ಪರ್ಯಾಯ ಇಂಧನ ಮೂಲ ಅಗತ್ಯ

| Published : Sep 13 2025, 02:06 AM IST

ಸಾರಾಂಶ

ಇಂಧನದ ಆಮದು ವೆಚ್ಚ ಹೆಚ್ಚುತ್ತಿರುವ ಕಾರಣ ಭಾರತ ಸರ್ಕಾರ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಳಕೆಯನ್ನು ಉತ್ತೇಜಿಸುತ್ತಿದೆ

ಕನ್ನಡಪ್ರಭ ವಾರ್ತೆ ಕೆರೂರ

ಇಂಧನದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಪರ್ಯಾಯ ಪರಿಸರ ಸ್ನೇಹಿ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳನ್ನು ಹುಡುಕುವ ಅಗತ್ಯ ಹೆಚ್ಚಾಗಿದೆ. ಇಂಧನದ ಆಮದು ವೆಚ್ಚ ಹೆಚ್ಚುತ್ತಿರುವ ಕಾರಣ ಭಾರತ ಸರ್ಕಾರ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಳಕೆಯನ್ನು ಉತ್ತೇಜಿಸುತ್ತಿದೆ ಎಂದು ಮಾಜಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.

ಪಟ್ಟಣದ ರೈತರಾದ ಸಿದ್ದು ಮತ್ತು ಉಮೇಶ ಕೊಣ್ಣೂರ ಅವರು ಪ್ರಾಯೋಗಿಕವಾಗಿ ಬೆಳೆದ ಸಿಹಿಜೋಳ (ಸ್ವೀಟ್ ಸೋರ್ಗಮ್) ಬೆಳೆ ವೀಕ್ಷಿಸಿ ಅವರು ಮಾತನಾಡಿದರು. ಸ್ವೀಟ್ ಸೋರ್ಗಮ್ ಅತ್ಯಂತ ಭರವಸೆ ಬೆಳೆ ಎನಿಸಿಕೊಂಡಿದೆ. ಸಾಮಾನ್ಯ ಜೋಳಕ್ಕಿಂತ ಎತ್ತರವಾಗಿದ್ದು, ಇದೊಂದು ಧಾನ್ಯ ವರ್ಗದ ಬೆಳೆ ಇದರ ದಂಡದಲ್ಲಿ ಕಬ್ಬಿನಂತೆಯೆ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಇರುತ್ತದೆ. ಈ ಸಕ್ಕರೆ ಎಥನಾಲ್ ಉತ್ಪಾದನೆಗೆ ಸೂಕ್ತವಾಗಿದೆ. ಕಡಿಮೆ ನೀರಿನಿಂದ ಒಣಬೇಸಾಯದಲ್ಲಿಯೂ ಬೆಳೆಯಬಹುದಾಗಿದೆ. ಎಕರೆ ಒಂದಕ್ಕೆ 25 ರಿಂದ 30 ಟನ್ ಇಳುವರಿ ಬರುತ್ತದೆ. ಒಟ್ಟಾರೆ ರೈತರ ಬದುಕನ್ನು ಸಿಹಿಗೊಳಿಸುವ ಸಿಹಿಜೋಳ ತಳಿ ಇದಾಗಿದೆ ಎಂದು ತಿಳಿಸಿದರು.

ಈ ಬೆಳೆ ಕಡಿಮೆ ಅವಧಿಯಲ್ಲಿ ಕಡಿಮೆ ವೆಚ್ಚದಲ್ಲಿ ಬೆಳೆದು ರೈತರಿಗೆ ಲಾಭದಾಯಕ ಬೆಳೆಯಾಗಲಿದೆ. ಈ ಸ್ವೀಟ್ ಸೋರ್ಗಮ್‌ ಅನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ಮೂಲಕ ರೈತರ ಆದಾಯ ದ್ವಿಗುಣವಾಗುವುದು. ಈ ಬೆಳೆಯಿಂದ ದೊರಕುವ ಎಥೆನಾಲ್‌ ಪೆಟ್ರೋಲ್‌ಗೆ ಮಿಶ್ರಣವಾಗಿ ಬಳಸಲಾಗುತ್ತದೆ. ಇದರಿಂದ ವಾತಾವರಣದ ಮಾಲಿನ್ಯ ಕಡಿಮೆಯಾಗುತ್ತದೆ. ಫಾಸಿಲ್ ಇಂಧನದ ಅವಲಂಬನೆ ಕಡಿಮೆಯಾಗುತ್ತದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಬರುವ ಬಯೋ ಗ್ಯಾಸ್‌ಅನ್ನು ವಿದ್ಯುತ್ ಉತ್ಪಾದನೆಗೆ ಜೈವಿಕ ಗೊಬ್ಬರಕ್ಕೆ ಬಳಸಬಹುದು. ಇದರಿಂದ ಜಿರೋ ವೆಸ್ಟ್‌ ಮಾದರಿಯ ಕೈಗಾರಿಕೆ ಸಾಧ್ಯವಾಗುತ್ತದೆ. ಈ ಭಾಗದಲ್ಲಿ 500 ಎಕರೆ ಪ್ರಾಯೋಗಿಕವಾಗಿ ಬಿತ್ತನೆಯಾಗಿದ್ದು ಅಧಿಕ ಇಳುವರಿ ಕೂಡಾ ಬರುವ ಭರವಸೆ ಮೂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾರತ ಪೆಟ್ರೋಲಿಯಂ ಕಾರ್ಪೋರೆಷನ್ ಮ್ಯಾನೇಜರ್‌ ಮತ್ತು ಆರ್.ಡಿ ಪರಮೇಶ್ವರ ಪಾಟೀಲ, ನ್ಯಾಶನಲ್ ಶುಗರ್‌ ಇನ್‌ಸ್ಟಿಟ್ಯೂಟ್‌ ಕಾನಪೂರದ ರಾಷ್ಟ್ರೀಯ ನಿರ್ದೇಶಕರಾದ ಡಾ.ಸೀಮಾ ಪರೋಹ ವಿಜ್ಞಾನಿಗಳಾದ ಡಾ.ಅನಂತಲಕ್ಷ್ಮೀ, ಡಾ.ಲೋಕೇಶ ಬಾಬರ, ಅಡ್ಟಂಟ್‌ ಸೀಡ್ ಕಂಪನಿಯ ಆರ್.ಡಿ ಡಾ.ಉಲ್ಲಾಸ ಟೋನಾಪಿ, ನಿರಾಣಿ ಶುಗರ್ಸ್‌ನ ಎನ್.ವಿ.ಪಡಿಯಾರ, ಹೂವಪ್ಪ ರಾಠೋಡ, ಮಹಾಂತೇಶ ಮೆಣಸಗಿ, ಪಿ.ಆರ್.ಗೌಡರ, ಸಂಗಮೇಶ ನಿರಾಣಿ, ರಂಗನಾಥ ದೇಸಾಯಿ, ಹನಮಂತ ಗೋಡಿ, ಸಂಗಯ್ಯ ಸರಗನಾಚಾರಿ, ಬಸವರಾಜ ಬನ್ನಿದಿನ್ನಿ ಸೇರಿ ಅನೇಕರಿದ್ದರು.