ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಳೆದ 20 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಹರಿಸದ ಶಾಸಕ ಜೆ.ಟಿ.ಪಾಟೀಲ, ಮಸಾಜ್‌ನಲ್ಲಿಯೇ ಕಾಲ ಕಳೆದಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಗಂಭೀರ ಆರೋಪ ಮಾಡಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಳಗಿ ಕ್ಷೇತ್ರಕ್ಕೆ ಶಾಸಕ ಜೆ.ಟಿ.ಪಾಟೀಲ ಕೊಡುಗೆ ಶೂನ್ಯ. ತಮ್ಮ ಅಧಿಕಾರ ಅವಧಿಯಲ್ಲಿ ಏನು ಮಾಡದೇ ಆರಾಮದಾಯಕ ಜೀವನ ಕಳೆದಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಲಿ. ನನ್ನ ಅವಧಿಯಲ್ಲಿ ಆಗಿರುವ ಕೆಲಸಗಳ ಕುರಿತು ಈಗಾಗಲೇ ದಾಖಲೆ ಪುಸ್ತಕವನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಮುರುಗೇಶ ನಿರಾಣಿ ಶಾಸಕರಾಗುವ ಮುನ್ನವೇ ಸಕ್ಕರೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ ಆರಂಭಿಸಿದ್ದಾರೆ. ದಿನದ 24 ತಾಸು ಕೆಲಸ ಮಾಡಿ ಸಂಸ್ಥೆಗಳನ್ನು ಹುಟ್ಟಿ ಹಾಕಿದ್ದಾರೆ. ಹಾಗಾಗಿ ಶಾಸಕ ಜೆ.ಟಿ.ಪಾಟೀಲರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವ ಭ್ರಮೆಯೇ ಇಲ್ಲ. ನಮ್ಮಂತೆ ಅವರು ಕೆಲಸ ಮಾಡಲಿ, ಅದು ಬಿಟ್ಟು ಆರಾಮದಾಯಕ ಜೀವನ ಕಳೆದು ಕ್ಷೇತ್ರಕ್ಕೂ ಏನೂ ಮಾಡಿಲ್ಲ ಎಂದು ದೂರಿದರು.ಇದುವರೆಗೂ ನಾನು ಅವರ ಬಗ್ಗೆ ಅನಗತ್ಯ ಆರೋಪ ಮಾಡಿಲ್ಲ. ಅವರು ಪ್ರತಿ ಚುನಾವಣೆಯಲ್ಲಿ ಇದೇ ತಮ್ಮ ಕೊನೆಯ ಚುನಾವಣೆ ಎಂದು ಹೇಳುತ್ತಾ ಬಂದಿದ್ದಾರೆ. ಇದೀಗ 2028ಕ್ಕೆ ನಾನೇ ಅಭ್ಯರ್ಥಿ ಎಂದು ಹೇಳಿದ್ದಾರೆ. ಇದುವರೆಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅವರು ಬೇರೆಯವರಿಗೆ ಕ್ಷೇತ್ರ ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು.
ಇನ್ನೊಂದು ಸಲ ಚುನಾವಣೆಗೆ ನಿಲ್ಲಬೇಕೆಂಬ ಆಶಯ ಹೊಂದಿರುವ ಅವರು ತಮ್ಮ ಹೆಸರು ಮುಂದು ಮಾಡಿಕೊಂಡು ಮುಂದೆಯೂ ನಾನೇ ನಿರಾಣಿ ವಿರುದ್ಧ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೊಂದು ರಾಜಕೀಯ ತಂತ್ರಗಾರಿಕೆ ಹೊರತು ಮತ್ತೆನಲ್ಲ. ಅನಗತ್ಯ ಟೀಕೆ ಆರೋಪಗಳಲ್ಲಿ ಕಾಲ ಕಳೆಯುವುದನ್ನು ಬಿಡಲಿ. ಅಭಿವೃದ್ಧಿ ಕೆಲಸಕ್ಕೆ ಮುಂದಾಗಲಿ. ಅದಕ್ಕೆ ಬೆಂಬಲಿಸುತ್ತೇವೆ. ಅದು ಬಿಟ್ಟು ಟೀಕೆಗಳನ್ನು ಮುಂದುವರಿಸಿದರೆ ತಾವು ಅದಕ್ಕೆ ಸರಿಯಾದ ತಿರುಗೇಟು ನೀಡುವುದಾಗಿ ಎಚ್ಚರಿಕೆ ನೀಡಿದರು.ವರ್ಷಕ್ಕೆ ಒಂದು ಬಾರಿ ಬರುವ ಗಣೇಶ ಉತ್ಸವದಲ್ಲಿ ಅದ್ಧೂರಿಯಾಗಿ ಗಣೇಶ ವಿಸರ್ಜನೆಗೆ ಅವಕಾಶ ಮಾಡಬೇಕು. ಅದು ಬಿಟ್ಟು ಅನಗತ್ಯ ನಿರ್ಬಂಧ ಹಾಕಿ ಗೊಂದಲ ಉಂಟು ಮಾಡುವುದು ಸರಿಯಲ್ಲ. ಉತ್ಸವ ತನ್ನ ಪಾಡಿಗೆ ತಾನು ನಡೆದರೆ ಯಾವುದೇ ಗೊಂದಲ ಗಲಾಟೆಗಳು ಇರುವುದಿಲ್ಲ ಎಂದರು. ಜಿಲ್ಲೆಯಲ್ಲಿ ಎಂಆರ್‌ಎನ್ ಸಂಸ್ಥೆಯಡಿ 500 ಎಕರೆ ಜಮೀನಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶ ಹೊಂದಿದ್ದು, ಈ ಸಂಬಂಧ ಪ್ರಯತ್ನಗಳು ನಡೆದಿವೆ. ಸರ್ಕಾರದಿಂದ ಅನುಮತಿ ಸಿಕ್ಕಲ್ಲಿ ಸಂಶೋಧನಾ ಕೇಂದ್ರ ಶೀಘ್ರ ಸ್ಥಾಪನೆಗೊಳ್ಳಲಿದೆ. ಇಲ್ಲಿ ರೈತರ ಆದಾಯ ದ್ವಿಗುಣ ಗೊಳಿಸುವ ಬೀಜಗಳ ಉತ್ಪಾದನೆ ಕುರಿತು ಅಧ್ಯಯನ ಸಂಸ್ಥೆ ನಡೆಯಲಿದೆ ಎಂದರು.