ, ವಿಶ್ವದಲ್ಲಿ ಮೊದಲ ಸ್ಥಾನವನ್ನು ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವದ ಭೂಪಟದಲ್ಲಿ ರೇಷ್ಮೆ ಉತ್ಪಾದನೆಯ ಬಹುಪಾಲನ್ನು ನಾವೇ ಹೊಂದಬೇಕು ಎನ್ನುವ ಆಶಯ ಕೇಂದ್ರ ಸರ್ಕಾರಕ್ಕೆ ಇದೆ. ಈ ನಿಟ್ಟಿನಲ್ಲಿ ಉತ್ಪಾದನೆಯನ್ನು ಹೆಚ್ಚು ಮಾಡುವ ದೃಷ್ಟಿಯಿಂದ ಹಲವಾರು ಅಭಿವೃದ್ಧಿ ಪೂರಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಅವರು ಹೇಳಿದರು.
ರೇಷ್ಮೆ ಎಂದರೇ ಕೇವಲ ಸೀರೆ ಮಾಡಲು ಬಟ್ಟೆ ತಯಾರು ಮಾಡಲು ಬಳಸುವ ಸರಕಾಗಿ ಮಾತ್ರ ಉಳಿದಿಲ್ಲ. ನೂತನ ಫ್ಯಾಷನ್ ವಸ್ತ್ರಗಳನ್ನು ತಯಾರು ಮಾಡಲು ಬಳಸಬಹುದಾಗಿದೆ. ಬ್ಲಾಂಕೆಟ್ ಗಳನ್ನು ತಯಾರಿಸಬಹುದಾಗಿದೆ. ಇದಲ್ಲದೇ ರೇಷ್ಮೆ ನೂಲಿನ ತ್ಯಾಜ್ಯವನ್ನು 3ಡಿ ಪ್ರಿಂಟಿಂಗ್ ನಲ್ಲಿ ಬಳಸಬಹುದಾಗಿದೆ. ಇಂತಹ ಉಪಯೋಗಗಳು ಆಗುವುದರಿಂದ ಬೆಲೆ ಹೆಚ್ಚಳವಾಗುತ್ತದೆ. ಇದು ರೇಷ್ಮೆ ಉತ್ಪಾದನೆಯಲ್ಲಿ ಕ್ರಾಂತಿ ಉಂಟುಮಾಡುತ್ತದೆ ಎಂದರು.ಗುಣಮಟ್ಟದ ರೇಷ್ಮೆಮೊಟ್ಟೆ
ರೇಷ್ಮೆ ಉತ್ಪಾದನೆಗೆ ಬೇಕಾಗಿರುವ ಹಿಪ್ಪುನೇರಳೆ ಬೆಳೆಯನ್ನು ಉತ್ತಮವಾಗಿ ಬೆಳೆಯಲು ಹಾಗೂ ಗುಣಮಟ್ಟದ,ರೋಗಬಾಧೆ ರಹಿತ ಬಿತ್ತನೆಯ ರೇಷ್ಮೆ ಮೊಟ್ಟೆಯನ್ನು ರೈತರಿಗೆ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಜವಳಿ ಉದ್ದಿಮೆಯಲ್ಲಿ ರೇಷ್ಮೆಯ ಉತ್ಪಾದನೆಗಳು ಪ್ರಕಾಶಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು
.ಮೈಸೂರಿನ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗೆ ರೇಷ್ಮೆಯನ್ನು ಪರಿಚಯಿಸಿದರು. ಮೈಸೂರು ರೇಷ್ಮೆ ಸೀರೆಗಳು ಇಂದು ವಿಶ್ವ ಪ್ರಸಿದ್ಧಿ ಪಡೆದಿವೆ. ಇದಕ್ಕೆ ಮೈಸೂರು ರಾಜರು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ. ಇದಕ್ಕಾಗಿ ಅವರನ್ನು ಎಷ್ಟು ನೆನೆದರೂ ಸಾಲದು. ಅಲ್ಲದೇ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ರೇಷ್ಮೆ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ನಾಣ್ಯ, ಪುಸ್ತಕ, ತಳಿ ಬಿಡುಗಡೆಕೇಂದ್ರ ರೇಷ್ಮೆ ಮಂಡಳಿಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ರು. ನಾಣ್ಯ, ಕಾಫಿ ಟೇಬಲ್ ಬುಕ್, ಪೋಸ್ಟಲ್ ಕವರ್, ಉತ್ತಮ ಹೈಬ್ರಿಡ್ ತಳಿಯ ರೇಷ್ಮೆ ತಳಿಗಳನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೆ, ರೇಷ್ಮೆ ಕೃಷಿ ಹಾಗೂ ರೇಷ್ಮೆ ನೇಯ್ಗೆಯಲ್ಲಿ ಸಾಧನೆ ಮಾಡಿರುವ ವಿವಿಧ ರಾಜ್ಯಗಳ ರೈತರು, ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೇಂದ್ರ ಭಾರಿ ಕೈಗಾರಿಕೆಗಳು ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಜವಳಿ ಖಾತೆ ರಾಜ್ಯ ಸಚಿವ ಪಬಿತ್ರ ಮಾರ್ಗರಿಟ, ರಾಜ್ಯ ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ಸಂಸದರಾದ ಡಾ.ಕೆ. ಸುಧಾಕರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನಾರಾಯಣ್ ಕೊರಗಪ್ಪ, ಶಾಸಕ ಜಿ.ಟಿ. ದೇವೇಗೌಡ, ಕೇಂದ್ರ ಜವಳಿ ಇಲಾಖೆಯ ಕಾರ್ಯದರ್ಶಿ ರಚನಾ ಷಾ, ಜಂಟಿ ಕಾರ್ಯದರ್ಶಿ ಪ್ರಜಕ್ತ ಎಲ್. ವರ್ಮ, ರಾಜ್ಯ ರೇಷ್ಮೆ ಇಲಾಖೆಯ ಆಯುಕ್ತ ರಾಜೇಶ್ ಗೌಡ ಮೊದಲಾದವರು ಇದ್ದರು.
ರೇಷ್ಮೆ ಬೆಳೆದರೇ ನಷ್ಟ ಉಂಟಾಗುವುದಿಲ್ಲ ಎಂಬುದು ರೈತರ ಅರಿವಿಗೆ ಬಂದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೇಷ್ಮೆ ಉತ್ಪಾದನೆಯ ಬೆಳವಣಿಗೆಯನ್ನು ದೃಷ್ಟಿಯಲ್ಲಿ ನಾಗರಿಕ ಸೇವಾ ಕೇಂದ್ರ ಆರಂಭಿಸಿ, ಅಲ್ಲಿ ಸಂಪೂರ್ಣ ಮಾಹಿತಿ ನೀಡಿದರೆ ಕೇವಲ ಒಂದು ರಾಜ್ಯಕ್ಕಲ್ಲ, ಇಡೀ ದೇಶದಲ್ಲಿ ರೇಷ್ಮೆ ಉತ್ಪಾದನೆ ಮಾಡುವವರಿಗೆ ಅನುಕೂಲವಾಗುತ್ತದೆ.
- ಗಿರಿರಾಜ್ ಸಿಂಗ್, ಕೇಂದ್ರ ಜವಳಿ ಸಚಿವ--
ರೇಷ್ಮೆಯು ಒಂದು ಉತ್ತಮ ಉದ್ದಿಮೆಯಾಗಿದೆ. ದೇಶದ ರಾಷ್ಟ್ರೀಯ ಆದಾಯದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಇದು ಗ್ರಾಮೀಣ ಜನರ ಹಾಗೂ ಮಹಿಳೆಯರ ನೆಚ್ಚಿನ ಬೆಳೆಯಾಗಿದೆ. ಇದರಿಂದ ಗ್ರಾಮಿಣ ಜನರ ಆದಾಯವನ್ನು ಹೆಚ್ಚಿಸುತ್ತಿದೆ.- ಪಬಿತ್ರ ಮಾರ್ಗರೇಟ್, ಕೇಂದ್ರ ಜವಳಿ ರಾಜ್ಯ ಸಚಿವ----ಮೈಸೂರಿಗೂ ರೇಷ್ಮೆಗೂ ಅವಿನಾಭಾವ ಸಂಬಂಧ ಇದೆ. ವಿಜಯನಗರ ಅರಸರ ಕಾಲದಿಂದ ರೇಷ್ಮೆ ಇಲ್ಲಿ ಪ್ರಚಲಿತದಲ್ಲಿ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೇಷ್ಮೆ ಬೆಳೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ರೇಷ್ಮೆ ಬೆಳೆಗೆ ಪ್ರೋತ್ಸಾಹ ನೀಡಲು ಎಲ್ಲಾ ರೀತಿಯ ಕಾರ್ಯ ನಿರ್ವಹಿಸಲಾಗುವುದು.
- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ
ದೇಶದ 26 ರಾಜ್ಯಗಳಲ್ಲಿ ರೇಷ್ಮೆಯನ್ನು ಬೆಳೆಯುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವುದರಿಂದ ಇಳುವರಿಯೂ ಹೆಚ್ಚಾಗಿದೆ. ಅದೇ ರೀತಿ ಬೆಲೆಯೂ ಹೆಚ್ಚಾಗಿದೆ. ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಯನ್ನು ಸ್ಥಾಪಿಸಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗೆ ಉತ್ತಮವಾದ ಬೆಲೆ ದೋರೆಯುತ್ತಿಲ್ಲ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.
- ಡಾ.ಕೆ. ಸುಧಾಕರ್, ಸಂಸದ, ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ
ರೈತರು ಬೆಳೆದ ರೇಷ್ಮೆಯನ್ನು ನೇಕಕಾರರು ನೇಯ್ಗೆ ಮಾಡಬೇಕಾಗಿತ್ತು. ಆದರೆ ಇಂದು ಶೇ.70 ರಷ್ಟು ಜನರು ತಮ್ಮ ಕೈಮಗ್ಗಗಳನ್ನು ಸ್ಥಗಿತ ಮಾಡಿದ್ದಾರೆ. ಕಾರಣ ನೇಕಾರರ ನೇಯ್ದ ಬಟ್ಟೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ನೇಕಾರರಿಗೆ ಪ್ರೋತ್ಸಾಹ ನೀಡಬೇಕು. 60 ವರ್ಷ ದಾಟಿದ ರೈತರು, ನೇಕಾರರಿಗೆ ಸರ್ಕಾರದಿಂದ ಪಿಂಚಣಿ ನೀಡಬೇಕು
.- ನಾರಾಯಣ ಕೊರಗಪ್ಪ, ರಾಜ್ಯಸಭಾ ಸದಸ್ಯ ಮತ್ತು ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ
ರೇಷ್ಮೆ ಮಹಿಷರನ್ನು ಸಂಹರಿಸು ಚಾಮುಂಡಿಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು, ಮಹಿಷಾಸುರನನ್ನು ಸಂಹಾರ ಮಾಡಿದ ರೀತಿಯಲ್ಲೇ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಇರುವ ಮಹಿಷಾರನ್ನು ಸಂಹಾರ ಮಾಡು ತಾಯೇ ಎಂದು ಪ್ರಾರ್ಥಿಸಿರುವುದಾಗಿ ಕೇಂದ್ರದ ಜವಳಿ ಸಚಿವ ಗಿರಿರಾಜ್ ಸಿಂಗ್ ತಿಳಿಸಿದರು.ಚಾಮುಂಡೇಶ್ವರಿ ತಾಯಿ ಮಹಿಷಾಸುರನನ್ನು ಸಂಹಾರ ಮಾಡಿ ಲೋಕ ಕಲ್ಯಾಣ ಮಾಡಿದ್ದಾಳೆ. ಅದೇ ರೀತಿ ರೇಷ್ಮೆ ಉತ್ಪಾದನೆಯಲ್ಲಿ ಹಲವಾರು ಮಹಿಷಾಸುರರು ಅಡ್ಡಿಯನ್ನು ಉಂಟು ಮಾಡುತ್ತಿದ್ದು, ಅಂತಹವರನ್ನು ಸಂಹಾರ ಮಾಡುವಂತೆ ಬೇಡಿಕೊಂಡಿದ್ದೇನೆ ಎಂದು ಅವರು ಹೇಳಿದರು.