ಅಮೃತ್ ೨.೦ ಯೋಜನೆ ಸಮರೋಪಾದಿಯಲ್ಲಿ ಕೈಗೊಳ್ಳಿ

| Published : Jul 14 2024, 01:40 AM IST

ಸಾರಾಂಶ

ಅಮೃತ್ ೨.೦ಯೋಜನೆ ₹ ೯೨೩೦ ಕೋಟಿ ವೆಚ್ಚದ್ದಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ ₹ ೪೬೧೫ ಕೋಟಿ ಹಾಗೂ ರಾಜ್ಯ ಸರ್ಕಾರವು ₹೩೬೯೨ ಕೋಟಿ ಸಹಯೋಗ ನೀಡಲಿದ್ದು, ಉಳಿದ ₹೯೨೭ ಕೋಟಿ ಹಣವನ್ನು ಸ್ಥಳೀಯ ಸಂಸ್ಥೆಗಳು ಭರಿಸುತ್ತವೆ

ಗಜೇಂದ್ರಗಡ: ಪಟ್ಟಣದ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿವ ನೀರು ಪೂರೈಸುವ ಅಮೃತ ೨.೦ ಯೋಜನೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ರಾಜವಾಡೆ ಮುಂಭಾಗದಲ್ಲಿ ಅಂದಾಜು ₹೩೨೪೨ ಲಕ್ಷ ವೆಚ್ಚದ ಅಮೃತ್-೨.೦ರ ಯೋಜನೆಯಡಿಯಲ್ಲಿ ಕುಡಿವ ನೀರಿನ ವಿತರಣಾ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿಗೆ ಶನಿವಾರ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದರು.

ಅಮೃತ್ ೨.೦ಯೋಜನೆ ₹ ೯೨೩೦ ಕೋಟಿ ವೆಚ್ಚದ್ದಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ ₹ ೪೬೧೫ ಕೋಟಿ ಹಾಗೂ ರಾಜ್ಯ ಸರ್ಕಾರವು ₹೩೬೯೨ ಕೋಟಿ ಸಹಯೋಗ ನೀಡಲಿದ್ದು, ಉಳಿದ ₹೯೨೭ ಕೋಟಿ ಹಣವನ್ನು ಸ್ಥಳೀಯ ಸಂಸ್ಥೆಗಳು ಭರಿಸುತ್ತವೆ. ರಾಜ್ಯದಲ್ಲಿ ಲಕ್ಷಕಿಂತ ಕಡಿಮೆ ಇರುವ ೨೮೭ ಸ್ಥಳೀಯ ಸಂಸ್ಥೆಗಳ ಪೈಕಿ ೨೪೮ ಸಂಸ್ಥೆಗಳ ವ್ಯಾಪ್ತಿಯ ಮನೆಗಳಿಗೆ ನೀರು ಪೂರೈಸಲಾಗುವುದು ಎಂದ ಅವರು, ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದಲ್ಲಿ ಅವಶ್ಯಕವಾಗಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಮತಕ್ಷೇತ್ರದಲ್ಲಿ ರಸ್ತೆ, ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಸರ್ಕಾರ ಕಾರ್ಯ ನಿರ್ವಹಿಸುತ್ತಿರುವ ಪರಿಣಾಮ ಕ್ಷೇತ್ರದ ಜನತೆಗೆ ಅಮೃತ್ ೨.೦ ಯೋಜನೆ ಅಡಿಯಲ್ಲಿ ಗಜೇಂದ್ರಗಡ ಪಟ್ಟಣದ ವ್ಯಾಪ್ತಿಯ ಮನೆಗಳಿಗೆ ನೀರು ಪೂರೈಸಲು ಚಾಲನೆ ನೀಡಲಾಗಿದೆ. ಹೀಗಾಗಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಯೋಜನೆ ಲಾಭವನ್ನು ಜನತೆಗೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಈ ವೇಳೆ ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಪಟ್ಟಣಕ್ಕೆ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಸೌಲಭ್ಯ ದೊರಕಿಸಲು ಸಂಸದ ಬಸವರಾಜ ಬೊಮ್ಮಾಯಿ ಮುಂದಾಗಬೇಕು ಎಂದು ಮನವಿ ನೀಡಿದರು.

ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್, ಸದಸ್ಯರಾದ ಸುಭಾಸ ಮ್ಯಾಗೇರಿ, ಶಿವರಾಜ ಘೋರ್ಪಡೆ, ಮುದಿಯಪ್ಪ ಮುಧೋಳ, ಯಮನೂರ ತಿರಕೋಜಿ, ರೂಪ್ಲೇಶ ರಾಠೋಡ ಹಾಗೂ ಸಿದ್ದಪ್ಪ ಬಂಡಿ, ಬಿ.ಎಂ. ಸಜ್ಜನರ, ದುರಗಪ್ಪ ಮುಧೋಳ, ಶರಣಪ್ಪ ಚಳಗೇರಿ, ಬಿ.ಎಸ್. ಶೀಲವಂತರ, ಉಮೇಶ ರಾಠೋಡ, ಸಿದ್ದಪ್ಪ ಚೋಳಿನ, ಬಸವರಾಜ ಚನ್ನಿ ಸೇರಿದಂತೆ ಇತರರು ಇದ್ದರು.