, ವೇಗವಾಗಿ ಸಾಗುತ್ತಿರುವ ತಾಂತ್ರಿಕ ಮತ್ತು ಆರ್ಥಿಕ ಪ್ರಗತಿಯು ಅಸಮಾನತೆಗಳನ್ನು ಹೆಚ್ಚಿಸುವುದರ ಜೊತೆಗೆ ಡಿಜಿಟಲ್ ಅಂತರವನ್ನು ಕೂಡ ಹೆಚ್ಚಿಸಿದೆ

ಫೋಟೋ- 7ಎಂವೈಎಸ್25----ಕನ್ನಡಪ್ರಭ ವಾರ್ತೆ ಮೈಸೂರು

ಜೀವ ಶಕ್ತಿಯನ್ನು ಪೋಷಿಸುವ ಸಂಪನ್ಮೂಲಗಳು ಹಾಗೂ ಪರಿಸರ ವ್ಯವಸ್ಥೆಯನ್ನು ಒದಗಿಸುವ ನಮ್ಮ ಭೂಮಿಯ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಸುಸ್ಥಿರ ಭವಿಷ್ಯದ ನಿರ್ಮಾತೃಗಳಾಗಿ ಎಂದು ಪದ್ಮಶ್ರೀ ಪುರಸ್ಕೃತ ಹಾಗೂ ಬೆಂಗಳೂರಿನ ನ್ಯಾಷನಲ್ ಇನ್‌ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್ಐಎಎಸ್) ನಿರ್ದೇಶಕ ಡಾ. ಶೈಲೇಶ್ ನಾಯಕ್ ಹೇಳಿದರು.ಅಮೃತ ವಿಶ್ವ ವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ ನಲ್ಲಿ ನಡೆದ 16ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವೇಗವಾಗಿ ಸಾಗುತ್ತಿರುವ ತಾಂತ್ರಿಕ ಮತ್ತು ಆರ್ಥಿಕ ಪ್ರಗತಿಯು ಅಸಮಾನತೆಗಳನ್ನು ಹೆಚ್ಚಿಸುವುದರ ಜೊತೆಗೆ ಡಿಜಿಟಲ್ ಅಂತರವನ್ನು ಕೂಡ ಹೆಚ್ಚಿಸಿದೆ ಎಂದರು.ಈ ಸವಾಲುಗಳನ್ನು ಅವಕಾಶಗಳಾಗಿ ಪರಿಗಣಿಸಬೇಕು. ಅಭಿವೃದ್ಧಿಯನ್ನು ಸುಸ್ಥಿರಗೊಳಿಸುವ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ನವೀನ ಪರಿಹಾರಗಳನ್ನು ರೂಪಿಸಬೇಕು. ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವಂತೆ ಹಾಗೂ ಸವಾಲುಗಳನ್ನು ಎದುರಿಸಲು ಧೈರ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಯಶಸ್ಸಿಗೆ ನಿರಂತರ ಪ್ರಯತ್ನ ಅಗತ್ಯವಾಗಿದ್ದು, ಪರಿಣಾಮಕಾರಿ ನಾಯಕತ್ವವೆಂದರೆ ಇತರರು ಬೆಳೆಯಲು ನೆರವಾಗುವುದರ ಜೊತೆಗೆ ತಮ್ಮ ಸಾಮರ್ಥ್ಯವನ್ನೂ ಪ್ರದರ್ಶಿಸಲು ಸೂಕ್ತ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಎಂದು ಹೇಳಿದರು.ಅಹಮದಾಬಾದ್ ನ ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಶಮದಾಮೃತ ಪ್ರಾಣ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪದವಿ, ಜ್ಞಾನ ಮತ್ತು ವೃತ್ತಿಪರ ಕೌಶಲ್ಯಗಳ ಸಂಪಾದನೆ ಅಲ್ಲ. ಅದಕ್ಕಿಂತ ವಿಶಾಲವಾದದ್ದು. ಯುವಶಕ್ತಿ ಬುದ್ಧಿವಂತಿಕೆ, ಸೃಜನಶೀಲತೆ, ಆದರ್ಶವಾದ ಮತ್ತು ಧೈರ್ಯದಿಂದ ಕೂಡಿದ ಪ್ರಬಲ ಶಕ್ತಿಯಾಗಿದೆ. ಯಾವುದೇ ವಿಚಾರದ ಕುರಿತು ಕ್ರಮ ಕೈಗೊಳ್ಳುವ ಮೊದಲು ಯೋಚಿಸುವುದು, ಪ್ರಶ್ನಿಸುವುದು, ಪರಿಶೀಲಿಸುವುದು ಮತ್ತು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ವಿವೇಚನಾ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.ಅಮೃತ ವಿಶ್ವವಿದ್ಯಾಪೀಠಂ ರಿಜಿಸ್ಟ್ರಾರ್ ಡಾ. ಬಿಪಿನ್ ನಾಯರ್ ಮಾತನಾಡಿ, ಪದವೀಧರರು ಸಮಗ್ರ, ನವೀನ, ಸುಸ್ಥಿರ ಮತ್ತು ಜ್ಞಾನಾಧಾರಿತ ಭವಿ?ದ ನಿರ್ಮಾತೃಗಳಾಗಬೇಕು. ಪದವೀಧರರ ಜ್ಞಾನವು ವಿವೇಕವಾಗಿ, ಯಶಸ್ಸು ವಿನಯವಾಗಿ ರೂಪುಗೊಳ್ಳಲಿ ಮತ್ತು ಅವರ ಸಾಧನೆಗಳು ರಾಷ್ಟ್ರದ ಪ್ರಗತಿ ಹಾಗೂ ಮಾನವಕುಲದ ಕಲ್ಯಾಣಕ್ಕೆ ದಾರಿಯಾಗಲಿ ಎಂದು ಆಶಿಸಿದರು.ಘಟಿಕೋತ್ಸವ ಸಮಾರಂಭದಲ್ಲಿ ಒಟ್ಟು 586 ವಿದ್ಯಾರ್ಥಿಗಳು (ಪಿಎಚ್.ಡಿ, ಪದವಿ ಮತ್ತು ಸ್ನಾತಕೋತ್ತರ ಪದವಿ) ತಮ್ಮ ಪದವಿಗಳನ್ನು ಸ್ವೀಕರಿಸಿದರು. ಇವರಲ್ಲಿ 6 ಪಿಎಚ್.ಡಿ. ಪದವೀಧರರು ಹಾಗೂ 56 ರ್ಯಾಂಕ್ ಮತ್ತು ಪದಕ ವಿಜೇತರು ಸೇರಿದ್ದಾರೆ. ಒಟ್ಟು 14 ಚಿನ್ನದ ಪದಕಗಳು ಮತ್ತು 8 ಬೆಳ್ಳಿ ಪದಕಗಳನ್ನು ಪ್ರದಾನ ಮಾಡಲಾಯಿತು.ಹಿರಿಯ ವಕೀಲ ಓ. ಶಾಮ ಭಟ್, ಉಪ ಕುಲಸಚಿವ ಡಾ. ಪ್ರಶಾಂತ್ ಆರ್. ನಾಯರ್, ಪರೀಕ್ಷಾ ನಿಯಂತ್ರಕ ಡಾ.ಪಿ. ಕೃಷ್ಣ ಕುಮಾರ್, ಡೀನ್ ಪ್ರೊ.ಯು. ಕೃಷ್ಣಕುಮಾರ್, ಅಮೃತ ಮೈಸೂರು ನಿರ್ದೇಶಕ ಅನಂತಾನಂದ ಚೈತನ್ಯ, ಸಹಾಯಕ ಡೀನ್ ಪ್ರೊ. ಶೇಖರ್ ಬಾಬು, ಪ್ರಾಂಶುಪಾಲ ಪ್ರೊ.ಜಿ. ರವೀಂದ್ರನಾಥ್, ಶೈಕ್ಷಣಿಕ ಸಂಯೋಜಕಿ ಡಾ. ರೇಖಾ ಭಟ್ ಮೊದಲಾದವರು ಇದ್ದರು.