ವಿದ್ಯಾರ್ಥಿ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ಮಾದಕ ದ್ರವ್ಯ ವ್ಯಸನ ಯುವ ಜನಾಂಗದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡಿದೆ.
ಶಿರಹಟ್ಟಿ: ವ್ಯಸನ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಶಿರಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಈರಪ್ಪ ರಿತ್ತಿ ತಿಳಿಸಿದರು.ಸ್ಥಳೀಯ ಎಫ್.ಎಂ. ಡಬಾಲಿ ಪದವಿಪೂರ್ವ ಕಾಲೇಜನಲ್ಲಿ ಜಿಲ್ಲಾ ಪೊಲೀಸ್ ಮತ್ತು ಶಿರಹಟ್ಟಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ವ್ಯಸನಮುಕ್ತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ಮಾದಕ ದ್ರವ್ಯ ವ್ಯಸನ ಯುವ ಜನಾಂಗದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡಿದೆ. ಮಾದಕ ದ್ರವ್ಯಗಳಿಂದ ವ್ಯಸನ ಮುಕ್ತರಾಗಿ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವುದು ಬಹಳ ಅಗತ್ಯವಾಗಿದೆ ಎಂದರು.ಶಾಲಾ, ಕಾಲೇಜು ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದಂತೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಯುವಕರು ಧೂಮಪಾನ, ಮದ್ಯಪಾನ, ಮಾದಕ ದ್ರವ್ಯಗಳನ್ನು ಬಿಟ್ಟು ಆರೋಗ್ಯವಂತ ಜೀವನ ಕಟ್ಟಿಕೊಳ್ಳಬೇಕು. ಶಿಕ್ಷಣ, ಕ್ರೀಡೆ, ಯೋಗಾಸನದಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ದೇಶದ ಒಳಿತಿಗಾಗಿ ಕೊಡುಗೆ ನೀಡಬೇಕು ಎಂದರು.
ನ್ಯಾಯವಾದಿ ಮಂಜುನಾಥ ಚವಡಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಬಳಕೆ ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರಿಂದ ಸೈಬರ್ ಅಪರಾಧ ಹೆಚ್ಚಾಗುತ್ತಿದೆ. ಬ್ಯಾಂಕ್ ವಂಚನೆ, ಆನ್ಲೈನ್ ಮೋಸ, ಗುರುತು ಕಳವು, ಹ್ಯಾಕಿಂಗ್ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗ ಮುಂತಾದ ಅಪಾಯಗಳಿಂದ ಕಾಪಾಡಿಕೊಳ್ಳುವುದು ಅವಶ್ಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಮಾತನಾಡಿ, ಮಾದಕ ದ್ರವ್ಯ ವ್ಯಸನ ಯುವ ಜನಾಂಗಕ್ಕೆ ಬಹಳಷ್ಟು ಅಪಾಯಕಾರಿಯಾಗಿದ್ದು, ಅವುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಸೈಬರ್ ಅಪರಾಧಗಳ ಬಗ್ಗೆ ಮಕ್ಕಳು ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸುರಕ್ಷಿತವಾಗಿ ಇಂಟರ್ನೆಟ್ ಬಳಕೆ ಮಾಡಬಹುದು ಎಂದರು. ಉಪನ್ಯಾಸಕರಾದ ಎನ್. ಹನುಮರೆಡ್ಡಿ, ಪಿ.ಎನ್. ಕುಲಕರ್ಣಿ, ಎಂ.ಎಂ. ನದಾಫ್, ಎಫ್.ಎ. ಬಾಬುಖಾನವರ ಮತ್ತು ಬೋಧಕೇತರ ಸಿಬ್ಬಂದಿಯಾದ ಪಿ.ವಿ. ಹೊಸೂರ ಮತ್ತು ನೀಲಕಾಂತ ಕಂಕನವಾಡ ಹಾಗೂ ಪೊಲೀಸ್ ಸಿಬ್ಬಂದಿಯಾದ ಸೋಮಶೇಖರ ರಾಮಗೇರಿ ಮಲ್ಲಿಕಾರ್ಜುನ ವಡ್ಡರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.